ನಾಗಮಂಗಲ: ರಾಜ್ಯದ ಜನರು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ವಿಶ್ವಾಸವಿಟ್ಟು 136 ಸ್ಥಾನಗಳನ್ನು ಗೆಲ್ಲಿಸಿರುವುದನ್ನು ವಿರೋಧಿಗಳಿಗೆ ಸಹಿಸಲಾಗುತ್ತಿಲ್ಲ. ನಿರೀಕ್ಷೆಗೂ ಮೀರಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸಿದ್ದಕ್ಕಾಗಿ ಕೊಟ್ಟಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತಿದ್ದೇವೆ. ಇದು ಇನ್ನೊಂದು ರೀತಿಯಲ್ಲಿ ಅವರಿಗೆ ಹೊಟ್ಟೆಯೊಳಗೆ ಕಿವುಚಿದಂತಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಜೆಡಿಎಸ್ ಮತ್ತು ಬಿಜೆಪಿ ನಾಯಕರನ್ನು ಕುಟುಕಿದರು.
ಜೆಡಿಎಸ್ ಹಾಗೂ ಬಿಜೆಪಿಯವರಿಗೆ ಹಗಲು-ರಾತ್ರಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ನನ್ನ ಬಗ್ಗೆ ಮಾತನಾಡಲಿಲ್ಲವೆಂದರೆ ಅವರಿಗೆ ಊಟ ಸೇರುವುದಿಲ್ಲ. ನಿದ್ರೆಯೂ ಬರುವುದಿಲ್ಲ. ಅದಕ್ಕಾಗಿಯೇ ಸರ್ಕಾರದ ಗ್ಯಾರಂಟಿಗಳು ನಿಂತು ಹೋಗುತ್ತವೆ ಎಂದು ನಿತ್ಯ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ವ್ಯಂಗ್ಯವಾಡಿದರು.
20 ಕೋಟಿ ರು.ಕೊಡಲಿ ಬರೆದುಕೊಡುವೆ:ಮಹಾರಾಜರ ಕಾಲದಲ್ಲಿ ಹರಾಜು ಮಾಡಿರುವ ಜಾಗವನ್ನು ಯಾರೋ ಒಬ್ಬ ವ್ಯಕ್ತಿ ಪಡೆದು, ಹತ್ತಾರು ವ್ಯಕ್ತಿಗಳ ನಂತರ ಆ ಜಾಗವನ್ನು ನನ್ನ ಅಣ್ಣ 15ವರ್ಷಗಳ ಹಿಂದೆ ಖರೀದಿಸಿ ನನಗೆ ದಾನವಾಗಿ ಕೊಟ್ಟಿದ್ದಾರೆ. ಈ ಜಮೀನನ್ನು ಜೆಡಿಎಸ್ ನಾಯಕರು 100 ಕೋಟಿ ರು. ಬೆಲೆ ಬಾಳುತ್ತದೆ ಎಂದು ಬರೆಸಿದ್ದಾರೆ. 80 ಕೋಟಿ ರು. ಅವರೇ ಇಟ್ಟುಕೊಂಡು ನನಗೆ ಕೇವಲ 20 ಕೋಟಿ ರು.ಕೊಡಲಿ. ನಾಳೆಯೇ ಅವರ ಹೆಸರಿಗೆ ನೋಂದಣಿ ಮಾಡಿಸಿಕೊಡುತ್ತೇನೆ. ಈ ವಿಚಾರವನ್ನು ಅವರೊಂದಿಗೆ ಚೆನ್ನಾಗಿರುವವರು ಹೇಳಿ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
ನನ್ನ ಹೆಚ್‌ಡಿಕೆ ಸಂಬಂಧ ಅವನಿಗೇನು ಗೊತ್ತು?:
1999ರಲ್ಲಿ ಹಳೇ ಮೈಸೂರು ಭಾಗದಲ್ಲಿ ನಾನೊಬ್ಬನೇ ಜೆಡಿಎಸ್ ಶಾಸಕನಾಗಿ ಆಯ್ಕೆಯಾಗಿದ್ದೆ. ಆಗಲೂ ಸಹ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಅಭಿವೃದ್ಧಿ ಕೆಲಸ ಮಾಡಲು ನಮ್ಮ ಸರ್ಕಾರವೇ ಇರಬೇಕೆಂದೇನಿಲ್ಲ. ಇಚ್ಛಾಶಕ್ತಿಯಿದ್ದರೆ ವಿರೋಧ ಪಕ್ಷದ ಶಾಸಕನಾಗಿದ್ದರೂ ಸಹ ಕೆಲಸ ಮಾಡಬಹುದು. 14 ತಿಂಗಳ ಕಾಲ ಅವರದ್ದೇ ಪಕ್ಷದ ಅಧಿಕಾರದಲ್ಲಿ ಯಾವ ಅಭಿವೃದ್ಧಿ ಮಾಡಿದ್ದಾರೆಂಬುದನ್ನು ತೋರಿಸಲಿ ಎಂದು ಸವಾಲು ಹಾಕಿದರು.
ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹರದನಹಳ್ಳಿ ನರಸಿಂಹಯ್ಯ, ಚಂದ್ರಶೇಖರ್, ಹಾಲಹಳ್ಳಿ ಅಶೋಕ್, ಪಾಂಡವಪುರ ಉಪ ವಿಭಾಗಾಧಿಕಾರಿ ಎಲ್.ನಂದೀಶ್, ಜಿಲ್ಲಾ ನೋಂದಣಾಧಿಕಾರಿ ಕಾಂತರಾಜೇ ಅರಸ್, ಎಸ್‌ಎಲ್‌ಡಿಬಿ ನಿರ್ದೇಶಕ ತಿಮ್ಮರಾಯಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಜಿಪಂ ಮಾಜಿ ಸದಸ್ಯ ಎಂ.ಪ್ರಸನ್ನ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಸಿ.ಚೇತನ್‌ಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸತೀಶ್‌ಚಂದ್ರ, ಮಹಿಳಾ ಕಾಂಗ್ರೆಸ್ ಮುಖಂಡರಾದ ಯಶೋಧಮ್ಮ, ಎನ್.ಕೆ.ವಸಂತಮಣಿ, ನೀಲಾ ಶಿವಮೂರ್ತಿ, ಗೀತಾ ದಾಸೇಗೌಡ, ಪುರಸಭೆ ಸದಸ್ಯರಾದ ರಮೇಶ್, ತಿಮ್ಮಪ್ಪ, ಟಿಎಪಿಸಿಎಂಎಸ್ ಕಾರ್ಯದರ್ಶಿ ಮೋಹನ್‌ರಾಜ್ ಸೇರಿದಂತೆ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಸಿಇಓಗಳು ಮತ್ತು ನಾಲ್ಕು ಸಾವಿರಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.