ಪುತ್ತೂರು ತಾಲೂಕು ತುಳುವ ಮಹಾಸಭೆ ಸಂಚಾಲಕಿ ಶ್ರೀಶಾ ವಾಸವಿ

KannadaprabhaNewsNetwork | Published : Jul 2, 2025 12:19 AMUpdated   : Jul 02 2025, 12:20 AM IST
ಫೋಟೋ: ೨೬ಪಿಟಿಆರ್-ಶ್ರೀಶಾವಾಸವಿ | Kannada Prabha

ಸಾರಾಂಶ

ಪುತ್ತೂರು ತಾಲೂಕು ತುಳುವ ಮಹಾಸಭೆ ಸಂಚಾಲಕಿಯಾಗಿ ತುಳುನಾಡಿನ ಭಾಷಾ, ಸಾಹಿತ್ಯ, ಲಿಪಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಹುಮುಖ ಪ್ರತಿಭೆ ಶ್ರೀಶಾವಾಸವಿ (ವಿದ್ಯಾಶ್ರೀ ಎಸ್) ನೇಮಕಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ತಾಲೂಕು ತುಳುವ ಮಹಾಸಭೆ ಸಂಚಾಲಕಿಯಾಗಿ ತುಳುನಾಡಿನ ಭಾಷಾ, ಸಾಹಿತ್ಯ, ಲಿಪಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಹುಮುಖ ಪ್ರತಿಭೆ ಶ್ರೀಶಾವಾಸವಿ (ವಿದ್ಯಾಶ್ರೀ ಎಸ್) ನೇಮಕಗೊಂಡಿದ್ದಾರೆ.

೨೦೧೩ರಿಂದ ತುಳು ಲಿಪಿಯ ಅಭ್ಯಾಸ ಹಾಗೂ ಶಾಸನ ಅಧ್ಯಯನಕ್ಕೆ ತೊಡಗಿಕೊಂಡ ಶ್ರೀಶಾವಾಸವಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಆರಂಭವಾದ ವಾರಾಂತ್ಯ ತುಳು ಲಿಪಿ ತರಗತಿಗಳನ್ನು ಕಾರ್ಕಳ, ಉಡುಪಿ, ಕಾಸರಗೋಡು, ಪೈವಳಿಕೆ, ಮಂಗಳೂರು, ಮೂಡಬಿದ್ರೆ ಹಾಗೂ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ನಡೆಸಿದ್ದಾರೆ. ಮುಂಬೈ, ಸೂರತ್, ದುಬೈ, ಮಸ್ಕತ್‌ನಲ್ಲೂ ಆನ್‌ಲೈನ್ ತರಗತಿಗಳನ್ನು ನೀಡಿರುವ ಅವರು, ಆಕಾಶವಾಣಿಯಲ್ಲಿ ಭಾಷಣ, ತುಳುಪರ ಹೋರಾಟಗಳಲ್ಲಿ ಪಾಲ್ಗೊಂಡಿದ್ದಾರೆ.

ಗ್ರಾಫಿಕ್ ಡಿಸೈನರ್ ಆಗಿರುವ ಅವರು ‘ತುಳು ಲಿಪಿಟ್ ಎನ್ನ ಪುದರ್ ಅಭಿಯಾನ’ದ ಮೂಲಕ ಶೀರ್ಷಿಕೆಗಳು, ಬ್ಯಾನರ್‌ಗಳು, ಪತ್ರಿಕೆಗಳಿಗೆ ವಿನ್ಯಾಸಗಳ ಮೂಲಕ ತುಳುವಿನ ಸೇವೆ ಮಾಡುತ್ತಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಅವರು ತುಳು, ಕನ್ನಡ, ತೆಲುಗು ಭಾಷೆಗಳಲ್ಲಿ ಕಥೆ, ಕಾದಂಬರಿ, ಲೇಖನಗಳನ್ನು ಬರೆಯುತ್ತಿದ್ದು, ‘ಸಿರಿಗಂಗೆ’, ‘ಉಡಲ ದುನಿಪು’, ‘ಗೇನೊದ ಬುಲೆ’ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಹತ್ತಕ್ಕೂ ಅಧಿಕ ಕೃತಿಗಳು ಮುದ್ರಣದ ಅಂಚಿನಲ್ಲಿದೆ. ‘ಪ್ರತಿಲಿಪಿ’ ಬರಹಗಾರರ ಡಿಜಿಟಲ್ ವೇದಿಕೆಯಲ್ಲಿ ಹಲವು ಸಾಹಿತ್ಯ ಪ್ರಕಟವಾಗಿವೆ. ಯಕ್ಷಗಾನ, ತಾಳಮದ್ದಳೆ, ನಾಟಕ, ಚಲನಚಿತ್ರ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದು, ಚಲನಚಿತ್ರಗಳಿಗೆ ಸಾಹಿತ್ಯ ಹಾಗೂ ಸಹ ನಿರ್ದೇಶನದ ಜೊತೆಗೆ ಪೋಷಕನಟಿಯಾಗಿ ನಟಿಸಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಅವರು ‘ತುಳು ಅಪ್ಪೆಕೂಟ ಪುತ್ತೂರು’ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ‘ನಂದಲ, ಬರವು-ಸರವು’ ಎಂಬ ತುಳು ಲಿಪಿ ಪತ್ರಿಕೆಯಲ್ಲಿ ಸಂಪಾದಕರಾಗಿದ್ದು, ಪ್ರಸ್ತುತ ‘ಪೂವರಿ’ ಪತ್ರಿಕೆಯಲ್ಲಿ ಉಪಸಂಪಾದಕಿ ಹಾಗೂ ಅಂಕಣಕಾರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ ಸದಸ್ಯರಾಗಿದ್ದಾರೆ.

PREV