ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ಪತ್ರಕರ್ತ ಚಿಕ್ಕಮಾಳಿಗೆ ಮೇಲೆ ವ್ಯಕ್ತಿಯೋರ್ವ ಕ್ಷಲ್ಲಕ ವಿಚಾರಕ್ಕೆ ಹಲ್ಲೆ ಮಾಡಿ ಕೈ ಮುರಿದಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.ಖಾಸಗಿ ಪತ್ರಿಕೆ ತಾಲೂಕು ವರದಿಗಾರ ಚಿಕ್ಕಮಾಳಿಗೆ ಕೊಳ್ಳೇಗಾಲ ಭೀಮನಗರದ ದೊಡ್ಡ ಯಜಮಾನರು ಆಗಿದ್ದಾರೆ. ರಾತ್ರಿ 8:30 ಕ್ಕೆ ಪತ್ನಿಯ ಜೊತೆ ಪಟ್ಟಣದ ಹೋಟೆಲ್ ವೊಂದರಲ್ಲಿ ತಿಂಡಿ ತಿನ್ನಲು ಹೋಗಿದ್ದಾರೆ. ಅಲ್ಲಿಗೆ ಬಂದ ತಾಲೂಕಿನ ಪಾಳ್ಯ ಗ್ರಾಮದ ರವಿನಾಯಕ ನಾನು ಭೀಮನಗರದವನು ಬೇಗನೆ ತಿಂಡಿ ಕೊಡು ಎಂದು ಹೋಟೆಲ್‌ನವರೊಡನೆ ತಗಾದೆ ತೆಗೆದಿದ್ದಾನೆ. ಹೋಟೆಲ್ ಮಾಲೀಕ ಯಾಕಪ್ಪ ಭೀಮನಗರದ ದೊಡ್ಡ ಯಜಮಾನರು ಇಲ್ಲಿಯೇ ತಿಂಡಿ ತಿನ್ನುತ್ತಾ ಕುಳಿತಿದ್ದಾರೆ. ಸ್ವಲ್ಪ ಇರು ಎಂದು ಸಮಾಧಾನ ಮಾಡಲು ಮುಂದಾಗಿದ್ದಾರೆ.
ಆದರೆ ಆತ ಗಲಾಟೆ ಹೆಚ್ಚು ಮಾಡಿದ್ದಾನೆ. ಚಿಕ್ಕಮಾಳಿಗೆ ಆತನನ್ನು ನೀನು ಭೀಮನಗರದಲ್ಲಿ ಯಾರ ಮಗ ಎಂದು ಪ್ರಶ್ನಿಸಿದ್ದಾರೆ. ಆತ ಪಾಳ್ಯ ಗ್ರಾಮದ ನಾಯಕ ಸಮುದಾಯದವನು ಎಂದಿದ್ದಾನೆ. ಇದಕ್ಕೆ ಚಿಕ್ಕಮಾಳಿಗೆ ನಾವು ಹಾಗೂ ನಾಯಕ ಜನಾಂಗದವರು ಅಣ್ಣ ತಮ್ಮಂದಿರಂತೆ ಇದ್ದೇವೆ. ನೀನ್ಯಾಕೆ ಭೀಮ ನಗರದ ಹೆಸರು ಹೇಳಿಕೊಂಡು ದಬ್ಬಾಳಿಕೆ ಮಾಡುತ್ತಿದ್ದೀಯಾ ಎಂದಿದ್ದಾರೆ.ಇದರಿಂದ ಕುಪಿತನಾದ ಆತ ಕೈ ಹಿಡಿದು ಬಲವಾಗಿ ತಿರುವಿದ್ದಾನೆ. ಚಿಕ್ಕಮಾಳಿಗೆ ಕೈ ಮುರಿತಕ್ಕೊಳಗಾಗಿದೆ. ಆಗ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆ ಮೂಲಕ ಮುರಿತಕ್ಕೊಳಗಾಗಿದ್ದ ಕೈಯನ್ನು ಸರಿಪಡಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟ್ಟಣ ಠಾಣೆ ಪಿಎಸ್ಐ ವರ್ಷ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ಠಾಣಾ ಜಾಮಿನ ಮೇಲೆ ಬಿಡುಗಡೆ ಮಾಡಿದ್ದಾರೆ.ವಿಷಯ ತಿಳಿದ ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ, ಕಾರ್ಯದರ್ಶಿಗಳಾದ ಡಿ ನಟರಾಜು. ವಿ. ಗಂಗಾಧರ್, ಖಜಾಂಚಿ ರೇಣುಕೇಶ್, ಎನ್ ರಾಜೇಶ್, ಸುರೇಶ್, ರಾಜ್ಯ ಸಮಿತಿ ಸದಸ್ಯ ಗೂಳಿಪುರ ನಂದೀಶ್, ತಾಲೂಕು ಕಾರ್ಯಕರ್ತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ ಸಿದ್ದರಾಜು, ಉಪಾಧ್ಯಕ್ಷ ಎಂ ಮರಿಸ್ವಾಮಿ, ಹನೂರು ಸಂಘದ ಗೌರವಾಧ್ಯಕ್ಷ ದೇವರಾಜ ನಾಯ್ಡು, ಅಧ್ಯಕ್ಷ ಮಹಾದೇಶ್, ಕಾಮಗೆರೆ ಪ್ರಕಾಶ್ ಆಸ್ಪತ್ರೆಗೆ ತೆರಳಿ ಯೋಗ ಕ್ಷೇಮ ವಿಚಾರಿಸಿದರು.
ನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಡಿವೈಎಸ್‌ಪಿ ಧರ್ಮೇಂದ್ರಗೆ ಮನವಿ ಮಾಡಲಾಯಿತು. ಪ್ರತಿಕ್ರಿಸಿದ ಧರ್ಮೇಂದ್ರ ಗಾಯಾಳುವಿನ ಹೇಳಿಕೆ ಹಾಗೂ ವೈದ್ಯರ ಪ್ರಮಾಣ ಪತ್ರ ಪಡೆದು ಆರೋಪಿಯನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.