ಕುಕನೂರು: ಗ್ರಾಮೀಣ ಮಟ್ಟದಿಂದ ಸಮಾಜಾಭಿವೃದ್ಧಿಗೆ ಅಮೃತ ನೀಡುವ ಕಾರ್ಯವನ್ನು ಪತ್ರಿಕೆ ಹಾಗೂ ಪತ್ರಕರ್ತರು ಮಾಡುತ್ತಾರೆ ಎಂದು ದಳಪತಿ ಸಂಘದ ರಾಜ್ಯಾಧ್ಯಕ್ಷ ಶರಣಪ್ಪ ಗೌಡ ಹೊರಪೇಟೆ ಹೇಳಿದರು.
ತಾಪಂ ಮಾಜಿ ಅಧ್ಯಕ್ಷೆ ಮಹಾದೇವಿ ಕಳಕಪ್ಪ ಕಂಬಳಿ ಮಾತನಾಡಿ, ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗವನ್ನು ಸ್ಥಿರದಲ್ಲಿಡುವುದು ಪತ್ರಿಕಾ ರಂಗ. ಸುದ್ದಿ ಸಂಗ್ರಹ, ಬಿತ್ತರ, ವಿತರಣೆ ಕಾರ್ಯ ಮಾಡುವುದು ಶ್ರಮದ ಸಂಕೇತ. ಪತ್ರಕರ್ತರು, ಪತ್ರಿಕಾ ಮಂಡಳಿ ಸಮಾಜದ ನಿಜ ಶ್ರಮಿಕರು. ಸಮಾಜ ಧ್ವನಿಯಾಗಿ ಪತ್ರಿಕಾ ರಂಗ ಕಾರ್ಯ ಮಾಡುತ್ತಿದೆ. ಪತ್ರಕರ್ತರು ಸಮಾಜಮುಖಿ ಕಾರ್ಯಕ್ಕೆ ಅರ್ಪಿಸಿಕೊಂಡ ಇರುತ್ತಾರೆ. ಮಾದ್ಯಮ ಸರ್ಕಾರ ಹಾಗೂ ಜನಸಾಮಾನ್ಯರ ಸೇತುವೆ ಆಗಿ ಕೆಲಸ ಮಾಡುತ್ತದೆ. ಕಡಿಮೆ ವಂತಿಕೆಯಲ್ಲಿ ಗ್ರಾಮೀಣ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ಅವರ ಜೀವನಕ್ಕೆ ಸರ್ಕಾರ ಸ್ಪಂದಿಸಬೇಕು. ಪತ್ರಿಕಾ ಮಾಧ್ಯಮಕ್ಕೆ ಸರ್ಕಾರ ಸಹ ಅನುದಾನ ನೀಡಬೇಕು. ಯೋಜನೆ ರೂಪಿಸಬೇಕು ಎಂದರು.
ಹಿರಿಯ ಸಾಹಿತಿ ಕೆ.ಬಿ. ಬ್ಯಾಳಿ ಮಾತನಾಡಿ, ಪತ್ರಕರ್ತರು ಅಭ್ಯಾಸ ನಿರತರಾಗಿ ವರದಿ ಮಾಡಿದಾಗ ಮಹತ್ವಪೂರ್ಣ ಆಗಿರುತ್ತವೆ ಎಂದರು.ಸಮಾಜ ಸೇವಕ ಶಿವಣ್ಣ ರಾಯರೆಡ್ಡಿ, ತಾಪಂ ಇಒ ಬೆಟ್ಟದಪ್ಪ ಮಾಳೆಕೊಪ್ಪ ಮಾತನಾಡಿದರು. ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಲ್ಲಾವುದ್ದೀನ್ ಎಮ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಂಘದಿಂದ ಕೊಡಮಾಡಿದ ದತ್ತಿ ಪ್ರಶಸ್ತಿ ಪುರಸ್ಕೃತ ರುದ್ರಪ್ಪ ಭಂಡಾರಿ, ಜಿಲ್ಲಾ ಉತ್ತಮ ವರದಿಗಾರ ಪ್ರಶಸ್ತಿ ಪುರಸ್ಕೃತ ಬಸವರಾಜ ಕೊಡ್ಲಿ ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು.