ಶಿಕ್ಷಣ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ವ್ಯಾಪಾರದ ವಸ್ತುವಾಗಿಸಬಾರದು ಎಂಬ ಚಾಣಕ್ಯರ ಆಶಯವನ್ನು ಸತ್ಯ ಸಾಯಿ ಗ್ರಾಮ ಅಕ್ಷರಶಃ ಪಾಲಿಸುತ್ತಿದೆ. ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಮೂಲಕ ಈ ಸಂಸ್ಥೆ ವಿಶಿಷ್ಟ ಮಾದರಿ ರೂಪಿಸಿದೆ .
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ದುರಾಸೆ, ಋಣಾತ್ಮಕ ಆಲೋಚನೆಗಳು ಮತ್ತು ಆಂತರಿಕ ಅಶಾಂತಿ ಮನುಷ್ಯನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಮನಸ್ಸು ಮತ್ತು ಹೃದಯವನ್ನು ಶುದ್ಧವಾಗಿಟ್ಟುಕೊಂಡು, ಸಕಾರಾತ್ಮಕ ಚಿಂತನೆಗಳಿಗೆ ಆದ್ಯತೆ ನೀಡುವ ಮೂಲಕ ಉತ್ತಮ ಆರೋಗ್ಯ ಹಾಗೂ ನೆಮ್ಮದಿಯ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ''''ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್'''' ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ನಾಲ್ಕನೇ ದಿನವಾದ ಬುಧವಾರ ಆಯೋಜಿಸಿದ್ದ ವಿಷ್ಣು ಸಹಸ್ರನಾಮ ಯಾಗ ಮತ್ತು ಧನ್ವಂತರಿ ಹೋಮದ ಪೂರ್ಣಾಹುತಿ ಬಳಿಕ ಅವರು ಆಶೀರ್ವಚನ ನೀಡಿ ಮಾತನಾಡಿ, ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ಸಾಧನೆಗೆ ಆರೋಗ್ಯ ಅತ್ಯಗತ್ಯ. ಆದರೆ ಇಂದು ಆರೋಗ್ಯವೇ ಜಗತ್ತಿನ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ. ಚಿಕ್ಕ ವಯಸ್ಸಿನಲ್ಲೇ ಗಂಭೀರ ಅನಾರೋಗ್ಯಕ್ಕೆ ತುತ್ತಾಗಿ ಜೀವ ಕಳೆದುಕೊಳ್ಳುತ್ತಿರುವ ಘಟನೆಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಮತ್ತು ಆಂತರಿಕ ಶುದ್ಧತೆಗೂ ಮಹತ್ವ ನೀಡಬೇಕು. ಮನಸ್ಸಿನಲ್ಲಿ ದೈವಿಕ ಚಿಂತನೆಗಳಿಗೆ ಅವಕಾಶ ನೀಡಿದಾಗ ಋಣಾತ್ಮಕ ಆಲೋಚನೆಗಳಿಂದ ದೂರವಿರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮನುಷ್ಯನ ಹೃದಯವು ದೇವಸ್ಥಾನದಂತೆ ಪವಿತ್ರವಾಗಿರಬೇಕು. ಉತ್ತಮ ಆಲೋಚನೆಗಳು ಮತ್ತು ದೈವಿಕ ಸ್ಮರಣೆಯಿಂದ ಮನಸ್ಸನ್ನು ತುಂಬಿಕೊಳ್ಳಬೇಕು. ಋಣಾತ್ಮಕ ಚಿಂತನೆಗಳು ಆಂತರಿಕ ಶಕ್ತಿಯನ್ನು ಕುಗ್ಗಿಸುತ್ತವೆ. ಹಿಂದಿನ ತಲೆಮಾರಿನವರ ಜೀವನಶೈಲಿ, ಸಂಯಮ ಮತ್ತು ಶಿಸ್ತಿನಿಂದ ಕೂಡಿದ ಬದುಕು ಅವರ ದೀರ್ಘಾಯುಷ್ಯಕ್ಕೆ ಪೂರಕವಾಗಿತ್ತು ಎಂದು ಹೇಳಿದರು.
