ಬೃಹತ್ ಯೋಗ ಪ್ರದರ್ಶನ । 3500 ಜನರು ಭಾಗಿ । ಸಚಿವ ಎಸ್ಸೆಸ್ಸೆಂ ಉದ್ಘಾಟನೆ
ಕನ್ನಡಪ್ರಭ ವಾರ್ತೆ ದಾವಣಗೆರೆ‘ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ’ ಎಂಬ ಘೋಷವಾಕ್ಯದೊಂದಿಗೆ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಬೃಹತ್ ಯೋಗ ಪ್ರದರ್ಶನವನ್ನು ಜೂ.21ರಂದು ನಗರದ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 5.30ರಿಂದ 6ರವರೆಗೆ ಬ್ರಹ್ಮಕುಮಾರಿ ಸಂಸ್ಥೆಯಿಂದ ಧ್ಯಾನ, ಬೆಳಿಗ್ಗೆ 6ರಿಂದ 6.20ರ ವರೆಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಅಷ್ಟ ನಮಸ್ಕಾರ ಹಾಗೂ 7ರಿಂದ ಉದ್ಘಾಟನೆಯ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.ನಂತರ ಸಾಮಾನ್ಯ ಯೋಗ ಶಿಷ್ಟಾಚಾರ ಮಾಡಲಾಗುವುದು. ಯೋಗ ದಿನಾಚರಣೆಯಲ್ಲಿ ನಗರದ ಶಾಲಾ-ಕಾಲೇಜು-ಹಾಸ್ಟೆಲ್ ವಿದ್ಯಾರ್ಥಿಗಳು, ಎಲ್ಲಾ ಯೋಗ ಸಂಸ್ಥೆಗಳು, ಯೋಗಾಸಕ್ತರು, ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿ 3500ಕ್ಕೂ ಅದಿಕ ಜನರು ಪಾಲ್ಗೊಳ್ಳುವರು. ಜಿಲ್ಲಾದ್ಯಂತ 35 ಶಾಲಾ-ಕಾಲೇಜುಗಳಲ್ಲಿ ಪ್ರತಿನಿತ್ಯ ಯೋಗಾಭ್ಯಾಸ ನಡೆಸಲಾಗುತ್ತಿದೆ ಎಂದು ಹೇಳಿದರು.
ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸುವರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ವಿಪ ಸದಸ್ಯರಾದ ಎಸ್.ಎಸ್.ಭೋಜೇಗೌಡ, ಡಿ.ಎಸ್.ಅರುಣ, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ, ಕೆ.ಅಬ್ದುಲ್ ಜಬ್ಬಾರ್, ಡಿ.ಟಿ.ಶ್ರೀನಿವಾಸ, ಶಾಸಕರಾದ ಕೆ.ಎಸ್.ಬಸವಂತಪ್ಪ, ಬಸವರಾಜ ವಿ.ಶಿವಗಂಗಾ, ಮೊದಲಾದವರು ಭಾಗವಹಿಸುವರು ಎಂದು ತಿಳಿಸಿದರು.ಯೋಗದಲ್ಲಿ ಯೋಗಾ ಪಾಥ್, ಯೋಗ ಸಂಗಮದಿಂದ ಯೋಗ ತರಬೇತಿ ನೀಡಲಾಗುವುದು. ಯೋಗ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕ ಒತ್ತಡ ಕಡಿಮೆ ಮಾಡುವುದರ ಜೊತೆಗೆ ಉತ್ತಮ ಆರೋಗ್ಯ ವೃದ್ಧಿಸುತ್ತದೆ. ಜಿಲ್ಲಾದ್ಯಂತ 36 ಶಾಲಾ ಕಾಲೇಜುಗಳಲ್ಲಿ ನಿತ್ಯ ಯೋಗಾಭ್ಯಾಸ ನಡೆಸಲಾಗುತ್ತಿದೆ ಎಂದರು.
ಜಿಪಂ ನೂತನ ಸಿಇಒ ಗಿಟ್ಟೆ ಮಾಧವ ವಿಠ್ಠಲರಾವ್, ಪಾಲಿಕೆ ಆಯುಕ್ತೆ ರೇಣುಕಾ, ನಗರಾಭಿವೃದ್ಧಿ ಯೋಜನಾ ನಿರ್ದೇಶಖ ಮಹಾಂತೇಶ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಯೋಗೇಂದ್ರ ಕುಮಾರ ಇತರರು ಇದ್ದರು.ರಸ್ತೆ ಅಪಘಾತ: ಸಾವಿನ ಪ್ರಮಾಣ ಶೇ.30 ಇಳಿಕೆ
ಹಿಟ್ ಅಂಡ್ ರನ್ ಪ್ರಕರಣಗಳು ಇತ್ತೀಚೆಗೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, 2023ರಲ್ಲಿ 324 ಜನ, 2024ರಲ್ಲಿ 260 ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, 2023ಕ್ಕೆ ಹೋಲಿಸಿದರೆ 2024ರಲ್ಲಿ ಸಾವಿನ ಪ್ರಮಾಣ ಶೇ.30ರಷ್ಟು ಕಡಿಮೆಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.ನಗರ, ಜಿಲ್ಲಾದ್ಯಂತ ರಸ್ತೆ ಅಪಘಾತ ಪ್ರಕರಣ ಕಡಿಮೆ ಮಾಡಲು, ಸಾವಿನ ಪ್ರಮಾಣ ತಡೆಯುವ ಉದ್ದೇಶದಿಂದ ಸಂಚಾರಿ ನಿಯಮಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ ಎಂದರು.
ಮದ್ಯ, ಡ್ರಗ್ಸ್ ಹಾವಳಿಗೆ ಕಡಿವಾಣದಾವಣಗೆರೆ ಮಹಾ ನಗರದ ಪ್ರಮುಖ ರಸ್ತೆಗಳಲ್ಲಿ ಸಂಜೆಯಾದರೆ ಮದ್ಯ, ಮಾದಕ ವ್ಯಸನಿಗಳು ಹಾವಳಿ ಹೆಚ್ಚಾಗುತ್ತಿದ್ದು, ಹದಡಿ ರಸ್ತೆಯ ವಿದ್ಯಾರ್ಥಿ ಭವನದಿಂದ ಬಾಪೂಜಿ ಆಸ್ಪತ್ರೆವರೆಗೆ ಕೆಲವು ಹೋಟೆಲ್‌ಗಳಿಂದ ವಾಹನ ಸಂಚಾರ, ಜನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ದಾವಣಗೆರೆ ಮಹಾ ನಗರದಲ್ಲಿ ಈಗಾಗಲೇ ಜಲಸಿರಿ ಯೋಜನೆ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇನ್ನುಳಿದ ಕಾಮಗಾರಿ 2ರಿಂದ 3 ತಿಂಗಳ ಒಳಗಾಗಿ ಪೂರ್ಣಗೊಳ್ಳುವುದಾಗಿ ಪಾಲಿಕೆ ಆಯುಕ್ತರು ಹೇಳಿದ್ದಾರೆ. ಎಲ್ಲಾ ಬಡಾವಣೆಗಳಿಗೂ ನಿರಂತರ ಕುಡಿಯುವ ನೀರನ್ನು ಜಲಸಿರಿಯಡಿ ಪೂರೈಸಲಾಗುವುದು.ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ.