ಹೊಸತನಕ್ಕೆ ತೆರೆದುಕೊಂಡರಷ್ಟೇ ಪತ್ರಕರ್ತರಿಗೆ ಭವಿಷ್ಯ: ಸುದರ್ಶನ ಚನ್ನಂಗಿಹಳ್ಳಿ

KannadaprabhaNewsNetwork |  
Published : Aug 01, 2026, 01:30 AM IST
ಪೋಟೋ: 31ಎಸ್‌ಎಂಜಿಕೆಪಿ01ಶಿವಮೊಗ್ಗದ ಪತ್ರಿಕಾಭವನದಲ್ಲಿ ಶುಕ್ರವಾರ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮದ ವಿವಿಧ ವಿಭಾಗದಲ್ಲಿ ಸಾಧಕರನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಸೋಷಿಯಲ್ ಮೀಡಿಯಾ ಬಂದ ಮೇಲೆ ಎಲ್ಲರೂ ಪತ್ರಕರ್ತರಾಗಿದ್ದಾರೆ. ಆದರೆ, ಅವರೆಲ್ಲರೂ ಜವಾಬ್ದಾರಿಯುತ ಪತ್ರಕರ್ತರಲ್ಲ. ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಅರಿತು ವರದಿ ಮಾಡುವವರೇ ನಿಜವಾದ ಪತ್ರಕರ್ತರು ಎಂದು ಹಿರಿಯ ಪತ್ರಕರ್ತ ಸುದರ್ಶನ ಚನ್ನಂಗಿಹಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸೋಷಿಯಲ್ ಮೀಡಿಯಾ ಬಂದ ಮೇಲೆ ಎಲ್ಲರೂ ಪತ್ರಕರ್ತರಾಗಿದ್ದಾರೆ. ಆದರೆ, ಅವರೆಲ್ಲರೂ ಜವಾಬ್ದಾರಿಯುತ ಪತ್ರಕರ್ತರಲ್ಲ. ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಅರಿತು ವರದಿ ಮಾಡುವವರೇ ನಿಜವಾದ ಪತ್ರಕರ್ತರು ಎಂದು ಹಿರಿಯ ಪತ್ರಕರ್ತ ಸುದರ್ಶನ ಚನ್ನಂಗಿಹಳ್ಳಿ ಹೇಳಿದರು.

ಇಲ್ಲಿನ ಪತ್ರಿಕಾಭವನದಲ್ಲಿ ಶುಕ್ರವಾರ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಇವತ್ತು ಸೋಷಿಯಲ್ ಮೀಡಿಯಾ ದುರುಪಯೋಗ ಹೆಚ್ಚಾಗ ತೊಡಗಿದ್ದು, ಸಮಾಜದ ಮೇಲೆ ಗಂಭೀರ ಪರಿಣಾಮವನ್ನು ಭೀರುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ನಿಯಂತ್ರಿಸುವ ಮಟ್ಟಕ್ಕೆ ಸೋಷಿಯಲ್ ಮೀಡಿಯಾ ಹೋಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಪಂಚದ ಮೂಲೆಯಲ್ಲಿ ಏನೇ ಘಟನೆ ನಡೆದರೂ ಅಂಗೈನಲ್ಲಿ ನೋಡುವ ಅವಕಾಶವನ್ನು ಡಿಜಿಟಲ್ ಮಾಧ್ಯಮ ಒದಗಿಸಿಕೊಟ್ಟಿದೆ. ಆದರೆ ದುರುಪಯೋಗ ಹೆಚ್ಚಿದೆ. ಡಿಜಿಟಲ್ ಕ್ರಾಂತಿಯ ನಡುವೆ ಪತ್ರಿಕೆಗಳು ಇಂದಿಗೂ ವಿಶ್ವಾಸ ಉಳಿಸಿಕೊಂಡಿವೆ. ಪತ್ರಕರ್ತರ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ. ಜನಸಾಮಾನ್ಯರ ಧ್ವನಿಯಾಗಿ ನಾವು ಕೆಲಸ ಮಾಡಬೇಕು ಎಂದರು.

