ಸ್ಥಿತಿವಂತರು ಸಮಾಜದ ಅಭಿವೃದ್ಧಿಗೆ ಶ್ರಮಿಸಲಿ: ಶಾಸಕ ಆರ್‌.ವಿ.ದೇಶಪಾಂಡೆ

KannadaprabhaNewsNetwork | Published : Jul 2, 2025 12:20 AM
1ಎಚ್.ಎಲ್.ವೈ-1(ಎ): ದೇಶಪಾಂಡೆ ಆರ್ಸೆಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ವಿ.ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಸಂಸ್ಥಾಪಕರ ದಿನಾಚರಣೆಗೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ದಂಪತಿಗಳು ಚಾಲನೆ ನೀಡಿದರು. | Kannada Prabha

ಹಳಿಯಾಳ ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಭಾಂಗಣದಲ್ಲಿ ಶ್ರೀ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಮಂಗಳವಾರ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ವಿಶೇಷ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮ ನಡೆಯಿತು.

ಹಳಿಯಾಳ: ಹಣ ಗಳಿಸುವುದೊಂದೇ ನಮ್ಮ ಜೀವನದ ಉದ್ದೇಶವಾಗಿರಬಾರದು. ಶಕ್ತಿವಂತರು, ಸ್ಥಿತಿವಂತರು ಆದಷ್ಟು ಸಮಾಜದ ಅಭಿವೃದ್ಧಿಗಾಗಿ ಮುಂದಾಗಬೇಕು. ಈ ದಿಸೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ದಾನ, ದೇಣಿಗೆ ನೀಡಲು ಮುಂದಾಗಬೇಕು ಎಂದು ವಿಆರ್‌ಡಿ ಟ್ರಸ್ಟ್ ಅಧ್ಯಕ್ಷ ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದರು.

ಮಂಗಳವಾರ ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಭಾಂಗಣದಲ್ಲಿ ಶ್ರೀ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ವಿಶೇಷ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ರುಡ್‌ಸೆಟ್ ಸಂಸ್ಥೆಯಲ್ಲಿ ಈ ವರೆಗೆ 27 ಸಾವಿರಕ್ಕೂ ಹೆಚ್ಚು ಶಿಬಿರಾರ್ಥಿಗಳು ತರಬೇತಿ ಪಡೆದಿದ್ದು, ಅದರಲ್ಲಿ ಶೇ. 75 ಜನ ಸ್ವ ಉದ್ಯೋಗ ಆರಂಭಿಸಿದ್ದಾರೆ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಯಲ್ಲಿ ಮಾನವೀಯ ಮೌಲ್ಯಗಳನ್ನು ನೀಡಲು ಕಾಳಜಿ ವಹಿಸಬೇಕು ಎಂದರು.

ಕೆರೆ ಸಂರಕ್ಷಕ, ಬೆಂಗಳೂರಿನ ಆನಂದ ಮಲ್ಲಿಗವಾಡ ಮಾತನಾಡಿ, ಜೀವಜಲದ ಹಾಗೂ ಜೀವಮೂಲಗಳ ಸಂರಕ್ಷಣೆಗಾಗಿ ನಾವು ಜನಾಂದೋಲನ ಆರಂಭಿಸಬೇಕಾಗಿದೆ ಎಂದರು.

ಕೆರೆ ಸಂರಕ್ಷಣೆಗೆ ನನ್ನ ಜೀವ ಮುಡಿಪಾಗಿಟ್ಟಿದ್ದೇನೆ. ಈ ವರೆಗೆ 117 ಕೆರೆಗಳಿಗೆ ಮರುಜೀವ ನೀಡಿದ್ದು, ಅದರಲ್ಲಿ ಹಳಿಯಾಳ ತಾಲೂಕಿನಲ್ಲಿ ಕುಂಬಾರಕೆರೆಯೂ ಒಂದಾಗಿದೆ. ಆರ್‌.ವಿ. ದೇಶಪಾಂಡೆ ಅವರ ಸಹಕಾರದಿಂದ ತಾಲೂಕಿನಲ್ಲಿ 20ರಿಂದ 25 ಕೆರೆಗಳನ್ನು ಅಭಿವೃದ್ಧಿ ಪಡಿಸಲು ಯೋಜನೆಗಳನ್ನು ರೂಪಿಸುತ್ತಿದ್ದೇನೆ ಎಂದರು. ಮಂಚಿಕೆರೆಯ ಮನಸ್ವಿನಿ ವಿದ್ಯಾಲಯದ ಸಂಸ್ಥಾಪಕಿ ರೇಖಾ ಭಟ್ ಕೋಟೆಮನೆ ಮಾತನಾಡಿ, ಶಿಕ್ಷಣದ ಜತೆಯಲ್ಲಿ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಕಲಿಯಬೇಕು. ಶಿಕ್ಷಣವಂತರಾಗುವ ಜತೆಯಲ್ಲಿ ಚಾರಿತ್ರ್ಯವಂತರಾಗುವ ಅವಶ್ಯಕತೆಯಿದೆ. ಮಕ್ಕಳು ವಿದ್ಯಾವಂತರು ಹಾಗೂ ಸಂಸ್ಕಾರವಂತರಾಗಿ ಬೆಳೆದರೆ ನಮ್ಮ ಕುಟುಂಬ, ಅದರೊಟ್ಟಿಗೆ ಸಮಾಜ ಮತ್ತು ನಾಡು ಬದಲಾಗಲಿದೆ ಎಂದರು.

