ಕನ್ನಡಪ್ರಭ ವಾರ್ತೆ ಸುಳ್ಯ
ಗ್ರಾಮದ ಜನರಿಗೆ ಸರ್ಕಾರಿ ಕಚೇರಿಗಳಿಗೆ ಹೋಗಿ ತಮ್ಮ ಕೆಲಸ ಕಾರ್ಯವನ್ನು ಮಾಡಲು ಕಷ್ಟವಾಗುವ ಈ ದಿನದಲ್ಲಿ ಗ್ರಾಮದ ಒಂದೇ ವೇದಿಕೆಯಲ್ಲಿ ಅಲ್ಲ ಅಧಿಕಾರಿಗಳು ಕುಳಿತು ಸಮಸ್ಯೆ ಪರಿಹರಿಸುವಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಮುನ್ನುಡಿ ಬರೆದಿರುವುದು ಶ್ಲಾಘನೀಯ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್, ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯಿತಿ, ದ.ಕ. ಪೊಲೀಸ್ ಇಲಾಖೆ, ಸುಳ್ಯ ತಾಲೂಕು ಆಡಳಿತ, ಹರಿಹರ ಕೊಲ್ಲಮೊಗರು ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೊಲ್ಲಮೊಗ್ರದಲ್ಲಿ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೊಲ್ಲಮೊಗ್ರ, ಹರಿಹರ ಗ್ರಾಮಗಳು ಗಡಿಪ್ರದೇಶ. ಕಳೆದ ಬಾರಿ ಪ್ರಳಯ ಬಂದು ಇಲ್ಲಿನ ಜನರು ತುಂಬಾ ತೊಂದರೆಗೊಳಗಾಗಿದ್ದಾರೆ. ಇಲ್ಲಿರುವ ಈ ನೈಜ ಸಮಸ್ಯೆಗಳನ್ನು ಅಧಿಕಾರಿಗಳು ಅರಿತು ಪರಿಹಾರ ಒದಗಿಸಬೇಕು. ಜನಸ್ನೇಹಿ ಕೆಲಸಗಳು ಆಗಬೇಕು ಎಂದು ಅವರು ಹೇಳಿದರು.ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಭಾಗದ ಕಷ್ಟಗಳ ಅರಿವಾಗಿದೆ. ಇಲ್ಲಿ ಬಂದಿರುವ ಅರ್ಜಿಗಳಲ್ಲಿ ಶೇ.70 ರಷ್ಟು ಅರ್ಜಿಗಳು ಭೂದಾಖಲೆ, ಹಕ್ಕುಪತ್ರ ವಿಷಯಕ್ಕೆ ಸಂಬಂಧಿಸಿದ್ದು ಇದೆ. ಭಾಗಶಃ ಅರಣ್ಯ ಸಮಸ್ಯೆ ಹೆಚ್ಚಿರುವುದರಿಂದ ಇದನ್ನು ಆದ್ಯತೆಯಲ್ಲಿ ತೆಗೆದುಕೊಂಡು ಸರ್ವೆ ನಡೆಸಿ ಗಡಿ ಗುರುತು ಮಾಡಲಾಗುವುದು. ಕೊಲ್ಲಮೊಗ್ರ, ಹರಿಹರ ಭಾಗದಲ್ಲಿ ಪೈಲಟ್ ಯೋಜನೆಯಾಗಿ ಇದನ್ನು ಕಾರ್ಯಗತ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ., ಡಿಎಫ್ಒ ಆಂಥೋನಿ ಮರಿಯಪ್ಪ, ಪುತ್ತೂರು ಉಪವಿಭಾಗದ ಸಹಾಯಕ ಕಮಿಷನರ್ ಜುಬಿನ್ ಮಹಾಪಾತ್ರ, ಸುಳ್ಯ ತಾ.ಪಂ. ಇ.ಒ. ರಾಜಣ್ಣ, ತಹಸೀಲ್ದಾರ್ ಮಂಜುನಾಥ್ ಜಿ, ಹರಿಹರ - ಕೊಲ್ಲಮೊಗ್ರ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಷ ಕುಮಾರ್ ದೇವಜನ, ಹರಿಹರ ಗ್ರಾ.ಪಂ. ಅಧ್ಯಕ್ಷ ವಿಜಯ ಅಂಙಣ, ಕೊಲ್ಲಮೊಗ್ರ ಗ್ರಾ.ಪಂ. ಅಧ್ಯಕ್ಷೆ ಜಯಶ್ರೀ ಚಾಂತಾಳ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಮಹಾರಾಷ್ಟ್ರ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ಪ್ರಧಾನ ಕಾರ್ಯದರ್ಶಿ ರಾಜೇಶ್, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವೇದಿಕೆಯಲ್ಲಿ ಇದ್ದರು. ಬಂಗ್ಲೆಗುಡ್ಡೆ ಶಾಲಾವಿದ್ಯಾರ್ಥಿಗಳು ಪ್ರಾರ್ಥಿಸಿದರು.ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತರಾದ ಬಾಲಕೃಷ್ಣ ಭೀಮಗುಳಿ ಕಾರ್ಯಕ್ರಮ ನಿರೂಪಿಸಿದರು.