ರಿಲ್ಯಾಕ್ಸ್‌ ಮೂಡ್‌ನಲ್ಲಿ ಜೋಶಿ ದಂಪತಿ

KannadaprabhaNewsNetwork |  
Published : May 09, 2024, 01:05 AM IST
ಜೋಶಿ | Kannada Prabha

ಸಾರಾಂಶ

ಸಂಸದೀಯ ಮತ್ತು ಕಲ್ಲಿದ್ದಲು ಗಣಿ ಸಚಿವ ಪ್ರಹ್ಲಾದ ಜೋಶಿ ಅವರು ಕಳೆದ ಮೂರ್ನಾಲ್ಕು ತಿಂಗಳಿಂದಲೂ ಅತ್ತ ಕೇಂದ್ರದಲ್ಲಿ ಇಲಾಖೆ ಕೆಲಸ, ಇತ್ತ ಸ್ವಕ್ಷೇತ್ರದಲ್ಲಿ ಚುನಾವಣಾ ಸಿದ್ಧತೆ ಎನ್ನುತ್ತ ಬಿಡುವಿಲ್ಲದೇ ಶ್ರಮಿಸಿದ್ದರು.

ಹುಬ್ಬಳ್ಳಿ:

ಕಳೆದ ಎರಡ್ಮೂರು ತಿಂಗಳಿಂದ ಚುನಾವಣಾ ಜಂಜಾಟದಲ್ಲಿ ತೊಡಗಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬುಧವಾರ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದರು. ಇಷ್ಟು ದಿನ ಕಾಲಿಗೆ ಚಕ್ರಕಟ್ಟಿಕೊಂಡು ಓಡಾಡುತ್ತಿದ್ದ ಜೋಶಿ, ಚುನಾವಣೆ ಮುಗಿದ ಮರುದಿನವಿಡೀ ಮನೆಯಲ್ಲೇ ಕಾಲ ಕಳೆದರು.

ಇಲ್ಲಿನ ಮನೆಯಲ್ಲಿ ಜೋಶಿ ದಂಪತಿ ಮಕ್ಕಳ ಜತೆ ಸೇರಿ ಮೊಮ್ಮಕ್ಕಳನ್ನು ಆಡಿಸುತ್ತ ಖುಷಿ ವ್ಯಕ್ತಪಡಿಸಿದರು. ಸಂಸದೀಯ ಮತ್ತು ಕಲ್ಲಿದ್ದಲು ಗಣಿ ಸಚಿವ ಪ್ರಹ್ಲಾದ ಜೋಶಿ ಅವರು ಕಳೆದ ಮೂರ್ನಾಲ್ಕು ತಿಂಗಳಿಂದಲೂ ಅತ್ತ ಕೇಂದ್ರದಲ್ಲಿ ಇಲಾಖೆ ಕೆಲಸ, ಇತ್ತ ಸ್ವಕ್ಷೇತ್ರದಲ್ಲಿ ಚುನಾವಣಾ ಸಿದ್ಧತೆ ಎನ್ನುತ್ತ ಬಿಡುವಿಲ್ಲದೇ ಶ್ರಮಿಸಿದ್ದರು. ಕಳೆದೊಂದು ತಿಂಗಳಿಂದ ಕ್ಷೇತ್ರಾದ್ಯಂತ ಸಂಚರಿಸಿ ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.

ಪ್ರಹ್ಲಾದ ಜೋಶಿ ಅವರ ಗೆಲುವಿಗಾಗಿ ಪತ್ನಿ ಜ್ಯೋತಿ ಜೋಶಿ ಅವರೂ ಕ್ಷೇತ್ರದ ವಿವಿಧೆಡೆ ಮಹಿಳಾ ಕಾರ್ಯಕರ್ತರ ಜತೆ ಸೇರಿ ಪ್ರಚಾರ ನಡೆಸಿದ್ದರು. ಇದೀಗ ಚುನಾವಣೆ, ಪ್ರಚಾರ ಎಲ್ಲದರಿಂದ ಹೊರಬಂದು ಮೊಮ್ಮಕ್ಕಳನ್ನು ಎತ್ತಾಡಿಸಿ ಸಂತಸಪಟ್ಟರು.

ಈ ವೇಳೆ ಮಾತನಾಡಿದ ಜೋಶಿ, ಚುನಾವಣೆ ಸಮಯದಲ್ಲಿ ಕುಟುಂಬಕ್ಕೆ ಸಮಯ ಕೊಡಲು ಸಾಧ್ಯವಾಗಿರಲಿಲ್ಲ. ಸುದೀರ್ಘವಾಗಿ ಓಡಿದಾಗ ದಣಿವಾಗುತ್ತದೆ. ನಿನ್ನೆ ಕೂಡ ಅನೇಕರನ್ನು ಭೇಟಿ ಮಾಡಿದೆ. ನಗು ನಗುತ್ತಲೇ ಚುನಾವಣೆ ಮುಗಿದಿದೆ. ಈ ಸಲವೂ ತಮ್ಮ ಗೆಲವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು

ಜ್ಯೋತಿ ಜೋಶಿ ಮಾತನಾಡಿ, ಕಳೆದ ಐದು ವರ್ಷಗಳ ವರೆಗೆ ನಿರಂತರವಾಗಿ ಜನಸೇವೆ ಮಾಡಿದ್ದಾರೆ. ಅದರಲ್ಲೂ ಚುನಾವಣಾ ಸಂದರ್ಭದಲ್ಲಿ ಮಕ್ಕಳ ಜೊತೆ ಬೆರೆಯಲು ಸಾಧ್ಯವಾಗಿರಲಿಲ್ಲ. ಮಗಳು ಯಾವ ಕ್ಲಾಸ್‌ನಲ್ಲಿ ಓದುತ್ತಿದ್ದಾರೆ ಎಂಬುದನ್ನೇ ಮರೆತಿದ್ದಾರೆ ಎಂದರು.

ಆಗ ಮಧ್ಯಪ್ರವೇಶ ಮಾಡಿದ ಜೋಶಿ ಈಗ ಹತ್ತನೇ ಕ್ಲಾಸ್ ನಲ್ಲಿ ಓದುತ್ತಿದ್ದಾಳೆ, ಅಷ್ಟು ಗೊತ್ತಿದೆ ಎಂದು ನಗೆಚಟಾಕಿ ಹಾರಿಸಿದರು.

PREV

Recommended Stories

ಜಾಗತಿಕ ಮಟ್ಟದಲ್ಲಿ ಸಾಧನೆ ನಾರಿ ಶಕ್ತಿಗೆ ಸಾಕ್ಷಿ
ಮಕ್ಕಳ ಕಲಿಕೆಯನ್ನು ಸೃಜನಾತ್ಮಕವಾಗಿಸಲು ನಲಿ-ಕಲಿ