ಪತ್ರಿಕೋದ್ಯಮಿ ಬಿ.ಎಸ್‌.ನಾಗರಾಜರಾವ್‌ ಶಿಕ್ಷಣ, ಸಹಕಾರಿ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದರು: ಎಚ್‌.ವಿ. ರಾಜೀವ್‌

KannadaprabhaNewsNetwork |  
Published : Sep 01, 2025, 01:03 AM IST
2 | Kannada Prabha

ಸಾರಾಂಶ

ನಾಗರಾಜರಾವ್‌ ಅವರು ಸ್ಥಾಪಿಸಿದ ಸಪ್ತರ್ಷಿ ಸೌಹಾರ್ದ ಸಹಕಾರಿ ಸಂಘವು ಇಂದು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆಡಳಿತ ಮಂಡಳಿಯ ಕಾರಣದಿಂದ ಪ್ರಗತಿಯ ಹಾದಿಯಲ್ಲಿ ಸಾಗಿದೆ. ಜನಾನುರಾಗಿಯಾಗಿ ಠೇವಣಿ ಹೆಚ್ಚಿಸಿಕೊಂಡಿದೆ. ಕೋವಿಡ್‌ ಸಂದರ್ಭದಲ್ಲಿ ವಿಶೇಷ ಸಾಲ ನೀಡಿದೆ. ಹೊಸ ಹೊಸ ಯೋಜನೆಗಳ ಮೂಲಕ ಸದಸ್ಯರ ವಿಶ್ವಾಸವನ್ನು ಕೂಡ ಗಳಿಸಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಪತ್ರಿಕೋದ್ಯಮಿ ದಿವಂಗತ ಬಿ.ಎಸ್‌.ನಾಗರಾಜರಾವ್‌ ಅವರು ಶಿಕ್ಷಣ ಹಾಗೂ ಸಹಕಾರಿ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದರು ಎಂದು ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷರಾದ ಎಂಡಿಎ ಮಾಜಿ ಅಧ್ಯಕ್ಷ ಎಚ್‌.ವಿ.ರಾಜೀವ್‌ ಸ್ಮರಿಸಿದರು.

ಸಪ್ತರ್ಷಿ ಸೌಹಾರ್ದ ಸಹಕಾರಿ ಸಂಘ ನಿಯಮಿತವು ಕೃಷ್ಣಮೂರ್ತಿಪುರಂ ಶಾರದವಿಲಾಸ ಶತಮಾನೋತ್ಸವ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಮುಖ್ಯ ಪ್ರವರ್ತಕ ಹಾಗೂ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್‌.ನಾಗರಾಜ ರಾವ್‌ ಅವರ ಪುತ್ಥಳಿ ಅನಾವರಣ, ಮೊಬೈಲ್‌ ಅಪ್ಲಿಕೇಷನ್‌ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಗರಾಜರಾವ್‌ ಅವರು ಸ್ಥಾಪಿಸಿದ ಸಪ್ತರ್ಷಿ ಸೌಹಾರ್ದ ಸಹಕಾರಿ ಸಂಘವು ಇಂದು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆಡಳಿತ ಮಂಡಳಿಯ ಕಾರಣದಿಂದ ಪ್ರಗತಿಯ ಹಾದಿಯಲ್ಲಿ ಸಾಗಿದೆ. ಜನಾನುರಾಗಿಯಾಗಿ ಠೇವಣಿ ಹೆಚ್ಚಿಸಿಕೊಂಡಿದೆ. ಕೋವಿಡ್‌ ಸಂದರ್ಭದಲ್ಲಿ ವಿಶೇಷ ಸಾಲ ನೀಡಿದೆ. ಹೊಸ ಹೊಸ ಯೋಜನೆಗಳ ಮೂಲಕ ಸದಸ್ಯರ ವಿಶ್ವಾಸವನ್ನು ಕೂಡ ಗಳಿಸಿದೆ ಎಂದು ಶ್ಲಾಘಿಸಿದರು.

ಬಿ.ಎಸ್‌.ನಾಗರಾಜರಾವ್‌ ಅವರ ಪುತ್ಥಳಿ ಅನಾವರಣ ಮಾಡಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ಎಂಭತ್ತರ ದಶಕದಲ್ಲಿಯೇ ನಾಲ್ಕು ಪುಟಗಳ ''ಆರತಿ'' ಪುತ್ರಿಕೆಯನ್ನು ನಾಗರಾಜರಾವ್‌ ಅವರು ಹೊರತರುತ್ತಿದ್ದರು. ಆ ಕಾಲಕ್ಕೆ ಟೆಲಿಪ್ರಿಂಟರ್‌ ಹೊಂದಿದ್ದ ಏಕೈಕ ಪತ್ರಿಕೆಯಾಗಿತ್ತು. ಪತ್ರಿಕೆಯಲ್ಲಿ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಮೊದಲಾದ ವಿಷಯಗಳಿಗೆ ಒತ್ತು ನೀಡುತ್ತಾ ಸ್ಥಳೀಯವಾಗಿ ಹಲವಾರು ಮಂದಿಯನ್ನು ಬೆಳೆಸಿದರು ಎಂದರು.

