ಕನ್ನಡಪ್ರಭ ವಾರ್ತೆ,ಚಿತ್ರದುರ್ಗ
ಕನ್ನಡ ಸಾಹಿತ್ಯ ಪರಿಷತ್ತು ಸ್ವಾಯತ್ತ ಸಂಸ್ಥೆಯಾಗಿ ಉಳಿಯಬೇಕಾದರೆ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಜಾಣಗೆರೆ ವೆಂಕಟರಾಮಯ್ಯ ಸೂಕ್ತ ಅಭ್ಯರ್ಥಿ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಹಾಗೂ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಹೇಳಿದರು.ಇಲ್ಲಿನ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಒಂದು ಪಕ್ಷದ ಮುಖವಾಣಿಯಾಗಿ ಹೆಜ್ಜೆಯಿಟ್ಟಾಗ ಪ್ರತಿಭಟಿಸಿದ್ದೇವೆ. ಪರಿಷತ್ತು ಯಾವುದೇ ಒಂದು ರಾಜಕೀಯ ಪಕ್ಷದ ಕಬ್ಜ ಆಗಬಾರದೆನ್ನುವುದು ನಮ್ಮ ಸ್ಪಷ್ಟ ಅಭಿಪ್ರಾಯವೆಂದರು.
ಮಹೇಶ್ ಜೋಶಿ ಅಧಿಕಾರವಧಿಯಲ್ಲಿ ಅಧಿಕಾರಿಗಳು ಪರಿಷತ್‍ಗೆ ಬಂದು ವಿಶ್ರಾಂತಿ ಪಡೆಯುವಂತಾಗಿತ್ತು. ಇದರಿಂದ ಮೂಲ ಆಶಯಕ್ಕೆ ಭಂಗವಾಯಿತು. ಬೈಲಾ ತಿದ್ದುಪಡಿ ಮಾಡಿ ಮೂರು ವರ್ಷವಿದ್ದ ಅಧಿಕಾರಾವಧಿಯನ್ನು ಆರು ವರ್ಷಕ್ಕೆ ಹೆಚ್ಚಿಸಿಕೊಂಡರು. ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಸ್ಥಾಪಿಸಿದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ವೇದಿಕೆಯನ್ನು ಅರಮನೆಯ ತಮಟೆಯನ್ನಾಗಿ ಮಾಡಿಕೊಂಡು ಅಧಿಕಾರ ದುರುಪಯೋಗಪಡಿಸಿಕೊಂಡ ಪರಿಣಾಮ ಈಗ ಅಮಾನತ್ತುಗೊಂಡಿದ್ದಾರೆ ಎಂದರು.ಮಹೇಶ್ ಜೋಶಿ ಕಸಾಪ ಅಧ್ಯಕ್ಷರಾದ ಮೇಲೆ ದ್ವಾರದಲ್ಲಿದ್ದ ಕನ್ನಡದ ಕಮಾನು ಕಿತ್ತು ಕನ್ನಡಿಗರಿಗೆ ಕರ್ನಾಟಕಕ್ಕೆ ಅವಮಾನ ಮಾಡಿದ್ದಾರೆ. ಒಡೆಯರ್ ಪುತ್ಥಳಿ ತೆಗೆದು ಹಾಕಿ ಹೊರಗೆ ಇಡಲಾಗಿದೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ. ಸದಸ್ಯತ್ವಗಳನ್ನು ಕಿತ್ತು ಹಾಕುವ ಮೂಲಕ ಸರ್ವಾಧಿಕಾರಿಯಂತೆ ವರ್ತಿಸಿದ ಅವರು ಮತ್ತೆ ಕಸಾಪಗೆ ಕಾಲಿಡಬಾರದೆನ್ನುವ ಕಾರಣಕ್ಕಾಗಿ ಜಾಣಗೆರೆ ವೆಂಕಟರಾಮಯ್ಯನವರನ್ನು ಅಧ್ಯಕ್ಷ ಸ್ಥಾನಕ್ಕೆ ಕೂರಿಸುವ ಪ್ರಯತ್ನ ಮಾಡುತ್ತಿದ್ದೇವೆಂದರು.
ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ 2025 ರಲ್ಲಿ ಹೋರಾಟವನ್ನು ಕೈಗೆತ್ತಿಕೊಂಡು ಅನಾಹುತವಾಗುತ್ತಿದ್ದ ಕನ್ನಡ ಸಾಹಿತ್ಯ ಪರಿಷತ್‍ನ್ನು ಉಳಿಸಿದ್ದೇವೆ. ಇಲ್ಲದಿದ್ದರೆ ದಿಕ್ಕು ತಪ್ಪಿಸುವ ದಾರಿಗೆ ತೆಗೆದುಕೊಂಡು ಹೋಗುತ್ತಿದ್ದರು. ಮಹೇಶ್‍ಜೋಶಿರವರ ಮೂರುವರೆ ವರ್ಷದ ಅಧಿಕಾರವಧಿಯಲ್ಲಿ ಅಕ್ರಮ, ಅನ್ಯಾಯ ಲೂಟಿ ನಡೆದಿರುವ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಅಮಾನತ್ತುಗೊಂಡಿರುವ ಅವರ ಅಜೀವ ಸದಸ್ಯತ್ವವೇ ವಜಾ ಆಗುವ ಸಂಭವವಿದೆ. ಅವರಿಂದ ಹಣ ವಸೂಲಿ ಮಾಡಿ ಶಿಕ್ಷೆಗೊಳಪಡಿಸಬೇಕೆಂದು ಒತ್ತಾಯ ಎಂದರು.
ಆರ್.ಜಿ. ಹಳ್ಳಿ ನಾಗರಾಜ್ ಮಾತನಾಡಿ 112 ವರ್ಷಗಳ ಇತಿಹಾಸವುಳ್ಳ ಕನ್ನಡ ಸಾಹಿತ್ಯ ಪರಿಷತ್ ಹನ್ನೆರಡು ವರ್ಷಗಳಿಂದ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡಿದೆ. ಅಧ್ಯಕ್ಷ ಮಹೇಶ್ ಜೋಶಿ ಸರ್ವಾಧಿಕಾರಿಯಂತೆ ವರ್ತಿಸಿ ದರ್ಪ ತೋರುತ್ತಿದ್ದಾರೆ. ಪರಿಷತ್‍ನ ಘನತೆ ಗೌರವ ಉಳಿಸಬೇಕಾಗಿರುವುದರಿಂದ ಜಾಣಗೆರೆ ವೆಂಕಟರಾಮಯ್ಯನವರನ್ನು ಕಸಾಪ ಚುನಾವಣೆಯಲ್ಲಿ ಗೆಲ್ಲಿಸುವ ಜವಾಬ್ದಾರಿ ಸದಸ್ಯರ ಮೇಲಿದೆ ಎಂದರು.
ಪ್ರೊ.ಸಿ.ಕೆ. ಮಹೇಶ್, ನಿವೃತ್ತ ಪ್ರಾಚಾರ್ಯ ಡಾ.ಕರಿಯಪ್ಪ ಮಾಳಿಗೆ, ಪ್ರೊ.ಹೆಚ್. ಲಿಂಗಪ್ಪ, ಚಿತ್ತಯ್ಯ ಇದ್ದರು.