ಸಿದ್ದಾಪುರ: ಪತ್ರಕರ್ತರು ಎಲ್ಲವನ್ನೂ ತಿಳಿದಿರಬೇಕೆಂಬ ನಿಯಮವಿಲ್ಲ. ಆದರೆ, ಮಾಹಿತಿ ಬಲ್ಲವರು ಯಾರು ಎಂದು ತಿಳಿದಿರುವುದು ಅತಿ ಮುಖ್ಯ. ಪತ್ರಕರ್ತರು ಅಧ್ಯಯನಶೀಲರಾಗಿದ್ದಾಗ ಮಾತ್ರ ಅದು ಸಾಧ್ಯ ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ಹೇಳಿದರು.
ಪಟ್ಟಣದ ಬಾಲಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಬದಲಾದ ಕಾಲದಲ್ಲಿ ಸಾಮಾಜಿಕ ಜಾಲತಾಣಗಳು ತಮ್ಮ ಪ್ರಭಾವನ್ನು ಹೆಚ್ಚಿಸಿಕೊಂಡಿದ್ದು ಹಲವು ಬಾರಿ ಅವಸರದಿಂದ ಸುಳ್ಳು ಮಾಹಿತಿಗಳು ಬಿತ್ತರಗೊಳ್ಳುತ್ತಿವೆ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಮಳೆಗಾಲದಲ್ಲಿ ಸಂಭವಿಸುತ್ತಿರುವ ಅನಾಹುತಗಳನ್ನು ನಾವು ನೋಡುತ್ತಿದ್ದೇವೆ. ಇವುಗಳಿಗೆ ಶಾಶ್ವತ ಪರಿಹಾರ ಸಿಗಬೇಕಾದರೆ ಪರಿಸರದ ಜಾಗೃತಿ ಮೂಡಬೇಕು. ಈ ಕುರಿತು ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ ಮನದಟ್ಟು ಮಾಡಲು ಮಾಧ್ಯಮಗಳು ಕಾರ್ಯಪ್ರವೃತ್ತರಾಗಬೇಕು ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿ, ಪತ್ರಿಕಾ ದಿನಾಚರಣೆ ಪತ್ರಕರ್ತರ ಆತ್ಮಾವಲೋಕನ ಮತ್ತು ಮುಂದಿನ ಕಾರ್ಯಗಳ ನೀಲನಕ್ಷೆ ಗುರುತಿಸುವ ಸಂದರ್ಭ ಎಂದರು.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಭಟ್ ಬಕ್ಕಳ ಪತ್ರಕರ್ತರ ಮಾಹಿತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿ ನಮ್ಮಿಂದ ಸಮಾಜಕ್ಕೆ ಏನು ಕೊಡಬಹುದು ಎಂದು ಯೋಚಿಸಿದಾಗ ಸಮಾಜ ನಮ್ಮನ್ನು ಗೌರವಿಸುತ್ತದೆ. ಅಂತೆಯೇ ಪತ್ರಕರ್ತರೂ ಹಣದ ಆಮಿಷಗಳಿಗೆ ಬಲಿಯಾಗದೆ ಸಮಾಜಕ್ಕೆ ಒಳಿತಾಗುವ ಕಾರ್ಯದಲ್ಲಿ ತೊಡಗಿಕೊಂಡಾಗ ಗೌರವ ದೊರೆಯುತ್ತದೆ ಎಂದರು.
ಸ್ಥಳೀಯ ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಜಿ. ನಾಯ್ಕ ಮಾತನಾಡಿ, ಸಮಾಜವನ್ನು ತಿದ್ದುವ ಕೆಲಸ ಪತ್ರಿಕೆಗಳಿಂದ ಆಗುತ್ತಿದೆ. ತಾಲೂಕಿನ ಪತ್ರಕರ್ತರ ಮತ್ತು ಜನರ ಸಹಕಾರದಿಂದ ಲಯನ್ಸ್ ಸಂಸ್ಥೆಯ ಮೂಲಕ ಬಡವರ ಉಚಿತ ಆರೋಗ್ಯ ತಪಾಸಣೆ ನಡೆಸಬೇಕೆಂಬ ಆಶಯವಿದೆ ಎಂದರು.ಪತ್ರಿಕಾ ವಿತರಕ ಪ್ರಶಾಂತ ಶೇಟ್ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ಕೆಕ್ಕಾರ್ ನಾಗರಾಜ ಭಟ್ಟ ಅವರು ಪ್ರತಿವರ್ಷ ನೀಡುವ ಗುರುಮನೆ ದತ್ತಿ ನಿಧಿ ಪ್ರಶಸ್ತಿನ್ನು ತಾಲೂಕಿನ ವಾಜಗದ್ದೆ ದುರ್ಗಾವಿನಾಯಕ ಕೃಷಿ ಯುವಕ ಸಂಘಕ್ಕೆ ನೀಡಿ ಗೌರವಿಸಲಾಯಿತು. ಸಂಘದ ಜಿಲ್ಲಾ ಉಪಾಧ್ಯಕ್ಷ ನಾಗರಾಜ ಭಟ್ಟ ಕೆಕ್ಕಾರ್ ಸನ್ಮಾನಿತರನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ಬಿಳಗಿ ವಾಲ್ಮೀಕಿ ಸೇವಾ ಟ್ರಸ್ಟ್ ವತಿಯಿಂದ ಪತ್ರಕರ್ತರನ್ನು ಗೌರವಿಸಲಾಯಿತು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ ವೇದಿಕೆಯಲ್ಲಿದ್ದರು. ಪತ್ರಕರ್ತ ಗಣೇಶ ಭಟ್ಟ ಹೊಸೂರು ಸ್ವಾಗತಿಸಿದರು. ಸಂಘದ ತಾಲೂಕು ಕಾರ್ಯದರ್ಶಿ ರಮೇಶ ಹಾರ್ಸಿಮನೆ ನಿರೂಪಿಸಿದರು. ಸುಜಯ್ ಭಟ್ಟ ವಂದಿಸಿದರು.