ಸಂಭ್ರಮದ ಈದ್ ಮಿಲಾದ್ ಆಚರಣೆ

KannadaprabhaNewsNetwork |  
Published : Aug 27, 2026, 01:15 AM IST
 | Kannada Prabha

ಸಾರಾಂಶ

ಮಸ್ಲಿಂರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್ ಮಿಲಾದ್ ಪ್ರಯುಕ್ತ ಶಾಂತಿನಗರದ ಗೂಡ್‌ಶೆಡ್ ಕಾಲೋನಿಯ ಮೀನಾ ಮಸೀದಿಯಿಂದ ಚಾಂದಿನಿ ಮೆರವಣಿಗೆಯನ್ನು ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ಮಸ್ಲಿಂರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್ ಮಿಲಾದ್ ಪ್ರಯುಕ್ತ ಶಾಂತಿನಗರದ ಗೂಡ್‌ಶೆಡ್ ಕಾಲೋನಿಯ ಮೀನಾ ಮಸೀದಿಯಿಂದ ಚಾಂದಿನಿ ಮೆರವಣಿಗೆಯನ್ನು ನಡೆಸಲಾಯಿತು.

ನಗರದ ಗೂಡ್‌ಶೆಡ್ ಕಾಲೋನಿಯ ಮೀನಾ ಮಸೀದಿಯಿಂದ ಮಧ್ಯಾಹ್ನ 1 ಕ್ಕೆ ಆರಂಭವಾದ ಚಾಂದಿನಿ ಮೆರವಣಿಗೆಯು ಬನಶಂಕರಿ, ಸದಾಶಿವನಗರ, ನಜರಾಬಾದ್, ಚಾಂದಿನಿ ಸರ್ಕಲ್, ಪಿಎಚ್. ಕಾಲೋನಿ, ಬಿ.ಜಿ. ಪಾಳ್ಯ ವೃತ್ತದ ಮುಖೇನ ಸಂತೆಪೇಟೆಯಲ್ಲಿ ಸಾಗಿ, ನಂತರ ಮೆರವಣಿಗೆಯು ಮಂಡಿಪೇಟೆ ಮುಖ್ಯ ರಸ್ತೆಯಿಂದ ಗುಂಚಿ ಸರ್ಕಲ್, ಬಾರ್‌ಲೈನ್ ಮಸೀದಿ ಮುಖೇನ ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತಲುಪಿ ಮುಕ್ತಾಯಗೊಂಡಿತು.

ಚಾಂದಿನಿ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್, ಪ್ರವಾದಿಗಳ ಹುಟ್ಟುಹಬ್ಬದ ಅಂಗವಾಗಿ ಅವರ ಶಾಂತಿಯ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಚಾಂದಿನಿ ಮೆರವಣಿಗೆ, ಎಲ್ಲಾ ಧರ್ಮದವರು, ಜಾತಿಯವರು ಸೇರಿ ಮಾಡುವಂತಹ ಕಾರ್ಯವಾಗಿದೆ. ಪ್ರವಾದಿಗಳ ಸಂದೇಶದಂತೆ ನಾವು ನಮ್ಮ ನೆರೆಹೊರೆಯವರ ಜತೆ ಹಾಗೂ ಅನ್ಯ ಧರ್ಮೀಯರ ಜತೆ ಶಾಂತಿಯ ಸಹಬಾಳ್ವೆ ನಡೆಸಿದರೆ ಅದು ದೇವರಿಗೆ ಪ್ರಿಯವಾದ ಕೆಲಸವಾಗಿದೆ. ಹಾಗಾಗಿ ನಮ್ಮಿಂದ ಯಾರಿಗೂ ತೊಂದರೆಯಾಗದ ರೀತಿ ನಾವು ನಡೆದುಕೊಳ್ಳಬೇಕಿದೆ ಎಂದರು.

