ಕನ್ನಡಪ್ರಭ ವಾರ್ತೆ ಹೊಸಪೇಟೆ
ನಗರದ ಮಲ್ಲಿಗಿ ಹೋಟೆಲ್ ಸಭಾಂಗಣದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೋಮವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಪತ್ರಿಕೆಗಳು ಸಮಾಜದ ಕಣ್ಣು ಹಾಗೂ ಧ್ವನಿಯಾಗಿವೆ. ಈಗಲೂ ಪತ್ರಿಕೆಗಳು ತಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ. ಪತ್ರಿಕೆಗಳ ಸಂಖ್ಯೆ ಹಾಗೂ ಪ್ರಸರಣ ಕೂಡ ಹೆಚ್ಚಿದೆ. ಹಲವು ವಿಧದ ಮಾಧ್ಯಮಗಳು ಬಂದರೂ ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಪೈಪೋಟಿಯ ನಡುವೆಯೂ ತಮ್ಮ ವಿಶ್ವಾಸಾರ್ಹತೆ ಉಳಿಸಿಕೊಂಡು ಸಾಗುತ್ತಿವೆ ಎಂದರು.
ಪತ್ರಕರ್ತರ ಬದುಕು ಸರಳವಾಗಿಲ್ಲ. ಜಿಲ್ಲಾ, ತಾಲೂಕು, ಹೋಬಳಿ ವರದಿಗಾರರಿಗೆ ಸರಿಯಾಗಿ ವೇತನ ಇರುವುದಿಲ್ಲ. ಕಾರ್ಮಿಕ ಕಾಯ್ದೆ ಪ್ರಕಾರ ಪತ್ರಕರ್ತರಿಗೆ ಕನಿಷ್ಠ ವೇತನ ಕೂಡ ಸಿಗುತ್ತಿಲ್ಲ. ಸರ್ಕಾರ ಕಾರ್ಮಿಕ ಕಾಯ್ದೆ ಪ್ರಕಾರ ಒಂದು ಮಾನದಂಡವನ್ನೇ ರಚಿಸಿದೆ. ಸೇವಾ ಹಿರಿತನ ತಕ್ಕಂತೆ ವೇತನ, ಇತರೆ ಸೌಲಭ್ಯಗಳು ದೊರೆಯಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಟನೆ ಹಕ್ಕೊತ್ತಾಯ ಮಾಡಬೇಕು ಎಂದರು.ಪತ್ರಕರ್ತರು ಒತ್ತಡದ ಬದುಕಿನ ನಡೆಯೂ ಸಮಾಜಮುಖಿ ವರದಿಗಳನ್ನು ಮಾಡುತ್ತ ಬರುತ್ತಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ ಸಮಸ್ಯೆ ಕುರಿತು ಸಾಕಷ್ಟು ವರದಿಗಳು ಪ್ರಕಟವಾಗುತ್ತಿವೆ. ಈ ವರದಿಗಳನ್ನಾಧರಿಸಿ ನಾವು ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿದೆ. ಪತ್ರಕರ್ತರು ಜಿಲ್ಲಾಡಳಿತವನ್ನು ವಿಮರ್ಶಿಸಿದಾಗ ನಾವು ಸಕಾರಾತ್ಮಕವಾಗಿ ಸ್ಪಂದಿಸುತ್ತೇವೆ ಎಂದರು.
ಎಸ್ಪಿ ಬಿ.ಎಲ್. ಶ್ರೀಹರಿಬಾಬು ಮಾತನಾಡಿ, ಪತ್ರಕರ್ತರು ಸದಾ ಕಾನೂನಿನ ಅರಿವು ಹೊಂದಬೇಕು. ಈಗ ದೇಶದಲ್ಲಿ ಕೆಲ ಕಾನೂನುಗಳು ಬದಲಾವಣೆ ಆಗಿವೆ. ಇವುಗಳನ್ನು ಅರಿತುಕೊಳ್ಳಬೇಕು. ಪತ್ರಕರ್ತರ ಸಂಘದಿಂದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಿರುವುದು ಶ್ಲಾಘನೀಯ. ಈ ಪ್ರತಿಭಾವಂತ ಮಕ್ಕಳು ಐಎಎಸ್, ಕೆಎಎಸ್ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಅನ್ನಪೂರ್ಣಮ್ಮ ತುಕಾರಾಂ ಮಾತನಾಡಿ, ಮಾಧ್ಯಮಗಳು ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರ ಘನತೆಗೆ ಚ್ಯುತಿಬಾರದಂತೆ ವರದಿ ಮಾಡಬೇಕು. ಈ ವರದಿಗಳು ನೈಜತೆಯಿಂದ ಕೂಡಿರಬೇಕು, ವೈಭವೀಕರಣ ಆಗಬಾರದು, ವರದಿಯಿಂದ ಯಾರೋಬ್ಬರ ಮಾನ, ಪ್ರಾಣಕ್ಕೆ ಹಾನಿಯಾಗದಂತೆ ಮಾಧ್ಯಮಗಳು ಎಚ್ಚರವಹಿಸಬೇಕು ಎಂದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಕೆ. ಲಕ್ಷ್ಮಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಉಜ್ಜಿಯಿನಿ ರುದ್ರಪ್ಪ ಆಶಯನುಡಿ ನುಡಿದರು. ಸಂಘದ ರಾಜ್ಯ ಸಮಿತಿ ಸದಸ್ಯ ಪಿ.ವೆಂಕೋಬ ನಾಯಕ ಪತ್ರಕರ್ತರ ಅಹವಾಲು ಸಲ್ಲಿಸಿದರು. ಸಂಘದ ಜಿಲ್ಲಾಧ್ಯಕ್ಷ ಪಿ. ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಜೆ.ಎಂ. ಶಿವಪ್ರಸಾದ್ ಅವರು ಪತ್ರಕರ್ತರಿಗೆ ಆರೋಗ್ಯ ವಿಮೆ ಕಾರ್ಡ್‌ಗಳನ್ನು ವಿತರಿಸಿದರು.