ಕನ್ನಡ ಪತ್ರಿಕೋದ್ಯಮ ಎಂದ ಕೂಡಲೇ ಪತ್ರಿಕೋದ್ಯಮಕ್ಕೂ ಹಾಗೂ ಬಳ್ಳಾರಿಗೆ ನಂಟು ಬೆಸೆದುಕೊಳ್ಳುತ್ತದೆ ಎಂದು ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಡಾ. ಕರಿಯಪ್ಪ ಮಾಳಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಳ್ಳಾರಿ
ಜೆಟಿ ಫೌಂಡೇಶನ್ , ಶ್ರೀ ಲಕ್ಷ್ಮಿ ವೆಂಕಟೇಶ್ವರ ಫಿಲ್ಲಿಂಗ್ ಸ್ಟೇಷನ್ ಜೋಳದರಾಶಿ ಹಾಗೂ ಬಳ್ಳಾರಿ ಪತ್ರಕರ್ತರ ಸಹಯೋಗದಲ್ಲಿ ಇಲ್ಲಿನ ಬಿಡಿಎಎ ಮೈದಾನ ಸಭಾಂಗಣದಲ್ಲಿ ಸೋಮವಾರ ಪತ್ರಿಕಾ ದಿನಾಚರಣೆ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು ಅವರು ಸಮಾರಂಭಕ್ಕೆ ಶುಭ ಹಾರೈಸಿದರು.
ವಿಶೇಷ ಉಪನ್ಯಾಸ ನೀಡಿದ ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಡಾ. ಕರಿಯಪ್ಪ ಮಾಳಗಿ, ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಬಳ್ಳಾರಿಯಿಂದ ಕನ್ನಡ ಸಮಾಚಾರವಾಗಿ ಮುದ್ರಣಗೊಂಡು ಓದುಗರಿಗೆ ತಲುಪುತ್ತಿತ್ತು. ಕನ್ನಡ ಪತ್ರಿಕೋದ್ಯಮ ಎಂದ ಕೂಡಲೇ ಪತ್ರಿಕೋದ್ಯಮಕ್ಕೂ ಹಾಗೂ ಬಳ್ಳಾರಿಗೆ ನಂಟು ಬೆಸೆದುಕೊಳ್ಳುತ್ತದೆ. ಅಂಥಹದೊಂದು ಬಹುದೊಡ್ಡ ಹಿನ್ನಲೆ ಬಳ್ಳಾರಿ ಪತ್ರಿಕೋದ್ಯಮಕ್ಕಿದೆ ಎಂದರು.
ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು. ನ್ಯಾಯಸಮ್ಮತವಾದ, ಪಾರದರ್ಶಕವಾದ ಹಾಗೂ ನಿಖರವಾದ ಮಾಹಿತಿಯನ್ನು ಓದುರರಿಗೆ ನೀಡುವುದು ಮಾಧ್ಯಮದ ಹೊಣೆಗಾರಿಕೆಯಾಗಿದೆ. ಸಮಾಜಮುಖಿಯಾದ ಹೊಣೆಗಾರಿಕೆಯನ್ನು ನಾಡಿನ ಅನೇಕ ಮಾಧ್ಯಮಗಳು ನಿರ್ವಹಿಸುತ್ತಿವೆ. ಹೀಗಾಗಿ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದರು.
ಚಿತ್ರದುರ್ಗದ ಕನ್ನಡಪ್ರಭ ಹಿರಿಯ ವರದಿಗಾರ ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ ಅವರು, ಪತ್ರಕರ್ತ ಬರೀ ವರದಿ ಮಾಡಿದರೆ ಸಾಲದು. ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು. ಸ್ಥಳೀಯ ಸಮಸ್ಯೆಗಳಿಗೆ ಧ್ವನಿಯಾಗಬೇಕು. ಜನಪರ ಚಳವಳಿಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತರಾದ ನಂಜುಂಡೇಗೌಡ ಹಾಗೂ ಶಿವಮೊಗ್ಗದ ಹಿರಿಯ ಪತ್ರಕರ್ತ ಮಾರ್ಕ್ಸ್ ತೇಜಸ್ವಿ ಮಾತನಾಡಿದರು.
ರಾಯಚೂರು ಜಿಲ್ಲೆಯ ವೀರಗೋಟಮಠದ ಅಡವಿಲಿಂಗ ಮಹಾರಾಜಸ್ವಾಮಿ, ಆಂಧ್ರಪ್ರದೇಶ ಪಾಲ್ತೂರುಮಠದ ಚೆನ್ನವೀರ ಶಿವಾಚಾರ್ಯ ಸ್ವಾಮಿ, ಹರಗಿನಡೋಣಿ ಪುರವರ್ಗಮಠದ ಶಂಭುಲಿಂಗ ಶಿವಾಚಾರ್ಯಸ್ವಾಮಿ, ಡಿ. ನಾಗೇನಹಳ್ಳಿ ನಂಜುಂಡೇಶ್ವರ ಶರಣರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಜೆ.ಟಿ. ಫೌಂಡೇಶ್ ನ ಮುಖ್ಯಸ್ಥ ತಿಮ್ಮಪ್ಪ ಜೋಳದರಾಶಿ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಪತ್ರಕರ್ತ ಮತ್ತಿಹಳ್ಳಿ ಅಹಿರಾಜ್ ಅತಿಥಿಗಳಾಗಿ ಭಾಗವಹಿಸಿದ್ದರು. ದೊಡ್ಡಬಸವ ಗವಾಯಿ ಡಿ.ಕಗ್ಗಲ್ ಕನ್ನಡಗೀತೆಗಳನ್ನು ಪ್ರಸ್ತುತಪಡಿಸಿದರು. ಎಂ.ವಿನೋದ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಇದೇ ವೇಳೆ ಬಳ್ಳಾರಿ ಜಿಲ್ಲೆಯ ಪತ್ರಕರ್ತರನ್ನು ಸನ್ಮಾನಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.