ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ, ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಸಮಿತಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.
ತುಮಕೂರು ವಿಶ್ವವಿದ್ಯಾಲಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ತಮ್ಮ ಹಾಲಪ್ಪ ಪ್ರತಿಷ್ಠಾನದಡಿ ಚಿನ್ನದ ಪದಕ ನೀಡಲಾಗುತ್ತಿದೆ. ಇದೇ ರೀತಿ ಪತ್ರಕರ್ತರ ಕಲ್ಯಾಣ ಹಾಗೂ ಪ್ರೋತ್ಸಾಹಕ್ಕಾಗಿ ಸಾಧ್ಯವಾದಷ್ಟು ದತ್ತಿ ಹಣ ಮೀಸಲಿಡುವ ಮೂಲಕ ಅವರ ವೃತ್ತಿ ಬದುಕಿಗೆ ಶಕ್ತಿ ತುಂಬುವ ಪ್ರಯತ್ನ ಮಾಡುವುದಾಗಿ ಹೇಳಿದರು.ಕೈಗಾರಿಕೋದ್ಯಮಿ, ಟೂಡಾ ಮಾಜಿ ಅಧ್ಯಕ್ಷ ಎಚ್.ಜಿ.ಚಂದ್ರಶೇಖರ್ ಮಾತನಾಡಿ, ಪತ್ರಿಕೋದ್ಯಮ ಸಾಮಾಜಿಕ ಕಳಕಳಿಯುಳ್ಳ, ಬದ್ಧತೆಯ ವೃತ್ತಿಯಾಗಿದೆ. ಸಾಮಾಜಿಕ ಸೇವಾ ಕ್ಷೇತ್ರವಾಗಿರುವ ಪತ್ರಿಕಾ ಕ್ಷೇತ್ರದಲ್ಲಿ ತೊಡಗಿರುವ ಪತ್ರಕರ್ತರು ವೃತ್ತಿ ಬದ್ಧತೆ ಸಾಧಿಸಬೇಕು ಎಂದು ಹೇಳಿದ ಅವರು, ಸಂಪಾದಕರ ಸಂಘದ ದತ್ತಿ ಪ್ರಶಸ್ತಿಗೆ ತಾವು ಒಂದು ಲಕ್ಷ ರೂ. ದೇಣಿಗೆ ನೀಡುವುದಾಗಿ ಪ್ರಕಟಿಸಿದರು.
ಸಂಘದ ಜಿಲ್ಲಾಧ್ಯಕ್ಷ ಜಿ.ಕರುಣಾಕರ್ ಮಾತನಾಡಿ, ವಿಜಯಮುಗಿಲು ಪತ್ರಿಕೆ ಸಹ ಸಂಪಾದಕ ಹನುಮಂತಯ್ಯ ಅವರು ಸಂಘದಲ್ಲಿ ದತ್ತಿಯಾಗಿ ಇಟ್ಟಿರುವ ಪ್ರಶಸ್ತಿ ಹಾಗೂ ನಗದು ಪ್ರೋತ್ಸಾಹ ನೀಡಿದೆ. ಜೊತೆಗೆ ಸಣ್ಣ ಪತ್ರಿಕೆಗಳ ಸಂಪಾದಕರು ಸಂಘಟಿತರಾಗಿ ಸಮಾಜದ ಅಂಕುಡೊಂಕು ತಿದ್ದಲು, ಎದುರಾಗುವ ಸವಾಲುಗಳನ್ನು ಬಗೆಹರಿಸಿಕೊಳ್ಳಲು ಸನ್ನದ್ಧರಾಗಬೇಕು. ಪತ್ರಕರ್ತರಿಗೆ ಮೂಲಭೂತ ಸೌಲಭ್ಯ, ಹಕ್ಕು ದೊರಕಿಸಲು ಪ್ರಯತ್ನಿಸಬೇಕು ಎಂದರು.
ಅಮೃತವಾಣಿ ಸಂಪಾದಕ ಗಂಗಹನುಮಯ್ಯ ಮಾತನಾಡಿ, ಪತ್ರಿಕೋದ್ಯಮಕ್ಕೆ ತನ್ನದೇ ಆದ ಶಕ್ತಿ ಇದೆ. ಆ ಶಕ್ತಿಯನ್ನು ಸಮಾಜದ ಏಳಿಗೆಗೆ ಬಳಸಬೇಕು ಎಂದು ತಿಳಿಸಿ ಜಿಲ್ಲೆಯ ಪತ್ರಿಕೆಗಳ ಬೆಳವಣಿಗೆಗೆ ಬಗ್ಗೆ ನೆನಪು ಮಾಡಿಕೊಂಡರು. ಪ್ರಜಾ ಪರ್ವ ಪತ್ರಿಕೆ ಸಂಪಾದಕ ಕೊಪ್ಪಳದ ಎಂ.ಜಿ ಶ್ರೀನಿವಾಸ್ ಅವರಿಗೆ ಈ ವೇಳೆ ‘ಸಂಪಾದಕ ರತ್ನ’ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸುದಿನ ಪತ್ರಿಕೆ ಸ್ಥಾನಿಕ ಸಂಪಾದಕ ಎಚ್.ಎಸ್.ಹರೀಶ್, ಈ ಮುಂಜಾನೆ ಸಂಪಾದಕ ಮೊಹಮದ್ ಯೂನಿಸ್, ಸೂರ್ಯಾಸ್ಥ ಸಂಜೆ ಪತ್ರಿಕೆ ಸಂಪಾದಕ ವಿಜಯಕುಮಾರ್ ಪಾಟೀಲ್, ಸತ್ಯದರ್ಶಿನಿ ಪತ್ರಿಕೆ ಸಹ ಸಂಪಾದಕ ಎಚ್.ಕೆ.ರವೀಂದ್ರನಾಥ್ ಹೊನ್ನೂರು, ಹಿರಿಯ ಛಾಯಾಗ್ರಾಹಕ ಅನು ಶಾಂತರಾಜು, ಆರ್ ಲಕ್ಷ್ಮೀನಾರಾಯಣ ಶೆಟ್ಟಿ, ಜಯಣ್ಣ ಬೆಳಗೆರೆ, ದತ್ತಿ ಪ್ರಶಸ್ತಿ ದಾನಿ ಹನುಮಂತಯ್ಯ, ಈ ನಾಡು ವರದಿಗಾರ ಸಿ.ಟಿ.ಎಸ್.ಗೋವಿಂದಪ್ಪ, ಹಿರಿಯ ಪತ್ರಕರ್ತ ಆಂಜನಪ್ಪ, ನಾಗರಾಜು, ಸೋಮಶೇಖರ್ ಅವನ್ನು ಸನ್ಮಾನಿಸಿ ಗೌರವಿಸಲಾಯಿತು.