ಮುಳಗುಂದದಲ್ಲಿ ಕನ್ನಡ ಜಾಗೃತಿ ಮೂಡಿಸಿದ ಜೂ. ವಿಷ್ಣುವರ್ಧನ್

KannadaprabhaNewsNetwork |  
Published : Oct 29, 2025, 01:30 AM IST
ಮುಳಗುಂದ ಪೊಲೀಸ್ ಠಾಣೆಯ ಆವರಣದಲ್ಲಿ ಜೂನಿಯರ್ ವಿಷ್ಣುವರ್ಧನ ಅವರನ್ನು  ಪೊಲೀಸರು ಹಾಗೂ ಪತ್ರಕರ್ತರು, ಕರವೇ ಘಟಕದವರು ಸನ್ಮಾನಿಸಿ ಬೀಳ್ಕೊಟ್ಟರು. | Kannada Prabha

ಸಾರಾಂಶ

ಇವರು ಬೆಂಗಳೂರಿನ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ವರ್ಷದ ಎರಡು ತಿಂಗಳು ಅಂದರೆ ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳಲ್ಲಿ ಕೆಲಸಕ್ಕೆ ರಜೆ ಹಾಕಿ ಕನ್ನಡದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಮುಳಗುಂದ: ಕನ್ನಡ ನಮ್ಮ ಮಾತೃಭಾಷೆ, ಕನ್ನಡವನ್ನ ಇತರರಿಂದ ಉಳಿಸಬೇಕು. ಗಡಿನಾಡಲ್ಲಿ ಅಳಿಸಿ ಹೋಗುವ ಸ್ಥಿತಿಯಲ್ಲಿದ್ದು, ಅದರ ಉಳಿವಿಗಾಗಿಯೇ ಕೆಲವು ಜನ ಪಣ ತೊಟ್ಟಿದ್ದಾರೆ. ಅಂಥವರಲ್ಲಿ ನಾನು ಒಬ್ಬ ಎಂದು ಕನ್ನಡದ ಬಗ್ಗೆ ವಿಶೇಷ ಕಾಳಜಿಯುಳ್ಳ ಜೂನಿಯರ್‌ ವಿಷ್ಣುವರ್ಧನ್‌ ನಾಗಬಸಯ್ಯ ಮಳಲೀಮಠ ಪಟ್ಟಣದಲ್ಲಿ ಕನ್ನಡದ ಕುರಿತು ಜಾಗೃತಿ ಮೂಡಿಸಿದರು.

ಮೂಲತಃ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಐರಣಿ ಗ್ರಾಮದ ನಾಗಬಸಯ್ಯ ಮಳಲೀಮಠ ಉರ್ಫ ಜೂನಿಯರ್ ವಿಷ್ಣುವರ್ಧನ್‌ ಕನ್ನಡ ಭಾಷೆ ಉಳಿವಿಗಾಗಿ ಪಣ ತೊಟ್ಟು ತಮ್ಮ ಸ್ವಂತ ಖರ್ಚಿನಲ್ಲಿ ಬೆಂಗಳೂರಿನಿಂದ ಬೀದರ್‌ವರೆಗೆ ಕನ್ನಡದ ಬಗ್ಗೆ ಪ್ರಚಾರ ಮಾಡುತ್ತಾ, ಪ್ರತಿನಿತ್ಯ 100ರಿಂದ 150 ಕಿಮೀ ಕ್ರಮಿಸಿ ಮಧ್ಯೆದಲ್ಲಿರುವ ಎಲ್ಲ ಗ್ರಾಮಗಳಲ್ಲಿ ಕನ್ನಡ ಬಗ್ಗೆ ಜಾಗೃತಗೊಳಿಸುವ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಜಾಗೃತಿ ಅಭಿಯಾನವನ್ನು ಕಳೆದ 10 ವರ್ಷಗಳಿಂದ ಮಾಡಿಕೊಂಡು ಬಂದಿದ್ದು, ರಾಜ್ಯಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಇವರು ಬೆಂಗಳೂರಿನ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ವರ್ಷದ ಎರಡು ತಿಂಗಳು ಅಂದರೆ ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳಲ್ಲಿ ಕೆಲಸಕ್ಕೆ ರಜೆ ಹಾಕಿ ಕನ್ನಡದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಎರಡು ತಿಂಗಳು ಕರ್ನಾಟಕದ ಗಡಿನಾಡುಗಳಾದ ಬಳ್ಳಾರಿ, ಬೀದರ್‌, ಕಲಬುರಗಿ, ವಿಜಯಪುರ, ಬೆಳಗಾವಿ ಹೀಗೆ ರಾಜ್ಯದ ಎಲ್ಲ ಗಡಿ ಜಿಲ್ಲೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ.

ಜತೆಗೆ ದಿ. ವಿಷ್ಣುವರ್ಧನ ಅವರ ಕೆಲವು ಸಂಭಾಷಣೆಗಳ ಸುರಿಮಳೆ ಸುರಿಸಿ ಮುಂದೆ ಸಾಗುವ ಇವರು ಕನ್ನಡದ ಬಗ್ಗೆ, ವಿಷ್ಣುವರ್ಧನ ಅವರ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ. ಕನ್ನಡದ ವಿಶೇಷ ರಥ: ತಮ್ಮ ಬೈಕ್‌ನಲ್ಲಿ ವಿಷ್ಣುದಾದಾ ಅವರ ಭಾವಚಿತ್ರ, ತಾಯಿ ಭುವನೇಶ್ವರಿ ಭಾವಚಿತ್ರದೊಂದಿಗೆ ಕನ್ನಡದ ಧ್ವಜಗಳಿಂದ ಹಾಗೂ ಕೆಂಪು, ಹಳದಿ ಪ್ಲಾಸ್ಟಿಕ್‌ ಹೂವುಗಳಿಂದ ಅಲಂಕೃತಗೊಂಡ ವಿಶೇಷ ರಥದ ಮೇಲೆ ರಸ್ತೆ ಸುರಕ್ಷತಾ ಸ್ಲೋಗನ್‌ಗಳಾದ ಶಿರಸ್ತ್ರಾಣ ಧರಿಸಿ, ರಸ್ತೆ ನಿಯಮ ಪಾಲಿಸಿ, ಕನ್ನಡ ಶಾಲೆ ಉಳಿಸಿ, ಹಸಿರು ಜೀವದ ಉಸಿರು ಹೀಗೆ ಅನೇಕ ಸ್ಲೋಗನಗಳನ್ನು ಬರೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇದು ಎಲ್ಲರ ಗಮನ ಸೆಳೆಯುತ್ತಿದೆ. ಜತೆಗೆ ಪೊಲೀಸರ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದಾರೆ.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು