ಜೋಕರ್ ಆಗಲಿಲ್ಲವೆಂದು ಎಚ್‌ಡಿಕೆಗೆ ಹತಾಶೆ: ಕೆ.ಎಂ.ಉದಯ್

KannadaprabhaNewsNetwork | Published : Nov 26, 2023 1:15 AM

ಸಾರಾಂಶ

ಕಳೆದ ಚುನಾವಣೆ ಸಮಯದಲ್ಲಿ ಕುಮಾರಸ್ವಾಮಿ ಜೋಕರ್ ಆಗಿ ಅಧಿಕಾರ ಹಿಡಿಯಬಹುದು ಅಂತ ಕನಸು ಕಂಡಿದ್ದರು. ಕಾಂಗ್ರೆಸ್‌ಗೆ ಬಹುಮತ ಬಂದಿದ್ದರಿಂದ ಅದು ಸಾಧ್ಯವಾಗಲಿಲ್ಲ. ಇದರಿಂದ ಹತಾಶರಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ದೂರಿದರು.

ಮದ್ದೂರು: ಕಳೆದ ಚುನಾವಣೆ ಸಮಯದಲ್ಲಿ ಕುಮಾರಸ್ವಾಮಿ ಜೋಕರ್ ಆಗಿ ಅಧಿಕಾರ ಹಿಡಿಯಬಹುದು ಅಂತ ಕನಸು ಕಂಡಿದ್ದರು. ಕಾಂಗ್ರೆಸ್‌ಗೆ ಬಹುಮತ ಬಂದಿದ್ದರಿಂದ ಅದು ಸಾಧ್ಯವಾಗಲಿಲ್ಲ. ಇದರಿಂದ ಹತಾಶರಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ದೂರಿದರು.

ತಾಲೂಕಿನ ಕ್ಯಾತಘಟ್ಟ, ತೊರೆಚಾಕನಹಳ್ಳಿ ಹಾಗೂ ಚಿಕ್ಕಅರಸಿನಕೆರೆ ಗ್ರಾಮದಲ್ಲಿ ನೀರಾವರಿ ಇಲಾಖೆ ವತಿಯಿಂದ ತಲಾ 75 ಲಕ್ಷ ರು. ವೆಚ್ಚದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ತಾನು ಮುಖ್ಯಮಂತ್ರಿಯಾಗುತ್ತೇನೆ ಅಂತ ಭಾವಿಸಿ ದುಬೈ, ಸಿಂಗಾಪೂರ್‌ನಲ್ಲೆಲ್ಲಾ ಕುಳಿತು ಪ್ಲಾನ್ ಮಾಡಿಕೊಂಡಿದ್ದರು. ಅವು ಯಾವುವೂ ಸಕ್ಸಸ್ ಆಗಲೇ ಇಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಇತರರ ವಿರುದ್ಧ ಹರಿಹಾಯುತ್ತಿದ್ದಾರೆ ಎಂದು ಮೂದಲಿಸಿದರು.

ಡಿ.ಕೆ.ಶಿವಕುಮಾರ್ ಮೇಲೆ ರಾಜಕೀಯ ದ್ವೇಷ ಸಾಧನೆಗೆ ಬಿಜೆಪಿ ಸರ್ಕಾರ ಸಿಬಿಐಗೆ ದೂರು ಕೊಟ್ಟಿತ್ತು. ಪೊಲೀಸ್ ಇಲಾಖೆಯಲ್ಲೇ ಸಮರ್ಥ ಅಧಿಕಾರಿಗಳಿದ್ದರೂ ಸಣ್ಣ ಪುಟ್ಟ ಪ್ರಕರಣಗಳನ್ನು ತನಿಖೆಗೆ ನೀಡಿತ್ತು. ಇದಕ್ಕೆ ಸ್ಪೀಕರ್ ಹಾಗೂ ಅಡ್ವೋಕೇಟ್ ಜನರಲ್ ಅವರ ಒಪ್ಪಿಗೆಯನ್ನೂ ಪಡೆದಿರಲಿಲ್ಲ. ಹೀಗಾಗಿ ಸಿಬಿಐನಲ್ಲಿದ್ದ ಪ್ರಕರಣವನ್ನು ವಾಪಸ್ ಪಡೆಯಲು ಸರ್ಕಾರ ತೀರ್ಮಾನಿಸಿದೆ. ನಾವು ಈ ವಿಷಯದಲ್ಲಿ ಡಿ.ಕೆ.ಶಿವಕುಮಾರ್ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದರು.

ರಾಜ್ಯ ಸರ್ಕಾರಕ್ಕೆ ಈ ರೀತಿ ನಿರ್ಣಯ ಕೈಗೊಳ್ಳುವ ಅಧಿಕಾರವಿದೆ. ಕ್ಯಾಬಿನೆಟ್ ಅಂದರೆ ಸರ್ಕಾರ ಇದ್ದಂತೆ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಎಂದು ತಿಳಿಸಿದರು.

ರಾಜಕೀಯ ಲಾಭಕ್ಕಾಗಿ ಅನ್ಯ ಪಕ್ಷಗಳ ಜೊತೆ ಸೇರಿ ಹಂಗಾಮಿ ಅಧಿಕಾರ ನಡೆಸಿರುವ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕುಮಾರಸ್ವಾಮಿ ನಮ್ಮ ಪಕ್ಷದ ವಿರುದ್ಧ ಟೀಕೆ ಮಾಡುವುದನ್ನು ಬಿಟ್ಟು ಜೆಡಿಎಸ್ ಪಕ್ಷದ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಲಿ ಎಂದು ಕಿವಿಮಾತು ಹೇಳಿದರು.

ಕಳೆದ 20 ವರ್ಷಗಳಿಂದ ಮದ್ದೂರು ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಬದಲಾವಣೆಗೆ ಚಿಂತನೆ ನಡೆಸಿದ್ದೇನೆ. ಹಂತ ಹಂತವಾಗಿ ನೀರಾವರಿ, ರಸ್ತೆ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುವುದಾಗಿ ಉದಯ್ ತಿಳಿಸಿದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟ್ಟನಹಳ್ಳಿ ಶಿವಲಿಂಗೇಗೌಡ, ಜಿಪಂ ಮಾಜಿ ಸದಸ್ಯ ಅಣ್ಣೂರು ರಾಜೀವ್ , ತಾಪಂ ಮಾಜಿ ಅಧ್ಯಕ್ಷ ವಿಜಯಕುಮಾರ್ , ಮುಖಂಡರಾದ ಮರೀಸ್ವಾಮಿ, ಕೃಷ್ಣ, ಜವರೇಗೌಡ, ಸಿದ್ದೇಗೌಡ, ಯಜಮಾನ್ ಶಿವಲಿಂಗೇಗೌಡ, ಶಿವಲಿಂಗಯ್ಯ, ರಾಮಕೃಷ್ಣ, ರಘು ಇದ್ದರು.

Share this article