ಕನ್ನಡಪ್ರಭ ವಾರ್ತೆ, ತುಮಕೂರು

ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ನಗರದ ಸಮೃದ್ಧಿ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಬೆಳಗುಂಬ ವೆಂಕಟೇಶ್ ಅವರು ಸಹಾಯ ಹಸ್ತ ಚಾಚಿದ್ದಾರೆ. ತಾಲೂಕಿನ ಊರ್ಡಿಗೆರೆ ಹೋಬಳಿ ಅರೆಗುಜ್ಜನಹಳ್ಳಿ ಗ್ರಾಮ ಪಂಚಾಯಿತಿಯ ತಿಮ್ಮನಾಯಕನಹಳ್ಳಿ ಗ್ರಾಮದ ಕೂಲಿ ಕೆಲಸ ಮಾಡುವ ಕುಟುಂಬದವರು ಮನೆ ಕಟ್ಟಿಕೊಳ್ಳಲು ಖಾಸಗಿ ಫೈನಾನ್ಸ್‌ ನಿಂದ ಸಾಲ ಪಡೆದಿದ್ದರು. 3 ವರ್ಷ ಸಾಲದ ಕಂತು ಕಟ್ಟಿದ್ದರು. ನಂತರ ಸಮಸ್ಯೆಗಳಿಂದ ಕಂತಿನ ಹಣ ಕಟ್ಟಲು ಸಾಧ್ಯವಾಗದೆ ನಿಲ್ಲಿಸಿದ್ದರು. ಫೈನಾನ್ಸ್ ಕಂಪನಿಯವರು ಮನೆಗೆ ಬೀಗ ಜಡಿದು ಮನೆ ಜಪ್ತಿ ಮಾಡಿದ್ದಲ್ಲದೆ ಮನೆಯಲ್ಲಿದ್ದ ಹೆಣ್ಣುಮಕ್ಕಳನ್ನು ಬೀದಿಗೆ ದಬ್ಬಿದ್ದರು. ಈ ವಿಷಯ ತಿಳಿದ ಸಮೃದ್ಧಿ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಬೆಳಗುಂಬ ವೆಂಕಟೇಶ್ ಹಾಗೂ ಟ್ರಸ್ಟ್ ತಂಡದವರು ಸ್ಥಳಕ್ಕೆ ಭೇಟಿ ನೀಡಿ ಆ ಕುಟುಂಬ ಸದ್ಯ ವಾಸ ಮಾಡುತ್ತಿರುವ ಅದೇ ಗ್ರಾಮದಲ್ಲಿ ಪಾಳು ಬಿದ್ದಿರುವ ಮನೆ ರಕ್ಷಣೆಯಾಗಿ ಟ್ರಸ್ಟ್‌ ನಿಂದ ಟಾರ್ಪಲ್ ಹಾಕಿಸಿ, ಕುಟುಂಬಕ್ಕೆ ಅಗತ್ಯವಿರುವ ದಿನಸಿ ಸಾಮಾನು ಉಡುಪುಗಳನ್ನು ನೀಡಿ ನೆರವಾದರು. ಆ ಮನೆಯ ಪುಟ್ಟ ಹುಡುಗನಿಗೆ ಬಟ್ಟೆ ಮತ್ತು ಪುಸ್ತಕ ನೀಡಿ ಶಾಲೆಗೆ ಕಳುಹಿಸಿದರು.

ಈ ವೇಳೆ ಟ್ರಸ್ಟ್ ನ ಕಾರ್ಯದರ್ಶಿ ಭೈರಸಂದ್ರ ಹರೀಶ್. ಹೆಬ್ಬಾಕ ಕುಮಾರ್, ತೊಂಡಗೆರೆ ಸುನಿಲ್, ವಡ್ಡರಹಳ್ಳಿ ನರಸಿಂಹರಾಜು, ಮುದಿಗೆರೆ ಪ್ರದೀಪ್ ಲಿಂಗಿಕಟ್ಟೆ ಪ್ರದೀಪ್, ದೊಡ್ಡರಿ ಡಿ.ಕೆ ಕಾಂತರಾಜ್, ಸವಿತಾ ಮಮತ, ಸಿದ್ದಗಂಗಾ ಮತ್ತು ಪದಾಧಿಕಾರಿಗಳು ಹಾಜರಿದ್ದರು.

ಪೋಟೋ : ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ನಗರದ ಸಮೃದ್ಧಿ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಬೆಳಗುಂಬ ವೆಂಕಟೇಶ್ ಅವರು ಸಹಾಯ ಹಸ್ತ ಚಾಚಿ ಅಗತ್ಯ ವಸ್ತುಗಳನ್ನು ಕೊಡಿಸಿದರು.