ಭಾರತ ಬಹುಧರ್ಮ, ಜಾತಿ, ಭಾಷೆ, ಸಂಸ್ಕೃತಿಗಳನ್ನು ಒಳಗೊಂಡ ದೇಶ. ಬಹುತ್ವವೇ ಭಾರತದ ನಿಜವಾದ ಜೀವಾಳ. ಹಾಗಾಗಿ ಪ್ರವಾದಿಗಳ ತತ್ವ ಸಂದೇಶದಂತೆ ನಡೆದುಕೊಂಡಾಗ ಮಾತ್ರ ನಿಜವಾದ ಮುಸ್ಲಿಂನಾಗಲು ಸಾಧ್ಯ. ಬೇರೆಯವರಿಗೆ ತೊಂದರೆಯಾಗದಂತೆ ನಡೆದುಕೊಂಡರೆ ಅದೇ ನಾವು ದೇವರಿಗೆ ಸಲ್ಲಿಸುವ ನಿಜವಾದ ಪ್ರಾರ್ಥನೆ ಎಂದು ಹೇಳಿದರು. 1500 ವರ್ಷಗಳ ಹಿಂದೆ ಪ್ರಪಂಚದಲ್ಲಿ ಅತ್ಯಾಚಾರ, ದರೋಡೆ, ಹೆಣ್ಣು ಮಕ್ಕಳು ಜನಿಸಿದರೆ ಜೀವಂತವಾಗಿ ಹೂಳುವುದು ಇತ್ತು. ಆ ಸಂದರ್ಭದಲ್ಲಿ ಜನಿಸಿದ ಪ್ರವಾದಿಗಳು ಇದಕ್ಕೆಲ್ಲಾ ಅಂತ್ಯ ಹಾಡುವ ಮೂಲಕ ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರಿದರು ಎಂದರು.

ಮಾಜಿ ಶಾಸಕ ಹಾಗೂ ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಎಸ್. ಷಫಿ ಅಹಮದ್ ಮಾತನಾಡಿ, ಈದ್ ಮಿಲಾದ್ ಹಬ್ಬ ಆಚರಣೆ ಶಾಂತಿ, ಸಹಬಾಳ್ವೆಯ ಸಂಕೇತ. ಈ ಸುಸಂದರ್ಭದಲ್ಲಿ ಗೌರಿ ಗಣೇಶ ಹಬ್ಬವನ್ನು ಹಿಂದೂ-ಮುಸ್ಲಿಂ ಸಮುದಾಯದವರೆಲ್ಲರೂ ಸೇರಿ ಆಚರಿಸಿದ್ದೇವೆ. ಮುಂದಿನ ದಿನಗಳಲ್ಲೂ ಸಹ ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಸಹಬಾಳ್ವೆಯಿಂದ ಬದುಕೋಣ ಎಂದರು.

ಮಾಜಿ ಶಾಸಕ ಡಾ. ರಫೀಕ್‌ ಅಹಮದ್ ಮಾತನಾಡಿ, ಇಂದು ಪ್ರವಾದಿ ಮಹಮದ್ ರವರ 1500 ನೇ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದೇವೆ. ಈ ಸುಸಂದರ್ಭದಲ್ಲಿ ಹಿಂದೂ-ಮುಸ್ಲಿಂ, ಕ್ರೈಸ್ತ, ಸಿಖ್ ಎಲ್ಲರೂ ಸಹೋದರತೆಯಿಂದ ಬಾಳೋಣ ಎಂದರು. ಜಿಲ್ಲಾಧಿಕಾರಿ ಶುಭಕಲ್ಯಾಣ್ ಮಸ್ಲಿಂರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯ ಕೋರಿ, ಸಮಾಜದಲ್ಲಿ ಶಾಂತಿ ಸಹಬಾಳ್ವೆ ಬದುಕು ಸಾಗಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಷಫಿ ಅಹಮದ್, ರಫೀಕ್ ಅಹಮದ್, ಇಕ್ಬಾಲ್ ಅಹಮದ್, ಅಸ್ಲಾಂ ಪಾಷ, ಮೆಹಬೂಬು ಪಾಷ, ಡಿವೈಎಸ್ಪಿ ಚಂದ್ರಶೇಖರ್, ಕುಮಾರ್, ನಯಾಜ್, ಇನಾಯತ್, ಇಸ್ಮಾಯಿಲ್, ಅಕ್ರಂ, ಜಹೀದ್, ಈದ್ ಮಿಲಾದ್ ಕಮಿಟಿಯ ಮಹಮದ್ ಫೀರ್, ಬಾಬು, ಸೈಯದ್, ಇಮ್ರಾನ್ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು. ಚಾಂದಿನಿ ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ರವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿರಾದಲ್ಲಿ ಸಂಭ್ರಮದ ಈದ್ ಮಿಲಾದ್ ಮೆರವಣಿಗೆ
ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸಹಾಯ ಹಸ್ತ