ಇದಲ್ಲದೇ ನಂತರ ವಾಣಿವಿದ್ಯಾಮಂದಿರ ಕಾರ್ಯದರ್ಶಿ, ಅಧ್ಯಕ್ಷರಾಗಿ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ಬೆಳೆಸಿದರು. ನಂತರ ಸಹಕಾರ ಕ್ಷೇತ್ರಕ್ಕೂ ಕಾಲಿಟ್ಟರು ಎಂದರು.

ಮೊಬೈಲ್‌ ಅಪ್ಲಿಕೇಷನ್‌ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಪ್ರಾಂತೀಯ ಅಧಿಕಾರಿ ಗುರುಪ್ರಸಾದ್‌ ಬಂಗೇರ ಮಾತನಾಡಿ, ಇದರಿಂದ ಸದಸ್ಯರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಮನೆಯಲ್ಲಿಯೇ ಕುಳಿತು ರಾಷ್ಟ್ರೀಕೃತ ಬ್ಯಾಂಕುಗಳಿಗೂ ಹಣ ವರ್ಗಾವಣೆ, ಮಾಡಬುಹುದು. ಖಾತೆಯ ವಹಿವಾಟು ವಿವರ ಡೌನ್‌ ಲೋಡ್‌ ಮಾಡಿಕೊಳ್ಳಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ.ಎಸ್‌. ಚಂದ್ರಶೇಖರ್‌ ಮಾತನಾಡಿ, ಸದಸ್ಯರ ಬೆಂಬಲದಿಂದು ಸಂಘ ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.

ಬಿ.ಎಸ್‌. ನಾಗರಾಜರಾವ್‌ ಅವರನ್ನು ಕುರಿತು ಸಂಘದ ಮಾಜಿ ನಿರ್ದೇಶಕ ಟಿ.ವಿ. ಸತ್ಯನಾರಾಯಣ ಮಾತನಾಡಿ, ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ, ಮೈಸೂರು ವಿವಿಯಿಂದ ಕಾನೂನು ಹಾಗೂ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಆರಂಭದಲ್ಲಿ ಅಗರಬತ್ತಿ ಉದ್ಯಮ ಆರಂಭಿಸಿದ್ದರು. 1983 ರಲ್ಲಿ ನಗರ ಬಿಜೆಪಿ ಅಧ್ಯಕ್ಷರಾಗಿದ್ದರು. ಶಿಕ್ಷಣ, ಸಹಕಾರಿ ಕ್ಷೇತ್ರದ ನಂತರ ಶಂಕರಮಠದಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸಿದ್ಗರು. ಪರಶುರಾಮ ಜಯಂತಿಯನ್ನು ಮೊದಲು ಆಚರಿಸಲು ಅವರು ಕಾರಣಕರ್ತರು ಎಂದರು.

ಮೊಬೈಲ್‌ ಅಪ್ಲಿಕೇಷನ್‌ ನಿಂದ ಆಗುವ ಅನುಕೂಲತೆಗಳ ಬಗ್ಗೆ ಪ್ರಶಾಂತ್‌ ವಿವರಣೆ ನೀಡಿದರು. ಉಪಾಧ್ಯಕ್ಷೆ ಎಸ್‌. ಶ್ಯಾಮಲಾ, ಗೌ. ಖಜಾಂಚಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್‌.ಎ. ಪುರುಷೋತ್ತಮ, ನಿರ್ದೇಶಕರಾದ ಬಸವಣ್ಣ, ಎಂ.ಎಸ್‌. ಗುರುರಾಜ್‌, ಟಿ.ಎಸ್.ಶೇಷಾದ್ರಿ, ಎಚ್‌.ಬಿ. ಸುಬ್ಬಣ್ಣ, ಎಸ್. ಲಕ್ಷ್ಮಿದೇವಿ, ಎಸ್‌. ರಾಜಕುಮಾರ, ಎ.ಎಸ್. ರಂಗನಾಥನ್‌, ಮುತ್ತುರಾಜ್‌, ಜಿ. ಕೀರ್ತಿಪ್ರಕಾಶ್‌, ಎಂ. ಹನುಮಂತಯ್ಯ ಇದ್ದರು. ನಿರ್ದೇಶಕ ಎನ್‌. ನಾಗಚಂದ್ರ ಕಾರ್ಯಕ್ರಮ ನಿರೂಪಿಸಿದರು. ಮತ್ತೊರ್ವ ನಿರ್ದೇಶಕ ಬಿ.ಕೆ. ಶೇಷಾದ್ರಿ ವಂದಿಸಿದರು.

ಸಂಘದ ಕಾನೂನು ಸಲಹೆಗಾರ ಹಾಗೂ ಅಂತರಿಕ ಲೆಕ್ಕ ಪರಿಶೋಧನ ವಿಭಾಗದ ಮುದ್ದುರಾಜ್‌, ಕುಮಾರಸ್ವಾಮಿ, ಬಿ.ಎನ್‌. ಚಂದ್ರಶೇಖರ್‌, ಗೌತಮ್‌ ಮೊದಲಾದವರು ಪಾಲ್ಗೊಂಡಿದ್ದರು.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