ಯುವ ಪತ್ರಕರ್ತರಲ್ಲಿ ಕಲಿಕಾ ಮಟ್ಟ ಕುಸಿದಿದೆ. ಪ್ರಜ್ಞಾವಂತ ಪತ್ರಕರ್ತರ ಸಂಖ್ಯೆ ಕಡಿಮೆಯಾಗಿದೆ. ಓದುವ, ಕಲಿಯುವ ಆಸಕ್ತಿ ಯುವ ಪತ್ರಕರ್ತರಲ್ಲಿ ಕುಂದಿದೆ. ಅವಕಾಶಕ್ಕೆ ತಕ್ಕಂತೆ ಪತ್ರಕರ್ತರು ಬದಲಾವಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎ.ಐ ಎಲ್ಲಾ ಕ್ಷೇತ್ರವನ್ನು ಆವರಿಸಿಕೊಂಡಿದೆ. ಮುಂಬರುವ ದಿನಗಳಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳನ್ನು ಕಳೆದುಕೊಳ್ಳಲಿದ್ದಾರೆ. ಇದಕ್ಕೆ ಮಾಧ್ಯಮ ಕ್ಷೇತ್ರ ಹೊರತಾಗಿಲ್ಲ. ಹೊಸತನಕ್ಕೆ ತರೆದುಕೊಂಡರೆ ಎಲ್ಲರಿಗೂ ಅವಕಾಶಗಳು ಇದ್ದೇ ಇರುತ್ತವೆ. ಕೌಶಲ್ಯವನ್ನು ಎಲ್ಲರೂ ಕರಗತ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘ ರಾಜ್ಯ ಘಟಕ ಅಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅತಿಥಿಯಾಗಿ ಮಾತನಾಡಿ, ರಾಜ್ಯದಲ್ಲಿ ಮಾದರಿಯಾಗಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಕಾರ್ಯ ನಿರ್ವಹಿಸುತ್ತಿದೆ. ಟ್ರಸ್ಟ್ ನಲ್ಲಿ ಅಥಿತಿ ಗೃಹ ಮಾಡುವುದಾದರೆ ಅನುದಾನ ಕೊಡಿಸುವ ಜವಾಬ್ದಾರಿ ನಮ್ಮದು ಎಂದ ಅವರು, ಪ್ರಜಾಪ್ರಭುತ್ವದ ಜೀವಾಳವಾಗಿ ಪತ್ರಿಕಾರಂಗ ಕಾರ್ಯನಿರ್ವಹಿಸುತ್ತಿದೆ. ಸೋಷಿಯಲ್ ಮೀಡಿಯಾವನ್ನು ಇಂದು ನಿಯಂತ್ರಿಸುವ ಅವಶ್ಯಕತೆ ಇದೆ. ವಸ್ತುನಿಷ್ಠ ವರದಿ ಮಾಡುವ ಅಗತ್ಯ ಇದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೆಸ್ ಟ್ರಸ್ಟ್ ಅಧ್ಯಕ್ಷರಾದ ಎನ್.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ನಾನು ಕಂಡಂತೆ 43 ವರ್ಷದಲ್ಲಿ ಪತ್ರಿಕೋದ್ಯಮ ಸವಿಸ್ತಾರವಾಗಿ ವಿಕಸನಗೊಂಡಿದೆ. ಮುದ್ರಣ ಮತ್ತು ದೃಶ್ಯ ಮಾಧ್ಯಮದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ವಸ್ತುನಿಷ್ಠ ಸುದ್ದಿಕೊಡುವ ಪತ್ರಿಕೆಗಳು ಇಂದಿಗೂ ಮಾಧ್ಯಮ ಕ್ಷೇತ್ರದ ಘನತೆಯನ್ನು ಎತ್ತಿ ಹಿಡಿದಿವೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಪ್ರೆಸ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನಾಗರಾಜ್ ನೇರಿಗೆ ಸ್ವಾಗತಿಸಿದರು. ಮೋಹನ್ ಕೃಷ್ಣ ನಿರೂಪಿಸಿದರು. ಸೌಮ್ಯ ಪ್ರಾರ್ಥಿಸಿದರು. ಕಿರಣ್ ಕಂಕಾರಿ ವಂದಿಸಿದರು.

.

ಸಾಧಕರಿಗೆ ಆತ್ಮೀಯ ಸನ್ಮಾನ

ವಾರ್ತಾ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಬಿ.ಎಸ್. ತಿಮ್ಮೋಳಿ, ಸುವರ್ಣ ನ್ಯೂಸ್ ಹಿರಿಯ ವರದಿಗಾರ ರಾಜೇಶ್ ಕಾಮತ್, ಹಿರಿಯ ಪತ್ರಕರ್ತ ಹಾಗೂ ಸ್ಥಳೀಯ ಪತ್ರಿಕೆಯ ಸಂಪಾದಕ ಎಸ್.ಕೆ.ಗಜೇಂದ್ರ ಸ್ವಾಮಿ, ಹಿರಿಯ ಪತ್ರಿಕಾ ಛಾಯಾಗ್ರಹಕ ಎಸ್.ಕೆ.ದಿನೇಶ್, ಪತ್ರಿಕೆ ಮುದ್ರಣ ವಿಭಾಗದಿಂದ ರಾಘವೇಂದ್ರ, ಸಹಾಯಕ ವ್ಯವಸ್ಥಾಪಕ ಟಿ.ಸಿ.ಮಂಜುನಾಥ್, ವಿಡಿಯೋ ಜರ್ನಲಿಸ್ಟ್ ಕೆ.ಎ.ಮಹೇಶ್, ಹಿರಿಯ ವ್ಯವಸ್ಥಾಪಕ (ಮಾರ್ಕೇಟಿಂಗ್) ಡಿ.ಕೆ.ಕಾರ್ತಿಕ್, ಪತ್ರಿಕೆ ಡಿಸೈನರ್ ಎಸ್.ಪಿ.ಶೋಭಾ, ಪತ್ರಿಕಾ ವಿತರಕ ಡಿ.ಶಿವಪ್ಪ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಇದೇ ಸಂದರ್ಭ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಚರಣೆ ಕಾರ್ಯಕ್ರಮದಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಸ್ತುನಿಷ್ಠ ವರದಿ ಪತ್ರಿಕೋದ್ಯಮದ ಮೂಲ ಧರ್ಮ: ರಶ್ಮಿ ಎಸ್‌.
33 ವರ್ಷಗಳ ಸರ್ಕಾರಿ ಸೇವೆ ತೃಪ್ತಿ ತಂದಿದೆ: ರವಿಕುಮಾರ್‌ ಅಭಿಮತ