ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷ ಹಾಗೂ ವಿಜಯದಶಮಿ ಅಂಗವಾಗಿ ಹುಬ್ಬಳ್ಳಿ ಮಹಾನಗರ ಘಟಕದ ನೇತೃತ್ವದಲ್ಲಿ ಭಾನುವಾರ ಹುಬ್ಬಳ್ಳಿಯಲ್ಲಿ ಆರ್‌ಎಸ್‌ಎಸ್ ಪಥ ಸಂಚಲನ ನಡೆಯಿತು.ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಶಾಸಕ ಮಹೇಶ ಟೆಂಗಿನಕಾಯಿ, ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಸ್ವರ್ಣಾ ಗ್ರುಪ್ ಆಫ್ ಕಂಪನೀಸ್ ವ್ಯವಸ್ಥಾಪಕ ನಿರ್ದೇಶಕ ಡಾ। ವಿಎಸ್‌ವಿ ಪ್ರಸಾದ, ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಸೇರಿದಂತೆ ಅನೇಕ ಗಣ್ಯರು ಪಥ ಸಂಚಲನದಲ್ಲಿ ಪಾಲ್ಗೊಂಡು ಗಮನ ಸೆಳೆದರು.
6 ತಿಂಗಳ ಮಗುವಿಗೂ ಗಣವೇಷ ಹಾಕಿದ್ದು ಗಮನ ಸೆಳೆಯಿತು. ಇದಲ್ಲದೇ, 2, 3, 5, 8... ಹೀಗೆ ನಾನಾ ವಯಸ್ಸಿನ ಮಕ್ಕಳು ಗಣವೇಷಧಾರಿಗಳಾಗಿ ತಮ್ಮ ತಮ್ಮ ತಂದೆಯ ಜತೆ, ಜತೆಗೆ ಹೆಜ್ಜೆ ಹಾಕುತ್ತಿದ್ದ ದೃಶ್ಯ ಕಣ್ಮನ ಸೆಳೆಯಿತು.ಗಣವೇಷಧಾರಿಗಳು ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕಿದರೆ, ರಸ್ತೆಯ ಎರಡು ಬದಿಗಳ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಪಥ ಸಂಚಲನ ವೀಕ್ಷಿಸಿದರು. ನಗರದ ಪ್ರಮುಖ ಬೀದಿಗಳನ್ನು ರಂಗೋಲಿ, ಪುಷ್ಪಗಳಿಂದ ಅಲಂಕರಿಸಿ ಪಥ ಸಂಚಲನವನ್ನು ಜನರು ಸ್ವಾಗತಿಸಿದರು. ಗಣವೇಷಧಾರಿಗಳ ಮೇಲೆ ಪುಷ್ಪಗಳ ಮಳೆಗರೆದು, ಜಯಘೋಷ ಮೊಳಗಿಸಿದರು. ಭಗವಾ ಧ್ವಜ ಹಾಗೂ ಸಂಘದ ಸಂಸ್ಥಾಪಕರ ಭಾವಚಿತ್ರಕ್ಕೆ ಜನರು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಇನ್ನು ಕೊಯಿನ್ ರಸ್ತೆಯಲ್ಲಿ ಬಾನಿ ಓಣಿಯ ಗೆಳೆಯರ ಬಳಗ ಸೇರಿದಂತೆ ವಿವಿಧೆಡೆ ಪಥ ಸಂಚಲನ ಬಂದ ಸಮಯದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಆರ್‌ಎಸ್‌ಎಸ್ ಗಣವೇಷಧಾರಿ, ಭಾರತ ಮಾತೆ, ಸ್ವಾಮಿ ವಿವೇಕಾನಂದ ಸೇರಿದಂತೆ ವಿವಿಧ ವೇಷಭೂಷಣದಲ್ಲಿ ತಯಾರಾಗಿದ್ದ ಮಕ್ಕಳು ರಸ್ತೆ ಬದಿಯಲ್ಲಿ ನಿಂತು ಪಥ ಸಂಚಲನವನ್ನು ಸ್ವಾಗತಿಸುತ್ತಿದ್ದ ದೃಶ್ಯ ಗಮನ ಸೆಳೆಯಿತು.ಇಲ್ಲಿಯ ನೆಹರು ಮೈದಾನದಿಂದ ಎರಡು ಮಾರ್ಗದಲ್ಲಿ ಪಥ ಸಂಚಲನ ಸಂಚರಿಸಿತು. ಎರಡೂ ಪಥಸಂಚಲನ ದುರ್ಗದ ಬೈಲ್ ವೃತ್ತದಲ್ಲಿ ಸಂಗಮಗೊಂಡಿತು. ಮತ್ತೆ, ನೆಹರು ಮೈದಾನಕ್ಕೆ ಮರಳಿ ಸಂಪನ್ನಗೊಂಡಿತು. ಇದಕ್ಕೂ ಮೊದಲು ಸಂಘದ ಕಾರ್ಯಕರ್ತರಿಂದ ಶಾರೀರಿಕ, ಮಾನಸಿಕ ಬೆಳವಣಿಗೆಗೆ ದಂಡ ಮತ್ತು ಸಮತಾ ಪ್ರದರ್ಶನ, ವ್ಯಾಯಾಮದ ಜತೆಗೆ ವಿವಿಧ ಆಟಗಳು ಜರುಗಿದವು. ಪಥ ಸಂಚಲನದ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.