ಭಟ್ಕಳ: ಇಲ್ಲಿನ ಜಾಲಿ ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ತಂಝೀಂ ಬೆಂಬಲಿತ ಸದಸ್ಯರಾದ ಅಪ್ಸಾ ಖಾಜಿಯಾ ಹಾಗೂ ಉಪಾಧ್ಯಕ್ಷರಾಗಿ ಇಮ್ರಾನ್ ಲಂಕಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬುಧವಾರ ತಹಸೀಲ್ದಾರ್ ನಾಗರಾಜ ನಾಯ್ಕಡ ಅವರ ನೇತೃತ್ವದಲ್ಲಿ ನೂತನ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. 20 ಸದಸ್ಯತ್ವ ಬಲದ ಜಾಲಿ ಪಟ್ಟಣ ಪಂಚಾಯಿತಿಯಲ್ಲಿ ತಂಝೀಂ ಬೆಂಬಲಿತ 12 ಸದಸ್ಯರಿದ್ದು, ಬಹುಮತ ಇರುವ ಹಿನ್ನೆಲೆ ಮತ್ತು ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರೂ ಅವಿರೋಧವಾಗಿ ಆಯ್ಕೆಯಾದರು.ಜಾಲಿ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದು 28 ತಿಂಗಳ ಬಳಿಕ ಅಧ್ಯಕ್ಷ- ಉಪಾಧ್ಯಕ್ಷರು ಆಯ್ಕೆಯಾಗಿದ್ದು, ಆ ಮೂಲಕ ಜನರಿಂದ ಆಯ್ಕೆಯಾದ ಪ್ರತಿನಿಧಿಗಳಿಗೆ ಅಧಿಕಾರ ಸಿಕ್ಕಂತಾಗಿದೆ. ಕುಂಠಿತಗೊಂಡ ಅಭಿವೃದ್ಧಿ ಕಾರ್ಯದ ವೇಗ ಹೆಚ್ಚಾಗಲು ಅನುಕೂಲವಾಗಿದೆ. ನೂತನ ಅಧ್ಯಕ್ಷ- ಉಪಾಧ್ಯಕ್ಷರಿಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜಪ್ಪ ಎನ್., ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಜಾಲಿ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಂಜಪ್ಪ ನಾಯ್ಕ, ಪಟ್ಟಣ ಪಂಚಾಯಿತಿ ಸದಸ್ಯರು, ಪ್ರಮುಖರು ಶುಭಾಶಯ ಕೋರಿದರು.ಮುಂಡಗೋಡ ಪಪಂ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪಟ್ಟಿಗೆ ತಡೆಯಾಜ್ಞೆ
ಮುಂಡಗೋಡ: ನೂತನ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆದು ಒಂದೇ ದಿನದಲ್ಲಿ ಮುಂಡಗೋಡ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪಟ್ಟಿಗೆ ಧಾರವಾಡ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.ಮಂಗಳವಾರವಷ್ಟೇ ಅಧ್ಯಕ್ಷರಾಗಿ ಜಯಸುಧಾ ಭೋವಿವಡ್ಡರ ಹಾಗೂ ಉಪಾಧ್ಯಕ್ಷರಾಗಿ ರಹಿಮಾಬಾನು ಕುಂಕೂರ ಅವರು ಆಯ್ಕೆಯಾಗಿದ್ದರು.ಆದರೆ, ಈ ಹಿಂದೆ ರಾಜ್ಯ ಸರ್ಕಾರದಿಂದ ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಕ್ಕೆ ಮಹಿಳಾ ಮೀಸಲಾತಿ ಪ್ರಕಟವಾದಾಗಲೇ ಅದರ ವಿರುದ್ಧ ಪಪಂನ ಕಾಂಗ್ರೆಸ್ ಸದಸ್ಯರಾದ ರಝಾಖಾನ್ ಪಠಾಣ್, ಶಿವರಾಜ್ ಸುಬ್ಬಾಯವರ್, ಫಣಿರಾಜ್ ಹದಳಗಿ ಮಹ್ಮದಗೌಸ ಮಖಾನದಾರ ಸೇರಿದಂತೆ ನಾಲ್ವರು ಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡಸಿದ ಹೈಕೋರ್ಟ್ ಮೀಸಲಾತಿಗೆ ತಡೆಯಾಜ್ಞೆ ನೀಡಿದ್ದು, ಆ. ೨೯ರಂದು ನ್ಯಾಯಾಲಯದ ಅಂತಿಮ ಆದೇಶ ಪ್ರಕಟಿಸುವವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ಮಾಡಿದೆ.