ಓದುಗರಿಗೆ ಬೇಕಾದ ಗ್ರಂಥಾಲಯ ರೂಪಿಸಬೇಕು

KannadaprabhaNewsNetwork |  
Published : May 03, 2026, 01:15 AM IST
5 | Kannada Prabha

ಸಾರಾಂಶ

ಗ್ರಂಥಾಲಯ ಇಲಾಖೆಯು ಇತ್ತೀಚೆಗೆ ಜನರಿಗೆ ಬಳಕೆಯಾಗುವಂತಹ ಗ್ರಂಥಾಲಯಗಳನ್ನು ರೂಪಿಸಲು ಹೊಸ ಆಲೋಚನೆಗಳನ್ನು ಕೈಗೊಳ್ಳಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರುಜನರಿಗೆ, ಓದುಗರಿಗೆ ಏನು ಬೇಕೋ ಅದನ್ನು ನೀಡುವಂತಹ ಗ್ರಂಥಾಲಯ ರೂಪಿಸಬೇಕು ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತ ಜಿ. ಜಗದೀಶ್ ತಿಳಿಸಿದರು.ನಗರದ ಜೆಎಸ್ಎಸ್ ಆಸ್ಪತ್ರೆ ಆವರಣದಲ್ಲಿನ ರಾಜೇಂದ್ರ ಭವನದಲ್ಲಿ ಜೆಎಸ್ಎಎಸ್‌ ಮಹಾವಿದ್ಯಾಪೀಠದ ವತಿಯಿಂದ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಐದು ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಗ್ರಂಥಾಲಯ ಇಲಾಖೆಯು ಇತ್ತೀಚೆಗೆ ಜನರಿಗೆ ಬಳಕೆಯಾಗುವಂತಹ ಗ್ರಂಥಾಲಯಗಳನ್ನು ರೂಪಿಸಲು ಹೊಸ ಆಲೋಚನೆಗಳನ್ನು ಕೈಗೊಳ್ಳಲಾಗುತ್ತಿದೆ. ವರ್ಷ- ವರ್ಷ ಕೋಟ್ಯಂತರ ರೂ. ಮೌಲ್ಯದ ಲಕ್ಷಾಂತರ ಪುಸ್ತಕಗಳು ಗ್ರಂಥಾಲಯಗಳ ರ್ಯಾಕ್ ಗಳಲ್ಲಿ ಬಂದು ಕುಳಿತುಕೊಳ್ಳುತ್ತವೆ. ಇವುಗಳಲ್ಲಿ ಎಷ್ಟೋ ಪುಸ್ತಕಗಳನ್ನು ಹತ್ತಾರು ವರ್ಷವಾದರೂ ಒಂದು ಹಾಳೆಯನ್ನು ತೆಗೆದು ನೋಡುವುದಿಲ್ಲ. ಹೀಗಾಗಿ ನಾವು. ಆಗ ಮಾತ್ರ ಓದುಗರು ತಮಗೆ ಇಷ್ಟವಾದ ಪುಸ್ತಕಗಳನ್ನು ಓದಲು ಶುರು ಮಾಡುತ್ತಾರೆ ಎಂದರು.ಈ ನಿಟ್ಟಿನಲ್ಲಿ ಗ್ರಂಥಾಲಯಗಳಿಗೆ ಹೊಸದಾದ ರೂಪ ನೀಡಿ ಓದುಗ ಸ್ನೇಹಿಯಾಗಿ ನಿರ್ಮಿಸಲು ಮುಂದಾಗಬೇಕು. ಇದಕ್ಕಾಗಿ ನಮ್ಮ ಗ್ರಂಥಾಲಯ ಇಲಾಖೆಯ ಎಲ್ಲಾ ಅಧಿಕಾರಿ, ಸಿಬ್ಬಂದಿ ವರ್ಗಗಳಿಂದ ಅಭಿಪ್ರಾಯ, ಸಲಹೆ ಸಂಗ್ರಹಿಸಲಾಗಿದೆ ಎಂದು ಅವರು ತಿಳಿಸಿದರು.ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಈಗೀಗ ರೈಲುಗಳಲ್ಲಿ, ಬಸ್ಸುಗಳಲ್ಲಿ ಏರ್ಪೋರ್ಟ್ ಗಳಲ್ಲಿ, ವಿಮಾನದಲ್ಲಿ ಪ್ರಯಾಣಿಸುವಾಗ ಕೆಲವು ಮಂದಿ ಪುಸ್ತಕಗಳನ್ನು ಓದಲು ಶುರು ಮಾಡಿದ್ದಾರೆ. ಕೆಲವರು ಟ್ಯಾಬ್ ನಲ್ಲಿ ಡಿಜಿಟಲ್ ವೇದಿಕೆಯಲ್ಲಿ ಪುಸ್ತಕಗಳನ್ನು ಓದುತ್ತಿದ್ದಾರೆ. ಇಂತಹ ವಿಷಯಗಳು ಸ್ವಲ್ಪ ಸಂತಸ ತರುತ್ತವೆ. ಏಕೆಂದರೆ ಮೊಬೈಲ್ ನಲ್ಲೇ ಮುಳುಗಿದ್ದವರು ಸ್ವಲ್ಪ-ಸ್ವಲ್ಪವಾಗಿ ಪುಸ್ತಕದತ್ತ ಹೊರಳುತ್ತಿರುವುದನ್ನು ನೋಡಿದರೆ ಕೆಳಗೆ ಇದ್ದ ಕಾಲದ ಚಕ್ರ ಮತ್ತೆ ಮೇಲೆ ಬಂದಿದೆ ಎನ್ನಬಹುದು ಎಂದರು.