ಕಾರವಾರ: ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿವರ್ಷ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ ಟ್ಯಾಗೋರ್ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ ಸಹ ಮೂವರು ಪತ್ರಕರ್ತರಿಗೆ ಪ್ರಶಸ್ತಿ ಘೋಷಿಸಲಾಗಿದೆ.
ವಿದ್ಯುನ್ಮಾನ ಮಾಧ್ಯಮ ವಿಭಾಗದಿಂದ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಜಿಲ್ಲಾ ವರದಿಗಾರ ಭರತ್ ರಾಜ್ ಕಲ್ಲಡ್ಕ, ಮುದ್ರಣ ಮಾಧ್ಯಮ ವಿಭಾಗದಿಂದ ನುಡಿಜೇನು ಪತ್ರಿಕೆಯ ಉಪಸಂಪಾದಕ ಎಸ್.ಎಸ್. ಸಂದೀಪ್ ಸಾಗರ್, ಪ್ರಜಾವಾಣಿ ಛಾಯಾಗ್ರಾಹಕ ದಿಲೀಪ್ ರೇವಣಕರ್‌ಗೆ ಈ ಬಾರಿ ಪ್ರಶಸ್ತಿ ನೀಡಲು ಸಮಿತಿ ನಿರ್ಧರಿಸಿದೆ.ಜಿಲ್ಲಾ ಪತ್ರಿಕಾಭವನ ನಿರ್ವಹಣಾ ಸಮಿತಿಯಿಂದ ಕಾರವಾರದಲ್ಲಿ ಆ.17ರಂದು ಪತ್ರಿಕಾ ದಿನಾಚರಣೆ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಟಿ.ಬಿ. ಹರಿಕಾಂತ್ ತಿಳಿಸಿದ್ದಾರೆ.
ಭರತ್ ರಾಜ್ ಕಲ್ಲಡ್ಕ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ ಗ್ರಾಮದವರಾಗಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುಮಾರು 11 ವರ್ಷ ಅನುಭವ ಹೊಂದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 2019ರಿಂದ ಈ ತನಕ ಸುವರ್ಣ ವಾಹಿನಿಯ ಜಿಲ್ಲಾ ವರದಿಗಾರನಾಗಿ ಅನೇಕ ಜನಪರ ಸುದ್ದಿಗಳನ್ನು ಪ್ರಕಟಿಸಿ ಗಮನ ಸೆಳೆದ ಪತ್ರಕರ್ತರಾಗಿದ್ದಾರೆ.ಎಸ್.ಎಸ್. ಸಂದೀಪ್ ಸಾಗರ್ ಮೂಲತಃ ಸಿದ್ದಾಪುರ ತಾಲೂಕಿನ ಶಿರಳಗಿ ಗ್ರಾಮದವರು. 2015ರಲ್ಲಿ ಪ್ರಜಾಟಿವಿಯ ಉತ್ತರ ಕನ್ನಡ ಜಿಲ್ಲಾ ವರದಿಗಾರನಾಗಿ ವೃತ್ತಿ ಪ್ರಾರಂಭಿಸಿದರು. ಕಳೆದ ಒಂದು ವರ್ಷದಿಂದ ನುಡಿಜೇನು ದಿನಪತ್ರಿಕೆಯ ಉಪ ಸಂಪಾದಕರಾಗಿ ಜಿಲ್ಲೆಯಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುಮಾರು 11 ವರ್ಷಗಳ ಸೇವಾನುಭವವಿದ್ದು, ಸರ್ಕಾರದ ಕಣ್ಣು ತೆರೆಸುವಂತಹ ಅನೇಕ ವರದಿಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಛಾಯಾಗ್ರಾಹಕ ದಿಲೀಪ್ ರೇವಣಕರ್ 11 ವರ್ಷಗಳಿಂದ ಪ್ರಜಾವಾಣಿ ಪತ್ರಿಕೆಯ ಛಾಯಾಗ್ರಾಹಕನಾಗಿ ಸೇವೆ ಸಲ್ಲಿಸಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಕಾರ್ಯದರ್ಶಿ ಶೇಷಗಿರಿ ಮುಂಡಳ್ಳಿ, ಪತ್ರಕರ್ತರಾದ ವಸಂತಕುಮಾರ್ ಕತಗಾಲ್, ನವೀನ್ ಸಾಗರ್, ಸಂದೀಪ್ ಸಾಗರ್ ಎಂ.ವಿ, ರಾಜೇಶ್ ವೈದ್ಯ, ಕಿಶನ್ ಗುರವ್, ಗಣೇಶ್ ಹೆಗಡೆ, ಪ್ರವೀಣ್ ಹೊಸಂತೆ, ಅವಿನಾಶ್ ಆಗೇರ್ ಇದ್ದರು.