ಬಾಳೆಹೊನ್ನೂರಲ್ಲಿ ಚುರುಕುಗೊಂಡ ಭತ್ತದ ಕೃಷಿ ಚಟುವಟಿಕೆ

KannadaprabhaNewsNetwork |  
Published : Jun 20, 2025, 12:34 AM IST
೧೯ಬಿಹೆಚ್‌ಆರ್ ೨: ಬಾಳೆಹೊನ್ನೂರು ಸುತ್ತಮುತ್ತ ಹದವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಖಾಂಡ್ಯ ಹೋಬಳಿಯ ಬಿದರೆ ಗ್ರಾಮದಲ್ಲಿ ರೈತರೋರ್ವರು ಟ್ರಿಲ್ಲರ್ ಮೂಲಕ ಭತ್ತದ ಕೃಷಿ ಚಟುವಟಿಕೆಗೆ ಉಳುಮೆ ಕಾರ್ಯ ನಡೆಸುತ್ತಿರುವುದು. | Kannada Prabha

ಸಾರಾಂಶ

ಬಾಳೆಹೊನ್ನೂರುಬಾಳೆಹೊನ್ನೂರು ಹಾಗೂ ಖಾಂಡ್ಯ ಹೋಬಳಿಯಾದ್ಯಂತ ಕಳೆದ ಒಂದು ವಾರದಿಂದ ಮುಂಗಾರು ಬಿರುಸಾಗಿ ಬರುತ್ತಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ಭರದಿಂದ ನಡೆಸುತ್ತಿದ್ದಾರೆ.

