ಕನ್ನಡಪ್ರಭ ವಾರ್ತೆ ಬೀದರ್
ಸಮಾಜದಲ್ಲಿ ಪತ್ರಿಕೆ ಕುರಿತು ಕುತೂಹಲ ಕಡಿಮೆಯಾಗಿದೆ. ಇಂದು ಜನರು ಮಾಧ್ಯಮದತ್ತ ನೋಡುವ ದೃಷ್ಠಿಯನ್ನೇ ಬದಲಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆವಿ ಪ್ರಭಾಕರ ಅಸಮಾಧಾನ ವ್ಯಕ್ತಪಡಿಸಿದರು.ಅವರು ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ, ಪತ್ರಿಕೆಗಳು ಕಾರ್ಪೋರೆಟ್ ಕಂಪನಿ ಹಿಡಿತಕ್ಕೆ ಸಿಲುಕಿದಂತಾಗಿವೆ. ಪತ್ರಕರ್ತರಲ್ಲಿ ಎರಡು ರೀತಿ ಒಂದು ಕಾರ್ಯನಿರತ ಮತ್ತೋಂದು ಕಾರ್ಯ ಮರೆತ ಪತ್ರಕರ್ತರು ಇದ್ದಾರೆ ಎಂದರು.
ಬೀದರಗೆ ಬಂದರೆ ಮಿನಿ ಭಾರತಕ್ಕೆ ಬಂದ ಅನುಭವವಾಗುತ್ತದೆ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ಖ ಸೇರಿ ಎಲ್ಲಾ ಭಾಷೆ ಜನರಿದ್ದಾರೆ. ಇದು ಬೀದರಗೆ ನಾನು ಬರುತ್ತಿರುವುದು ಎರಡನೇ ಭೇಟಿಯಾಗಿದೆ. ಗ್ರಾಮೀಣ ಪತ್ರಕರ್ತರಿಗೆ ಪಾಸ ನೀಡುವ ಕುರಿತು ನಿಯಮ ರೂಪಿಸುತ್ತಿದ್ದು ಇನ್ನೂ ಒಂದು ತಿಂಗಳಲ್ಲಿ ಪತ್ರಕರ್ತರ ಕೈ ಸೇರಲಿವೆ ಎಂದರು.ಆರೋಗ್ಯ ಯೋಜನೆ ಮತ್ತು ಪತ್ರಕರ್ತರಿಗೆ ನೀಡುವ ಪಿಂಚಣಿ 12 ಸಾವಿರ ರು.ನಿಂದ 15 ಸಾವಿರಕ್ಕೆ ಹೆಚ್ಚಿಸುವ ಪ್ರಸ್ತಾವನೆ ಇದೆ. ಪತ್ರಕರ್ತರು ಸಮಾಜ ಹಾಗೂ ಸರ್ಕಾರದ ಕೊಂಡಿಯಾಗಿ ಕೆಲಸ ಮಾಡಬೇಕೆಂದು ಹೇಳಿದರು.ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ.ಗಿರೀಶ್ ಬದೋಲೆ, ಎಸ್ಪಿ ಪ್ರದೀಪ ಗುಂಟಿ, ಬೀದರ್ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಡಾ.ಸುರೇಶ ಜಿ, ಬೀದರ್ ಜಿಲ್ಲಾ ಪತ್ರಿಕಾ ದಿನಾಚರಣೆ ಸಮಿತಿ ಪ್ರಧಾನ ಕಾರ್ಯದರ್ಶಿ ಆನಂದ ದೇವಪ್ಪ, ಸಮಿತಿ ಸಂಚಾಲಕ ಮಲ್ಲಿಕಾರ್ಜುನ ಬಿರಾದರ, ಖಜಾಂಚಿ ಮಾಳಪ್ಪಾ ಅಡಸಾರೆ, ಸಮಿತಿ ಉಪಾಧ್ಯಕ್ಷ ವಿರೂಪಾಕ್ಷ ಗಾದಗಿ, ರಾಜಕುಮಾರ ಸ್ವಾಮಿ ಸೇರಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಪತ್ರಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.