ಕಾರ್ಕಳ: ಪತ್ರಕರ್ತರ ಸಂಘದ ನೂತನ ಪತ್ರಿಕಾ ಭವನ ಉದ್ಘಾಟನೆ
ಪತ್ರಕರ್ತನ ಪೆನ್ ಕೇವಲ ಸುದ್ದಿಯ ಹಾಳೆಯಲ್ಲ, ಸಮಾಜ ಬದಲಾವಣೆಯ ಶಸ್ತ್ರವಾಗಿಯೂ ಕಾರ್ಯನಿರ್ವಹಿಸಬೇಕು. ಸುದ್ದಿ ಪ್ರಸಾರ ಮಾಡುವುದಷ್ಟೇ ಪತ್ರಕರ್ತನ ಧರ್ಮವಲ್ಲ, ಜನಜಾಗೃತಿ ಮೂಡಿಸಿ ಸಮಾಜವನ್ನು ಉತ್ತಮ ದಾರಿಯತ್ತ ಕೊಂಡೊಯ್ಯುವ ಹೊಣೆಗಾರಿಕೆಯೂ ಇದೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.ಭಾನುವಾರ ಕಾರ್ಕಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪತ್ರಿಕಾ ಭವನ ಉದ್ಘಾಟನಾ ಸಮಾರಂಭದ ಸಭೆಯಲ್ಲಿ ಅವರು ಮಾತನಾಡಿದರು.
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ನೂತನ ಪತ್ರಿಕಾ ಭವನ ಉದ್ಘಾಟಿಸಿ, ಪತ್ರಕರ್ತರು ಸಮಾಜದ ಕಣ್ಣುಗಳಂತಿದ್ದಾರೆ. ಗ್ರಾಮೀಣ ಬೀದಿಯಿಂದ ಹಿಡಿದು ರಾಷ್ಟ್ರಮಟ್ಟದ ಬೆಳವಣಿಗೆಗಳ ವರೆಗೆ ಪ್ರತಿಬಿಂಬಿಸುವವರಾದ ಪತ್ರಕರ್ತರಿಗೆ ಸ್ವಂತ ಆವರಣ ಅಗತ್ಯವಾಗಿತ್ತು. ಇಂದು ಅದು ನನಸಾಗಿರುವುದು ಸಂತೋಷಕರ. ಸರ್ಕಾರವು ಪತ್ರಕರ್ತರ ಕಲ್ಯಾಣ ಮತ್ತು ಅವರ ವೃತ್ತಿಜೀವನದ ಭದ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಪತ್ರಿಕೋದ್ಯಮ ಸಮಾಜದ ಹಿತಕ್ಕಾಗಿ ಹೋರಾಡುವ ಒಂದು ನಿಸ್ವಾರ್ಥ ಸೇವೆ. ಇದರ ಬಲದಿಂದ ಸಮಾಜದ ಪ್ರಗತಿ ಇನ್ನಷ್ಟು ಗಟ್ಟಿಯಾಗುತ್ತದೆ ಎಂದರು.
ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಪ್ರಾಸ್ತಾವಿಕವಾಗಿ ಮಾತನಾದರು. ಉದಯ ಮುಂಡ್ಕೂರು ಸ್ವಾಗತಿಸಿದರು. ಕೃಷ್ಣ ಅಜೆಕಾರು ಮತ್ತು ನಾಗೇಶ್ ನಲ್ಲೂರು ನಿರೂಪಿಸಿದರು.