ದುರಾಸೆಗೆ ಮದ್ದಿಲ್ಲ:
ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳಿಗೆ ವೈದ್ಯಕೀಯ ಚಿಕಿತ್ಸೆಗಳಿವೆ, ಆದರೆ ದುರಾಸೆಗೆ ಮದ್ದಿಲ್ಲ ಎಂದು ಪ್ರತಿಪಾದಿಸಿದ ಸದ್ಗುರು ಶ್ರೀ ಮಧುಸೂದನ ಸಾಯಿ, ದುರಾಸೆಯೇ ಮನುಷ್ಯನ ಒತ್ತಡ ಮತ್ತು ಅಶಾಂತಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದರು. ಅತಿಯಾದ ಆಸೆಗಳಿಂದಾಗಿ ಉತ್ತಮ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ಆರೋಗ್ಯ ಸಮಸ್ಯೆಗಳು ಚಿಕ್ಕ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿವೆ. ಭಗವಂತನನ್ನು ಹೃದಯಾಂತರಾಳದಲ್ಲಿ ಸದಾ ಸ್ಮರಿಸುತ್ತಿದ್ದರೆ ದುರಾಸೆ ಮತ್ತು ಋಣಾತ್ಮಕ ಚಿಂತನೆಗಳಿಗೆ ಅವಕಾಶ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಶೃಂಗೇರಿಯ ಋತ್ವಿಜರಾದ ವಿದ್ವಾನ್ ನಾಗಭೂಷಣ ಭಟ್ ಮಾತನಾಡಿ, ಶಿಕ್ಷಣ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ವ್ಯಾಪಾರದ ವಸ್ತುವಾಗಿಸಬಾರದು ಎಂಬ ಚಾಣಕ್ಯರ ಆಶಯವನ್ನು ಸತ್ಯ ಸಾಯಿ ಗ್ರಾಮ ಅಕ್ಷರಶಃ ಪಾಲಿಸುತ್ತಿದೆ. ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಮೂಲಕ ಈ ಸಂಸ್ಥೆ ವಿಶಿಷ್ಟ ಮಾದರಿ ರೂಪಿಸಿದೆ ಎಂದು ಶ್ಲಾಘಿಸಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ವಿದ್ಯಾರ್ಥಿಗಳು ಪೂರ್ವಜನ್ಮದ ಪುಣ್ಯದ ಫಲವಾಗಿ ಈ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ಅವಕಾಶ ಗಳಿಸಿದ್ದಾರೆ. ಇಲ್ಲಿ ಉಚಿತ ಶಿಕ್ಷಣದ ಜೊತೆಗೆ ಜಾಗತಿಕ ಗುಣಮಟ್ಟದ ಸೇವೆಗಳೂ ಲಭ್ಯವಿವೆ. ಸಂಸ್ಥೆಯಲ್ಲಿ ಆಯೋಜಿಸುವ ಪ್ರತಿಯೊಂದು ಕಾರ್ಯಕ್ರಮವೂ ಉನ್ನತ ಗುಣಮಟ್ಟದಿಂದ ಕೂಡಿರುತ್ತದೆ ಎಂದು ಹೇಳಿದರು.
ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ. ಬಿ.ಎನ್. ನರಸಿಂಹಮೂರ್ತಿ, ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಇದ್ದರು.
------
ನಾದ ತರಂಗಗಳ ಕುರಿತು ಸಂಶೋಧನೆ:
ಆಕಾಶ ಮತ್ತು ನಾದ ತರಂಗಗಳಿಗೆ ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ವಿಶೇಷ ಮಹತ್ವವಿದೆ. ಮಂತ್ರಗಳ ಶಕ್ತಿಯು ಮನಸ್ಸಿನಲ್ಲಿರುವ ಋಣಾತ್ಮಕತೆಯನ್ನು ನಿವಾರಿಸಲು ನೆರವಾಗಬಲ್ಲದು. ಋಷಿಗಳು ನೀಡಿರುವ ಮಂತ್ರಗಳನ್ನು ಪಠಿಸುವುದರಿಂದ ಪ್ರಕೃತಿಯ ಪ್ರತಿಯೊಂದು ಅಣುವಿನ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗಬಹುದು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ಶಬ್ದವು ಚಿಕಿತ್ಸಾ ವಿಧಾನವಾಗಿಯೂ ಮಹತ್ವ ಪಡೆದಿದೆ. ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಶಬ್ದವು ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸಂಸ್ಥೆಯಲ್ಲಿ ಸಂಶೋಧನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
----
ಇಂದು ಲಲಿತಾ ಹೋಮ:
ನವರಾತ್ರಿ ಉತ್ಸವದ ಐದನೇ ದಿನವಾದ ಅಕ್ಟೋಬರ್ 15 ಗುರುವಾರ ಸತ್ಯ ಸಾಯಿ ಗ್ರಾಮದ ಯಾಗಶಾಲೆಯಲ್ಲಿ ಬೆಳಗ್ಗೆ 7.30ರಿಂದ ಲಲಿತಾ ಹೋಮ, ದುರ್ಗಾ ಹೋಮ ಹಾಗೂ ಸುಹಾಸಿನಿ ಮತ್ತು ಕನ್ನಿಕಾ ಪೂಜೆ ನಡೆಯಲಿದೆ.
ಸಂಜೆ 4 ಗಂಟೆಗೆ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ, ಚಂಡಿಕಾ ಪಾರಾಯಣ ಮತ್ತು ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಆಯೋಜಿಸಲಾಗಿದೆ. ಬಳಿಕ ಖ್ಯಾತ ಹಾರ್ಮೋನಿಯಂ ಕಲಾವಿದ ಡಾ. ರವೀಂದ್ರ ಕಟೋಟಿ ಅವರಿಂದ ‘ಅಮೃತಮಾಲಾ’ ಸಂಗೀತ ಕಾರ್ಯಕ್ರಮ ನಡೆಯಲಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.