ಜೋಶಿ ಆರೋಪ ಅವರ ಘನತೆಗೆ ತಕ್ಕದ್ದಲ್ಲ: ತಂಗಡಗಿ

KannadaprabhaNewsNetwork | Published : Dec 24, 2024 12:48 AM

ಸಾರಾಂಶ

ಕರ್ನಾಟಕ ಪೊಲೀಸ್ ಇಲಾಖೆ ದೇಶಕ್ಕೆ ಮಾದರಿಯಾಗಿದ್ದು, ಮೇಲ್ಮನೆ ಸದಸ್ಯ ಸಿಟಿ ರವಿ ಅವರನ್ನು ಎನ್ಕೌಂಟರ್ ಮಾಡುವ ಹುನ್ನಾರದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ನೀಡಿರುವುದು ಅವರ ಘನತೆಗೆ ತಕ್ಕ ಮಾತಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಕನಕಗಿರಿ

ಕರ್ನಾಟಕ ಪೊಲೀಸ್ ಇಲಾಖೆ ದೇಶಕ್ಕೆ ಮಾದರಿಯಾಗಿದ್ದು, ಮೇಲ್ಮನೆ ಸದಸ್ಯ ಸಿಟಿ ರವಿ ಅವರನ್ನು ಎನ್ಕೌಂಟರ್ ಮಾಡುವ ಹುನ್ನಾರದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ನೀಡಿರುವುದು ಅವರ ಘನತೆಗೆ ತಕ್ಕ ಮಾತಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಭದ್ರತೆ ಕಾರಣಕ್ಕಾಗಿ ಪೊಲೀಸರು ಸಿ.ಟಿ .ರವಿ ಅವರನ್ನು ಧಾರವಾಡ, ಗದಗ, ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ಸುತ್ತಿಸಿರುವ ಕುರಿತು ಮಾಹಿತಿ ಇದೆ. ಬೆಳಗಾವಿಯಲ್ಲಿ ಅಧಿವೇಶ ನಡೆಯುತ್ತಿರುವುದರಿಂದ ಮತ್ತು ಮುಂಜಾಗ್ರತಾ ಕ್ರಮವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕರೆಯ್ದೊಯ್ದಿರಬಹುದು. ಇದಕ್ಕೆ ವಿಪಕ್ಷ ನಾಯಕರು ಬೇರೆ ಅರ್ಥ ಕಲ್ಪಿಸಬಾರದು. ಕೇಂದ್ರದಲ್ಲಿ ಹತ್ತಾರು ವರ್ಷಗಳಿಂದ ಮಂತ್ರಿಯಾಗಿರುವ ಪ್ರಹ್ಲಾದ ಜೋಶಿ ಅವರ ಆರೋಪ ಅವರ ಘನತೆಗೆ ತಕ್ಕದ್ದಲ್ಲ.

ಗುಜರಾತ, ಉತ್ತರ ಪ್ರದೇಶ ಸರ್ಕಾರದಂತೆ ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿಲ್ಲ. ನಾವು ಯಾರನ್ನೂ ಎನ್ಕೌಂಟರ್ ಮಾಡುವುದಿಲ್ಲ. ಸರ್ಕಾರದ ಮಹಿಳಾ ಮಂತ್ರಿಯೊಬ್ಬರು ದೂರು ನೀಡಿದ್ದರಿಂದ ಪೊಲೀಸರು ರವಿ ಅವರನ್ನು ಬಂಧಿಸಿದ್ದಾರೆ. ರವಿ ಅವರ ಮೇಲಿನ ಆರೋಪಕ್ಕೆ ದಾಖಲೆ ಇರುವುದು ನನಗೆ ಗೊತ್ತಿಲ್ಲ. ಆ ಸಂದರ್ಭ ನಾನು ಅಧಿವೇಶದಲ್ಲಿ ಇರಲಿಲ್ಲ ಎಂದರು.

ಡಾ. ಬಿ.ಆರ್‌. ಅಂಬೇಡ್ಕರ್‌ ಬಗ್ಗೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಹೇಳಿಕೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ತಂಗಡಗಿ, ಅಂಬೇಡ್ಕರ್‌ ಸಂವಿಧಾನ ದೇಶದಲ್ಲಿ ಜಾರಿ ಇರದಿದ್ದರೆ, ಅಮಿತ್ ಶಾ ಗುಜರಾತಿನಲ್ಲಿ ಗುಜರಿ ವಸ್ತು ಮಾರುತ್ತಿದ್ದರು. ಪ್ರಧಾನಿ ಮೋದಿ ಅವರು ಸಹ ಚಹಾ ಮಾರುತ್ತಿದ್ದರು. ನಾನು ಕೂಡ ಸಾಮಾನ್ಯ ಗೌಂಡಿ ಮಗನಾಗಿ ಗೋಡೆ ಕಟ್ಟಲು ಹೋಗುತ್ತಿದ್ದೆ. ಈ ದೇಶಕ್ಕೆ ಅಂಬೇಡ್ಕರ್‌ ಸಂವಿಧಾನ ಕೊಟ್ಟಿದ್ದರಿಂದ ಅಮಿತ್ ಶಾ ಮಂತ್ರಿ ಆಗಿದ್ದಾರೆ. ಮೋದಿ ಚಹಾ ಮಾರಿ ಪ್ರಧಾನಿ ಆಗಿದ್ದಾರೆ ಎಂದರು.

ಕೇಂದ್ರ ಸಚಿವ ಅಮಿತ್ ಶಾ ಹೇಳಿದಂತೆ ಬಿಜೆಪಿ ಮಿತ್ರರೆಲ್ಲ ದೇವರ ಸ್ಮರಣೆ ಮಾಡಿ ಸ್ವರ್ಗಕ್ಕೆ ಹೋಗಲಿ. ಕಾಂಗ್ರೆಸ್ಸಿನವರಾದ ನಾವು ಅಂಬೇಡ್ಕರ್‌ ಹೆಸರು ಪಠಣ ಮಾಡಿ ಭೂಮಿಯ ಮೇಲೆ ಇರುತ್ತೇವೆ ಎಂದರು.

Share this article