ಬೆಂಗಳೂರು : ಯಶವಂತಪುರ ಹಾಗೂ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ನವೀಕರಣ ಕಾಮಗಾರಿಯನ್ನು ಗುಣಮಟ್ಟದ ಜೊತೆಗೆ ಸಕಾಲದಲ್ಲಿ ಪೂರ್ಣಗೊಳಿಸಲು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಸೂಚಿಸಿದ್ದಾರೆ.
ಇವೆರಡು ನಿಲ್ದಾಣಗಳಿಗೆ ಭೇಟಿ ನೀಡಿದ ಅವರು, ಕಾಮಗಾರಿಯ ಪರಿಶೀಲನೆ ನಡೆಸಿದರು. ಯಶವಂತಪುರ ನಿಲ್ದಾಣವನ್ನು ಪ್ರಯಾಣಿಕ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ವಿಶ್ರಾಂತ ಕೊಠಡಿ ಸೇರಿ ಇನ್ನಿತರ ಕ್ರಮ ವಹಿಸಬೇಕು. ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಪರಂಪರೆಯುಳ್ಳ ಕಟ್ಟಡವನ್ನು ಸಂರಕ್ಷಿಸಿಕೊಂಡು ನವೀಕರಣ ಮಾಡುವಂತೆ ತಿಳಿಸಿದರು.
ಯಶವಂತಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳು ಮುಂದಿನ ದಿನಗಳಲ್ಲಿ ನಗರ ಸಾರಿಗೆಯ ವಿಚಾರದಲ್ಲೂ ಮಹತ್ವದ ಪಾತ್ರ ವಹಿಸಲಿವೆ. ಉಪನಗರ ರೈಲ್ವೆ, ಮೆಟ್ರೋ ಮಾರ್ಗಗಳನ್ನು ಸಂಪರ್ಕಿಸುವ ನಿರ್ಣಾಯಕ ಜಂಕ್ಷನ್ ಆಗಲಿವೆ. ಮುಂದಿನ ಎರಡರಿಂದ ಮೂರು ದಶಕಗಳಲ್ಲಿ ಗಣನೀಯ ಸಂಚಾರ ದಟ್ಟಣೆಯನ್ನು ನಿರ್ವಹಿಸುವಲ್ಲಿ ಈ ಸಾರಿಗೆ ವ್ಯವಸ್ಥೆ ಪ್ರಮುಖವಾಗಲಿದೆ ಎಂದರು.
ಸಂಸದ ಪಿ.ಸಿ.ಮೋಹನ್ ಅವರು, ರೈಲ್ವೆ ನಿಲ್ದಾಣದಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದರು. ಶಾಸಕ ರಿಜ್ವಾನ್ ಅರ್ಷದ್ ಅವರು ಪ್ರಸ್ತಾವಿತ ಮೆಟ್ರೋ ನಿಲ್ದಾಣವನ್ನು ನಿಲ್ದಾಣದ ಪ್ರವೇಶಕ್ಕೆ ಸಂಪರ್ಕಿಸಲು ಒತ್ತಾಯಿಸಿದರು. ಈ ವೇಳೆ ಸಚಿವೆ ಶೋಭಾ ಕರಂದ್ಲಾಜೆ, ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ್, ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಯೋಗೇಶ್ ಮೋಹನ್ ಇದ್ದರು.ಬಳಿಕ ಸಚಿವ ಸೋಮಣ್ಣ ಅವರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ ಆಲಿಸಿದರು.
ವಿಶ್ರಾಂತಿ ಕೊಠಡಿ ನಿರ್ಮಾಣ
ಯಶವಂತಪುರ ರೈಲ್ವೆ ನಿಲ್ದಾಣ ₹367 ಕೋಟಿ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ₹486 ಕೋಟಿ ಅನುದಾನದಲ್ಲಿ ನವೀಕರಣಗೊಳ್ಳುತ್ತಿವೆ. ರೈಲ್ವೆ ನಿಲ್ದಾಣಗಳು ಆಧುನೀಕರಣಗೊಂಡು ಜಾಗತಿಕ ಮಟ್ಟದ ಸೌಲಭ್ಯವನ್ನು ಹೊಂದಲಿವೆ. ವಿಶ್ರಾಂತಿ ಕೊಠಡಿ, ಮಲ್ಟಿಂಗ್ ಲೇವಲ್ ಪಾರ್ಕಿಂಗ್, ಮಕ್ಕಳಿಗಾಗಿ ಪ್ಲೇ ಝೋನ್, ಸ್ಥಳೀಯ ಉತ್ಪನ್ನಗಳ ಮಳಿಗೆ ಸೇರಿ ಹಲವು ಸೌಕರ್ಯಗಳು ಒಳಗೊಂಡಿರಲಿವೆ.