ಧಾರವಾಡ:
ಭಾಷೆಯ ಮೇಲೆ ಹಿಡಿತ ಮತ್ತು ಭಿನ್ನವಾಗಿ ಆಲೋಚಿಸುವ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಸೂಕ್ತ ಕ್ಷೇತ್ರವಾಗಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಹೇಳಿದರು.ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗ ಮತ್ತು ಕರ್ನಾಟಕ ರಾಜ್ಯ ಪತ್ರಿಕೋದ್ಯಮ ಮತ್ತು ಸಂವಹನ ಅಧ್ಯಾಪಕರ ಸಂಘದ ಸಹಯೋಗದಲ್ಲಿ ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಭಾಷಣ ಮಾಡಿದರು.
ಸಮಾಜದಲ್ಲಿ ಪತ್ರಕರ್ತರಿಗೆ ಮತ್ತು ಪತ್ರಿಕೋದ್ಯಮಕ್ಕೆ ದೊಡ್ಡ ಸ್ಥಾನವಿದೆ ಎಂದ ಅವರು, ಭಾರತೀಯ ಮಾಧ್ಯಮ ಮತ್ತು ಮನರಂಜನೆ ಕ್ಷೇತ್ರವು ಜಾಗತಿಕ ಮಟ್ಟದಲ್ಲಿ ಮುಂದಿದೆ ಎಂದರು. ಪ್ರಸ್ತುತ ವ್ಯಕ್ತಿಗತವಾಗಿ ಪತ್ರಿಕೋದ್ಯಮಕ್ಕೆ ಹೆಚ್ಚು ಮನ್ನಣೆ ಇದೆ ಎಂದ ಅವರು, ಕಳೆದ 40 ವರ್ಷಗಳಲ್ಲಿ ನಾಡಿಗೆ, ದೇಶಕ್ಕೆ ಅನೇಕ ಪತ್ರಕರ್ತರನ್ನು ನೀಡಿದ ಹೆಮ್ಮೆ ಕವಿವಿ ಪತ್ರಿಕೋದ್ಯಮ ವಿಭಾಗಕ್ಕೆ ಸಲ್ಲುತ್ತದೆ ಎಂದರು.ಕವಿವಿ ಹಣಕಾಸು ಅಧಿಕಾರಿ ಪ್ರೊ. ಸಿ. ಕೃಷ್ಣಮೂರ್ತಿ ಮಾತನಾಡಿ, ಪತ್ರಿಕೋದ್ಯಮ ವಿಷಯಕ್ಕೆ ಹೆಚ್ಚು ಬೇಡಿಕೆ ಇದ್ದು, ಕಠಿಣ ಪರಿಶ್ರಮ ಶ್ರದ್ಧೆಯಿಂದ ಸಾಧನೆ ಮಾಡಲು ಸಾಧ್ಯ. ಆಧುನಿಕ ತಂತ್ರಜ್ಞಾನವನ್ನು ಕಲಿಯಬೇಕು. ವಿದ್ಯಾರ್ಥಿಗಳು ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ರಾಬರ್ಟ್ ದದ್ದಾಪುರಿ ಮಾತನಾಡಿ, ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಂಡು ಮುನ್ನಡೆಯಬೇಕು. ಆಗ ಮಾತ್ರ ಯಶಸ್ಸು ದೊರಕುತ್ತದೆ. ಸಮಾಜದಲ್ಲಿ ಪತ್ರಿಕೋದ್ಯಮ ಉನ್ನತ ಸ್ಥಾನವಿದೆ. ಸಾಮಾಜಿಕ ಹೊಣೆಗಾರಿಕೆಯನ್ನು ಇಂದಿನ ಪತ್ರಕರ್ತರು ನಿರ್ವಹಿಸಿ ಬೇಕಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕವಿವಿ ಪ್ರಭಾರ ಕುಲಸಚಿವ ಪ್ರೊ. ಎ.ಎಂ. ಕಡಕೋಳ್ ಮಾತನಾಡಿದರು. ರಾಷ್ಟ್ರೀಯ ಸಮ್ಮೇಳನ ಮತ್ತು ಮಾಧ್ಯಮ ಹಬ್ಬದಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಷಯದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ವಿಶ್ರಾಂತ ಪ್ರಾಧ್ಯಾಪಕ ಡಾ. ಎ.ಎಸ್. ಬಾಲಸುಬ್ರಹ್ಮಣ್ಯ, ಕವಿವಿ ಪತ್ರಿಕೋದ್ಯಮ ಮುಖ್ಯಸ್ಥ ಡಾ. ಜೆ.ಎಂ. ಚಂದುನವರ, ಡಾ. ಸಂಜಯ ಕುಮಾರ ಮಾಲಗತ್ತಿ, ಪ್ರೊ. ಎ.ಬಿ. ವೇದಮೂರ್ತಿ, ಡಾ. ಪ್ರಶಾಂತ ವೇಣುಗೋಪಾಲ, ಹುಬ್ಬಳ್ಳಿಯ ಈಶ್ವರಿ ಫೌಂಡೇಶನ್ ಅಧ್ಯಕ್ಷ ಸಂತೋಷ ವೆರ್ಣೇಕರ, ಕೆಪಿಟಿಸಿಎಲ್ ಕೃಷ್ಣಪ್ಪ ಸೇರಿದಂತೆ ಇತರರು ಹಾಜರಿದ್ದರು. ಸಮಗ್ರ ವೀರಗ್ರಾಣಿ ಪ್ರಶಸ್ತಿ:
ಸಮಗ್ರ ವೀರಗ್ರಾಣಿ ಪ್ರಶಸ್ತಿಯನ್ನು ತುಮಕೂರಿನ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರವು ಪಡೆದುಕೊಂಡಿತು.