ಹುಬ್ಬಳ್ಳಿ:
ಸಂಸತ್ತಿನ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚನೆಯಾಗಿರುವುದು ವಕ್ಫ್ ತಿದ್ದುಪಡಿ ಮಸೂದೆ ಕುರಿತು. ಆದರೆ, ಇವರು ವಿಜಯಪುರಕ್ಕೆ ಭೇಟಿ ನೀಡುತ್ತಿರುವುದು ಅನಧಿಕೃತ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.ಅವರು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಮಿತಿ ರಚನೆ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಆದರೆ, ಜೆಪಿಸಿ ರಚಿಸಿರುವುದು ತಿದ್ದುಪಡಿ ಮಸೂದೆಗಾಗಿಯೇ ವಿನಃ ಇಲ್ಲಿ ವಕ್ಫ್ ಆಸ್ತಿ ವಿಚಾರವಾಗಿ ಅಲ್ಲ. ಇದರಲ್ಲಿ ಯಾವುದೇ ಗೊಂದಲ ಇರಲಿಲ್ಲ. ರಾಜ್ಯದಲ್ಲಿ ಬಿಜೆಪಿ ನಾಯಕರು ವಿನಾಕಾರಣ ಗೊಂದಲ ಸೃಷ್ಟಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಬೇಕಾದರೆ ಸಮಿತಿಯ ರಚನೆ ಮಾಡಲಿ ಎಂದರು.
ಬಿಜೆಪಿಯಿಂದ ಗೊಂದಲ ಸೃಷ್ಟಿ:ಬಿಜೆಪಿಯವರಿಗೆ ಚುನಾವಣೆ ಮಾಡಲು ಯಾವುದೇ ವಿಚಾರಗಳಿಲ್ಲ. ವಕ್ಫ್ ಕುರಿತು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರೂ ಇವರು ಹೋರಾಟ ಮಾಡುತ್ತಿರುವುದು ಚುನಾವಣೆ ಹಾಗೂ ರಾಜಕೀಯಕ್ಕಾಗಿ. ಪ್ರಮೋದ್ ಮುತಾಲಿಕ್, ಬಿಜೆಪಿ ಎರಡು ಒಂದೇ. "ಏಕ್ ದಿಲ್ ದೋ ಜಾನ್ ತರಹ ". ಅನ್ನ ನೀಡುವ ರೈತರಿಗೆ ತೊಂದರೆ ಕೊಟ್ಟಿಲ್ಲ, ಕೊಡುವುದಿಲ್ಲ. ರೈತರಿಗೆ ನೋಟಿಸ್ ಕೊಟ್ಟಿದ್ದಾರೆ ಎಂದು ಗೊಂದಲ ಸೃಷ್ಟಿ ಮಾಡಿದರು. ಹೀಗಾಗಿ ವಾಪಸ್ ತೆಗೆದುಕೊಂಡಿದ್ದೇವೆ ಎಂದು ಜಮೀರ್ ತಿಳಿಸಿದರು.
ಗೆಲ್ಲುವ ವಿಶ್ವಾಸವಿದೆ:ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ಈ ಹಿಂದೆ ಶಿಗ್ಗಾಂವಿಯಲ್ಲಿ ಪ್ರಚಾರ ನಡೆಸಿದ್ದೇನೆ. ಮುಖ್ಯಮಂತ್ರಿಗಳು ಇಲ್ಲಿಗೆ ಬಂದು ಪ್ರಚಾರ ಮಾಡಿದ ನಂತರ ತುಂಬಾ ಚೆನ್ನಾಗಿದೆ, ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.
ಹಿಂದೆಯೂ ಮ್ಯಾಚ್ ಫಿಕ್ಸಿಂಗ್ ಇತ್ತಾ?:ಪ್ರತಿಪಕ್ಷದ ನಾಯಕ ಆರ್. ಅಶೋಕ ಅವರು ಮುಖ್ಯಮಂತ್ರಿಗಳು ಲೋಕಾಯುಕ್ತ ಅಧಿಕಾರಿಗಳೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಹಾಗಾಗಿ ಎರಡೇ ಗಂಟೆಗಳಲ್ಲಿ ವಿಚಾರಣೆ ಮುಗಿಸಿ ವಾಪಸಾಗಿದ್ದಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಜಮೀರ್, ಈ ಹಿಂದೆ ಬಿಜೆಪಿ ಕಾಲದಲ್ಲೂ ಬಹಳಷ್ಟು ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದಾರೆ. ಅವಾಗೆಲ್ಲ ಮ್ಯಾಚ್ ಫಿಕ್ಸಿಂಗ್ ಇತ್ತಾ? ಎಂಬುದನ್ನು ಬಿಜೆಪಿಯವರು ತಿಳಿಸಲಿ ಎಂದು ಹರಿಹಾಯ್ದರು.
2019ರಲ್ಲಿ ಪ್ರಕರಣವೊಂದರಲ್ಲಿ ನನ್ನನ್ನೂ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದರು. ಕೇವಲ ಅರ್ಧ ಗಂಟೆಯಲ್ಲಿ ವಿಚಾರಣೆ ನಡೆಸಿ ಕಳಿಸಿದ್ದರು. ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ ಬಂದಿದ್ದೆ. ಯಾವುದೇ ಒಂದು ತನಿಖೆಯ ಕುರಿತು ವಿಚಾರಣೆ ನಡೆಸಬೇಕಾದ್ದಲ್ಲಿ ಅದು ವಿಚಾರಣಾ ಅಧಿಕಾರಿ ಮೇಲೆ ನಿಗದಿಯಾಗಿರುತ್ತದೆ. ಅವರು ಯಾವೆಲ್ಲ ಪ್ರಶ್ನೆ ಕೇಳುತ್ತಾರೆಯೋ ಅದಕ್ಕೆ ಸರಿಯಾದ ಉತ್ತರ ನೀಡಿದರೆ ಆಯ್ತು. ಅದರಂತೆ ಮುಖ್ಯಮಂತ್ರಿಗಳೂ ಲೋಕಾಯುಕ್ತ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಿದ್ದಾರೆ ಅಷ್ಟೆ ಎಂದರು.ಮುಖ್ಯಮಂತ್ರಿ ಪಾತ್ರವಿಲ್ಲ:
ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ಲೋಕಾಯುಕ್ತ ತನಿಖೆ ಎದುರಿಸಲಿ ಎಂಬ ಬಿಜೆಪಿ ನಾಯಕರ ಪ್ರಶ್ನೆಗೆ ಉತ್ತರಿಸಿ, ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಯಾವುದೇ ಪಾತ್ರವಿಲ್ಲ. ಅವರೇಕೆ ರಾಜೀನಾಮೆ ನೀಡಬೇಕು? ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ಪಾತ್ರ ಇಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಆದರೆ, ನ್ಯಾಯಾಲಯದ ಆದೇಶಕ್ಕೆ ನಾವೆಲ್ಲ ತಲೆ ಬಾಗಲೇಬೇಕು. ಮುಖ್ಯಮಂತ್ರಿಗಳಿಗೆ ಲೋಕಾಯುಕ್ತದಿಂದ ತನಿಖೆಗೆ ನೋಟಿಸ್ ಕೊಟ್ಟಿದ್ದಾರೆ. ಹಾಗಾಗಿ ಅವರು ಹೋಗಿ ಭೇಟಿಯಾಗಿ ಬಂದಿದ್ದಾರೆ. ತನಿಖೆ ಆಗಬೇಕು, ತನಿಖೆ ಆಗಲಿ, ಇದರಲ್ಲಿ ತಪ್ಪೇನಿದೆ? ಎಂದರು.