- ಕಳೆದ ಒಂದು ವಾರದಿಂದ ಉತ್ತಮ ಪ್ರಮಾಣದಲ್ಲಿ ಮಳೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಬಾಳೆಹೊನ್ನೂರು ಹಾಗೂ ಖಾಂಡ್ಯ ಹೋಬಳಿಯಾದ್ಯಂತ ಕಳೆದ ಒಂದು ವಾರದಿಂದ ಮುಂಗಾರು ಬಿರುಸಾಗಿ ಬರುತ್ತಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ಭರದಿಂದ ನಡೆಸುತ್ತಿದ್ದಾರೆ.ನಿರೀಕ್ಷೆಯಂತೆ ಈ ಬಾರಿ ಸಕಾಲಕ್ಕೆ ಮುಂಗಾರು ಆರಂಭಗೊಂಡಿದ್ದು, ಕಳೆದ ಒಂದು ವಾರದಿಂದ ಉತ್ತಮ ಪ್ರಮಾಣದಲ್ಲಿ ಮಳೆ ಬರುತ್ತಿದೆ. ತಣ್ಣನೆ ಗಾಳಿ, ಮಳೆ ಕಾರಣ ಮನೆ ಮೂಲೆ ಸೇರಿದ್ದ ಛತ್ರಿ, ಮಫ್ಲರ್, ಟೋಪಿಗಳು ಹೊರುತ್ತಿವೆ.ಕೃಷಿಕರು ತಮ್ಮ ಕೃಷಿ ಜಮೀನಿನಲ್ಲಿ ವಿವಿಧ ಕಾರ್ಯಗಳನ್ನು ಕೈಗೊಂಡಿದ್ದು, ಸುತ್ತಮುತ್ತಲಿನ ಭತ್ತದ ಬೆಳೆಗಾರರು ದನದ ಸಗಣಿ ಗೊಬ್ಬರವನ್ನು ಗದ್ದೆಗೆ ಸಾಗಿಸಿ ಪ್ರಥಮ ಹಂತದ ಉಳುಮೆ ಕಾರ್ಯ ಮಾಡುತ್ತಿದ್ದಾರೆ. ಪ್ರತಿ ವರ್ಷದಂತೆ ಕೂಲಿ ಕಾರ್ಮಿಕರ ಕೊರತೆಯಿಂದ ಎಲ್ಲೆಡೆ ಉಳುಮೆ ಕಾರ್ಯವನ್ನು ಟ್ರ್ಯಾಕ್ಟರ್ ಹಾಗೂ ಟಿಲ್ಲರ್‌ಗಳ ಮುಖಾಂತರ ಮಾಡಿಸುತ್ತಿದ್ದಾರೆ. ಭತ್ತದ ಸಸಿ ನಾಟಿಗೆ ಅಗತ್ಯವಾದ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಕೊಂಡು ಭತ್ತದ ಸಸಿ ಮಡಿ ತಯಾರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಭತ್ತದ ಕೃಷಿ ಮಾಡುವ ರೈತರ ಪಾಡು ಇತ್ತೀಚಿನ ದಿನಗಳಲ್ಲಿ ಸಂಕಷ್ಟದಲ್ಲಿದ್ದು, ಕಾರ್ಮಿಕರ ಕೊರತೆ ತೀವ್ರವಾಗಿದೆ. ಭತ್ತದ ನಾಟಿ ಸಹ ಯಂತ್ರಗಳ ಮೂಲಕ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಿಂದಲೇ ಕೆಲ ರೈತರು ಭತ್ತದ ಕೃಷಿಯಿಂದ ವಿಮುಖ ರಾಗುತ್ತಿದ್ದಾರೆ ಎನ್ನುವುದು ಮಲೆನಾಡಿಗರ ಮಾತು.ಮಳೆ ಆರಂಭಗೊಂಡ ಹಿನ್ನೆಲೆಯಲ್ಲಿ ಅಡಕೆ, ಕಾಫಿ ಬೆಳೆಗಾರರೂ ಸಹ ಮುಂಗಾರಿನ ಸಮಯದಲ್ಲಿ ತೋಟಕ್ಕೆ ಉತ್ತಮ ಗುಣಮಟ್ಟದ ಗೊಬ್ಬರ ನೀಡಲು ಸಹಕಾರ ಸಂಘಗಳಲ್ಲಿ ವಿವಿಧ ಗೊಬ್ಬರ, ಔಷಧಿಗಳ ಖರೀದಿಗೆ ಮುಗಿಬಿದ್ದಿದ್ದು, ಕಾರ್ಮಿಕರನ್ನು ಕರೆತಂದು ತೋಟಕ್ಕೆ ಗೊಬ್ಬರ ಹಾಕುವಲ್ಲಿ ನಿರತರಾಗಿದ್ದಾರೆ. ಸುತ್ತಮುತ್ತಲಿನ ಎಲ್ಲೆಡೆ ಹದವಾಗಿ ಸಾಧಾರಣ ಪ್ರಮಾಣದಲ್ಲಿ ಮಳೆ ಬೀಳುತ್ತಿರುವ ಕಾರಣ ಹಳ್ಳಕೊಳ್ಳಗಳಲ್ಲಿ ನೀರು ಹರಿಯ ತೊಡಗಿದೆ. ಅದಲ್ಲದೇ ಸಂಪೂರ್ಣ ತಳ ಕಂಡಿದ್ದ ಪಟ್ಟಣಕ್ಕೆ ಪ್ರಮುಖವಾಗಿ ನೀರೊದಗಿಸುವ ಭದ್ರಾನದಿ ನೀರಿನ ಮಟ್ಟ ಏರಿಕೆಯಾಗಿದೆ. ಒಟ್ಟಾರೆ ಈ ಬಾರಿಯೂ ಸಹ ರೈತರು ಸೇರಿದಂತೆ ಎಲ್ಲಾ ವರ್ಗದವರು ಉತ್ತಮ ಮಳೆ ನಿರೀಕ್ಷೆಯಲ್ಲಿದ್ದಾರೆ. ಆದರೆ ಮಳೆ ಹೇಗೆ ಬರಲಿದೆ ಎಂದು ಕಾದುನೋಡಬೇಕಿದೆ.-- ಕೋಟ್ ೧--ಇಂದಿನ ದಿನಗಳಲ್ಲಿ ಕೃಷಿ ಚಟುವಟಿಕೆ ಉಳಿದಿದೆ ಅಂದರೆ ಹಳ್ಳಿಗಳಲ್ಲಿ ಮಾತ್ರ. ಅನ್ನದಲ್ಲಿ ರೈತನ ಶ್ರಮ ಬೆವರಿನ ಹನಿ ಎಲ್ಲವೂ ಅಡಗಿರುತ್ತದೆ. ಇಂದಿನ ಕಾಲಘಟ್ಟದಲ್ಲಿ ರೈತ ದೇಶದ ಬೆನ್ನೆಲುಬು ಎಂಬ ನಾಣ್ಣುಡಿಯನ್ನು ಬದಿಗೊತ್ತಿ ಅಂತಾರಾಷ್ಟ್ರೀಯ ಕಂಪೆನಿಗಳಿಗೆ ಜನರು ಮಾರು ಹೋಗಿದ್ದಾರೆ. ರೈತ ಹಾಗೂ ರೈತನ ಮಕ್ಕಳಿಗೆ ಮದುವೆಗೆ ಹುಡುಗಿ ಕೊಡದೇ ಇರುವ ಸ್ಥಿತಿ ಬಂದೊದಗಿದೆ. ತಿನ್ನಲು ಅನ್ನ ಬೇಕು ರೈತನ ಮಕ್ಕಳು ಬೇಡ ಎನ್ನುವ ಸ್ಥಿತಿಗೆ ತಲುಪಿರುವುದು ವಿಶಾದನೀಯ. ಮದುವೆಗೆ ಹುಡುಗಿ ಕೇಳಲು ಹೋದರೆ ಬೆಂಗಳೂರಿನಲ್ಲಿ ಕೆಲಸದಲ್ಲಿ ಇದ್ದಾನಾ ಎನ್ನುವ ಕಾಲ ಬಂದಿದೆ. ರೈತ ಬೆಳೆದ ಅಕ್ಕಿ ಬೆಂಗಳೂರಿನಲ್ಲಿ ಉತ್ಪತ್ತಿಯಾಗುವುದಿಲ್ಲ. ಹಳ್ಳಿಗಳಲ್ಲಿ ಮಾತ್ರ ಸಿಗುವುದು ಎನ್ನುವುದು ಅರ್ಥೈಸಿಕೊಳ್ಳಬೇಕಿದೆ.- ವಿ.ಸಿ.ರಘುಪತಿ ಬಿದರೆ, ಕೃಷಿಕ೧೯ಬಿಹೆಚ್‌ಆರ್ ೨: ಬಾಳೆಹೊನ್ನೂರು ಸುತ್ತಮುತ್ತ ಹದವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಖಾಂಡ್ಯ ಹೋಬಳಿಯ ಬಿದರೆ ಗ್ರಾಮದಲ್ಲಿ ರೈತರೋರ್ವರು ಟ್ರಿಲ್ಲರ್ ಮೂಲಕ ಭತ್ತದ ಕೃಷಿ ಚಟುವಟಿಕೆಗೆ ಉಳುಮೆ ಕಾರ್ಯ ನಡೆಸುತ್ತಿರುವುದು.

೧೯ಬಿಹೆಚ್‌ಆರ್ ೩: ರಘುಪತಿ (ಕೃಷಿಕ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