ಜೋಶಿ ಗೆಲವು ಖಚಿತ: ಶಾಸಕ ಮಹೇಶ ಟೆಂಗಿನಕಾಯಿ

KannadaprabhaNewsNetwork | Published : May 6, 2024 12:34 AM

ಸಾರಾಂಶ

ಜೋಶಿ ಅವರು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತಾದ ಕರಪತ್ರಗಳನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಿದ್ದಾರೆ. ಶಾಸಕರು, ಮುಖಂಡರು ತಮ್ಮ ವ್ಯಾಪ್ತಿಯಲ್ಲಿ ಸಭೆಗಳನ್ನು ಆಯೋಜಿಸಿ ಈ ಕುರಿತು ವಿವರ ನೀಡಿ ಮತದಾರರ ಮನವೊಲಿಸುವ ಕಾರ್ಯವನ್ನು ಸಮರ್ಥವಾಗಿ ಮಾಡಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಇಷ್ಟು ದಿನ ನಡೆದ ಬಿರುಸಿನ ಪ್ರಚಾರದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಈ ಚುನಾವಣೆಯಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೋಶಿ ಅವರು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತಾದ ಕರಪತ್ರಗಳನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಿದ್ದಾರೆ. ಶಾಸಕರು, ಮುಖಂಡರು ತಮ್ಮ ವ್ಯಾಪ್ತಿಯಲ್ಲಿ ಸಭೆಗಳನ್ನು ಆಯೋಜಿಸಿ ಈ ಕುರಿತು ವಿವರ ನೀಡಿ ಮತದಾರರ ಮನವೊಲಿಸುವ ಕಾರ್ಯವನ್ನು ಸಮರ್ಥವಾಗಿ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರಿಗೆ ದೇಶದ ಚಿಂತನೆ ಇಲ್ಲ. ಅವರು ಕೇವಲ ಗ್ಯಾರಂಟಿ ವಿಚಾರಗಳಲ್ಲೇ ಮುಳುಗಿದ್ದಾರೆ. ದೇಶದ ಚುನಾವಣೆ ಸಂದರ್ಭದಲ್ಲೂ ಅವರು ರಾಜ್ಯದ ವಿಷಯಗಳನ್ನಷ್ಟೇ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ದೇಶಕ್ಕೆ ಏನು ಮಾಡಲಿದೆ ಎಂಬುದರ ಸ್ಪಷ್ಟತೆಯೂ ಅವರಿಗಿಲ್ಲ ಎಂದು ಟೀಕಿಸಿದರು.

ಒಂದು ವರ್ಷದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಎಷ್ಟು ಅನುದಾನ ಬಿಡುಗಡೆ ಮಾಡಿತು ಎಂಬುದರ ಕುರಿತು ಶ್ವೇತಪತ್ರ ಹೊರಡಿಸಲಿ. ಪ್ರಧಾನಿ ಮೋದಿ ಆಡಳಿತಾವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರ ಆರೋಪವಿಲ್ಲ. ಹೀಗಾಗಿ, ದೇಶದ ಜನರಿಗೆ ಮೋದಿ ಅವರನ್ನೇ ಮತ್ತೆ ಪ್ರಧಾನಿಯನ್ನಾಗಿ ಆಯ್ಕೆ ಮಾಡುವ ಸ್ಪಷ್ಟತೆ ಮತದಾರರಲ್ಲಿದೆ ಎಂದರು. ಪ್ರಜ್ವಲ್ ರೇವಣ್ಣ ಕುರಿತು ಕೇಳಿದ ಪ್ರಶ್ನೆಗೆ, ದೇಶದ ಕಾನೂನಿನಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಧಾರವಾಡ ಲೋಕಸಭಾ ಸಂಚಾಲಕ ಎಂ. ನಾಗರಾಜ, ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಶಿವಾನಂದ ಗುಂಡಗೋವಿ, ಗುರು ಪಾಟೀಲ ಸೇರಿದಂತೆ ಇತರರು ಇದ್ದರು.

Share this article