ವಿಆರ್‌ಡಿಎಂ ಟ್ರಸ್ಟ್ ಧರ್ಮದರ್ಶಿ ಪ್ರಸಾದ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸನ್ಮಾನ: ಹಳಿಯಾಳ ವಿಧಾನಸಭಾ ಕ್ಷೇತ್ರ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯ ಮತ್ತು ಉತ್ತರ ಕನ್ನಡ ಜಿಲ್ಲೆಯ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿದ 36 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ವಿ.ಆರ್.ಡಿ.ಎಂ. ಟ್ರಸ್ಟ್ ಧರ್ಮದರ್ಶಿ ರಾಧಾಬಾಯಿ ದೇಶಪಾಂಡೆ ಹಾಗೂ ಕಾರ್ಯದರ್ಶಿ ಶ್ಯಾಮ್‌ ಕಾಮತ ಇದ್ದರು.

ವಿ.ಆರ್.ಡಿ.ಎಂ. ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಸ್ವಾಗತಿಸಿದರು. ಡಿಪಿಐಟಿಐ ಪ್ರಾಚಾರ್ಯ ದಿನೇಶ ನಾಯ್ಕ ವಂದಿಸಿದರು. ಶ್ರೀಧರ ಬುಳ್ಳಣ್ಣನವರ ಹಾಗೂ ನೆಲ್ಸಿ ಗೋನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು.

ಮಾಧ್ಯಮ ಪ್ರಜಾಪ್ರಭುತ್ವದ ಕಣ್ಣು: ಸಮಾಜಕ್ಕೆ ಸತ್ಯ, ನಿಖರ ಮತ್ತು ವಸ್ತು ನಿಷ್ಠ ಮಾಹಿತಿ ಒದಗಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುವ ಹಾಗೂ ಪ್ರಜಾಪ್ರಭುತ್ವದ ಕಣ್ಣು ಕಿವಿಗಳಾಗಿ ಕಾರ್ಯ ನಿರ್ವಹಿಸುವ ಮಹತ್ತರವಾದ ಜವಾಬ್ದಾರಿಯು ಇಂದು ಮಾಧ್ಯಮ ಮೇಲಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜಕ್ಕೆ ಹಾನಿಕಾರಕ ಯಾವುದೇ ವಿಷಯಗಳಿಗೆ ಹೆಚ್ಚಿನ ಪ್ರಚಾರ ನೀಡಬಾರದು, ಸಮಾಜದ ದುರ್ಬಲ ವರ್ಗದವರ, ಶೋಷಿತರ, ರೈತರ, ಕಾರ್ಮಿಕರ, ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಧ್ವನಿಯಾಗಿರಬೇಕು, ಜನಸಾಮಾನ್ಯರ ಸಮಸ್ಯೆ ಸರ್ಕಾರದ ಗಮನಕ್ಕೆ ತಂದು ಅದಕ್ಕೆ ಪರಿಹಾರ ಸೂಚಿಸಬೇಕು ಹಾಗೂ ಸರ್ಕಾರದ ಯೋಜನೆಗಳು ಅರ್ಹರಿಗೆ ದೊರಕುವ ಹಾಗೇ ನಿಗಾ ವಹಿಸಬೇಕು ಎಂದರು.

ವಿವಿಧ ಕಾರ್ಯಕ್ರಮಗಳು: ಹಳಿಯಾಳ ವಿ.ಆರ್.ಡಿ ಟ್ರಸ್ಟ್ ಜು. 1ರಂದು ತನ್ನ ಸಂಸ್ಥಾಪಕರ ದಿನಾಚರಣೆ ಆಚರಿಕೊಂಡಿದೆ. ಈ ಹಿನ್ನಲೆಯಲ್ಲಿ ಐದು ದಿನಗಳವರೆಗೆ ಹಳಿಯಾಳ ವಿಧಾನ ಸಭಾ ಕ್ಷೇತ್ರಾದ್ಯಂತ ವಿವಿಧ ಕಾರ್ಯಕ್ರಮ, ತರಬೇತಿ ಕಾರ್ಯಾಗಾರ, ಆರೋಗ್ಯ ಶಿಬಿರ, ವಸ್ತು ಪ್ರದರ್ಶನ, ಆರೋಗ್ಯ ಶಿಬಿರ ಹಮ್ಮಿಕೊಂಡಿದೆ ಎಂದು ತಿಳಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಪುರಸಭಾ ಮಾಜಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ವಿ.ಆರ್. ಡಿ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಇದ್ದರು.