ಕನ್ನಡಪ್ರಭ ವಾರ್ತೆ ಕೋಲಾರಸತ್ಯಶೋಧನೆಯ ಜವಾಬ್ದಾರಿ ಹೊತ್ತ ಪತ್ರಕರ್ತರು ಸುದ್ದಿ ಮಾಡುವಾಗ ಅದರಲ್ಲಿ ವಾಸ್ತವಾಂಶವಿರಬೇಕೇ ಹೊರತೂ ತಮ್ಮ ಅಭಿಪ್ರಾಯಗಳಿಗೆ ಅವಕಾಶ ಇರಬಾರದು, ವೃತ್ತಿಧರ್ಮಕ್ಕೆ ಕುತ್ತು ಬಾರದಂತೆ ಮತ್ತು ಸಮಾಜದ ಸ್ವಾಸ್ಥ್ಯ ಹಾಳಾಗದಂತೆ ಎಚ್ಚರವಹಿಸಬೇಕು. ಬರಹದಲ್ಲಿ ಸಮಾಜದ ಹಿತವಿರಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಕರೆ ನೀಡಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾ ದಿನಾಚರಣೆಗೆ ಚಾಲನೆ ನೀಡಿ, ವಾರ್ಷಿಕ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಸನ್ಮಾನ ಮತ್ತು ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ಭಾಷೆಯ ಮೇಲೆ ಹಿಡಿತ ಮುಖ್ಯಸುದ್ದಿ ಮಾಡುವಾಗ ಭಾಷೆಮೇಲೆ ಹಿಡಿತ ಇರಬೇಕು, ಪ್ರೌಢಿಮೆಯೂ ಅಗತ್ಯ. ಪ್ರತಿ ಪತ್ರಿಕೆಗೂ ತನ್ನದೇ ಆದ ವಿನ್ಯಾಸ, ಬರಹದ ಶೈಲಿ ಇರುತ್ತದೆ. ತಾವು ೧೯೯೨ ರಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭಿಸಿದ್ದನ್ನು ನೆನಪಿಸಿಕೊಂಡ ಜಿಲ್ಲಾಧಿಕಾರಿಗಳು, ತಮಗೆ ಮಾತೃಬೇರು ಪತ್ರಿಕೋದ್ಯಮ ಎಂದರು.ಅಧ್ಯಯನಶೀಲರಾಗಬೇಕು
ಅಧ್ಯಯನ ಶೀಲತೆ ಪತ್ರಕರ್ತರಿಗೆ ಭೂಷಣ ಎಂದ ಅವರು, ಆಗ ಜ್ಞಾನ ವಿಸ್ತಾರವಾಗುತ್ತದೆ, ಪತ್ರಿಕೋದ್ಯವೂ ಒಂದು ಸಾಹಿತ್ಯ ಆದರೆ ಅದು ತರಾತುರಿಯಲ್ಲಿ ಬರೆದ ಸಾಹಿತ್ಯ ಎಂಬ ಮಾತಿದೆ, ಸತ್ಯಶೋಧನೆಯ ಸಾಮರ್ಥ್ಯವಿರುವ ಪತ್ರಕರ್ತ ಪ್ರತಿಫಲಾಪೇಕ್ಷೆ ಇಲ್ಲದೇ ಕೆಲಸ ಮಾಡಬೇಕಾಗುತ್ತದೆ ಎಂದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಪತ್ರಕರ್ತರಿಗೆ ಆಪತ್ಕಾಲದಲ್ಲಿ ನೆರವಾಗುವ ಉದ್ದೇಶದಿಂದ ಕ್ಷೇಮಾಭಿವೃದ್ದಿ ನಿಧಿ ಸ್ಥಾಪಿಸಿ ಅದಕ್ಕ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಬಯಸಿದಾಗ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ೨೫ ಲಕ್ಷ ರೂ ಕೊಡಿಸಿದ್ದು,ಈಗ ೩೦ ಲಕ್ಷ ಇಡುಗಂಟು ಆಗಿದೆ ಎಂದರು.ಪ್ರತಿಭಾವಂತ ಮಕ್ಕಳಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಪತ್ರಕರ್ತರ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ನಿಖಿಲ್, ರಾಜ್ಯ ಪತ್ರಕರ್ತರ ಸಂಘದ ಖಜಾಂಚಿ ವಾಸುದೇವಹೊಳ್ಳಿ, ರಾಜ್ಯಕಾರ್ಯಕಾರಿ ಸದಸ್ಯರಾದ ಕೆ.ಎಸ್.ಗಣೇಶ್, ವಿ.ಮುನಿರಾಜು, ಜಿಲ್ಲಾ ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್, ರೈತಸಂಘದ ಕಲ್ವಮಂಜಲಿ ಶಿವಣ್ಣ ಮತ್ತಿತರರಿದ್ದರು.