ಗ್ರಂಥಾಲಯದಲ್ಲಿ ಜನರು ಆಸಕ್ತಿಯಿಂದ ಓದಲು ಏನು ಮಾಡಬೇಕು ಎನ್ನುವುದಕ್ಕಾಗಿ ಎಲ್ಲಾ ಗ್ರಂಥಾಲಯಗಳಿಂದಲೂ ಅಂಕಿ ಅಂಶ, ಮಾಹಿತಿ ಕಲೆ ಹಾಕಲಾಗುತ್ತಿದೆ. ಜನರು, ಓದುಗರು ಯಾವ ಪುಸ್ತಕ, ಯಾವ ವರ್ಗದ ಪುಸ್ತಕಗಳನ್ನು ಹೆಚ್ಚು ಓದುತ್ತಾರೆ. ಎಂತಹ ಪುಸ್ತಕಗಳನ್ನು ಮನೆಗೆ ತಗೆದುಕೊಂಡು ಹೋಗುತ್ತಾರೆ ಎನ್ನುವ ಮಾಹಿತಿಯನ್ನು ಕ್ರೋಢಿಕರಿಸಿ, ವಿಶ್ಲೇಷಣೆ ನಡೆಸಿ ಓದುಗರು ಬಯಸುವಂತಹ ಪುಸ್ತಕಗಳನ್ನು ಖರೀದಿ ಮಾಡಲಾಗುತ್ತದೆ ಎಂದರು.ಪುಸ್ತಕಗಳು, ಗ್ರಂಥಗಳಿಂದ ಓದುವುದರಿಂದ ಅದ್ಭುತ ಅನುಭವ ಉಂಟಾಗುತ್ತದೆ. ಜೀವನದಲ್ಲಿ ಅನೇಕ ಬದಲಾವಣೆ ಕಾಣಬಹುದು. ಪುಸ್ತಕ ಓದಿ ಏನ್ನಾನಾದರೂ ಸಾಧಿಸಬಹುದು ಎನ್ನುವುದಕ್ಕೆ ನಾನೇ ಸಾಕ್ಷಿ. ಬೆಂಗಳೂರಿನ ಅವಿನ್ಯೂ ರಸ್ತೆಯಲ್ಲಿ ಅರ್ಧ, ಕಾಲು ಬೆಲೆಯ ರಿಯಾಯ್ತಿ ದರದಲ್ಲಿ ದೊರೆಯುತ್ತಿದ್ದ ಪುಸ್ತಕ ತಗೆದುಕೊಂಡು ಓದಿ ಸಾರ್ವಜನಿಕ ಸೇವೆಯನ್ನು ಮಾಡುತ್ತಿದ್ದೇನೆ ಎಂದರು.ವಿಶ್ರಾಂತ ಪ್ರಾಧ್ಯಾಪಕ ಡಾ.ಸಿ. ನಾಗಣ್ಣ ಮಾತನಾಡಿ, ಇತ್ತೀಚೆಗೆ ಆಳವಾದ ಅಧ್ಯಯನ ಕಡಿಮೆ ಆಗುತ್ತಿದೆ. ಎಲ್ಲರೂ ಮೇಲ್ಪದರದಲ್ಲಿ ಸರಸರನೆ ಓದುವುದನ್ನು ರೂಢಿಸಿಕೊಂಡು ಬಿಟ್ಟಿದ್ದಾರೆ. ಆದ್ದರಿಂದ ಈಗಿನ ಯುವ ಸಮೂಹ ಪ್ರಾಚೀನ ಸಾಹಿತ್ಯವನ್ನು ಕುರಿತು ಆಳವಾಗಿ ತಿಳಿದುಕೊಂಡು ಮುಂದಿನ ಪೀಳಿಗೆಗೆ ತಲುಪಿಸುವಂತಹ ಮಹಾನ್ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಇಸ್ರೋದ ಮಾಜಿ ಅಧ್ಯಕ್ಷ ಡಾ.ಎ.ಎಸ್. ಕಿರಣ್ಕುಮಾರ್ಅಧ್ಯಕ್ಷತೆ ವಹಿಸಿದ್ದರು. ಡಾ.ಸುಜಾತ ಸ್ವಾಮಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಇದ್ದರು.ರೂಪಾ ಗುರುಪ್ರಸಾದ್, ಕೆ.ಜಿ.ವಿನುತಾ ಪ್ರಾರ್ಥಿಸಿದರು. ಡಾ.ಎಂ.ಎನ್. ನಂದೀಶ್ಹಂಚೆ ಸ್ವಾಗತಿಸಿದರು. ನಗರ್ಲೆ ಶಿವಕುಮಾರ ವಂದಿಸಿದರು. ಡಾ. ಕಟ್ನವಾಡಿ ಪ್ರಭುಸ್ವಾಮಿ ನಿರೂಪಿಸಿದರು.--- ಬಾಕ್ಸ್-- -- ಬಿಡುಗಡೆಗೊಂಡ ಕೃತಿಗಳು--ಡಾ.ಜಿ.ಎಸ್. ಕಾಪಸೆ ಸಂಪಾದನೆಯಲ್ಲಿ ಸಿದ್ದರಾಮೇಶ್ವರ ಶರಣರು ಬೆಲ್ದಾಳ ಅವರು ವ್ಯಾಖ್ಯಾನಿಸಿರುವ ಚನ್ನಬಸವಣ್ಣನವರ ವಚನ ವ್ಯಾಖ್ಯಾನ, ಸದಾನಂದ ಕನವಳ್ಳಿ ರಚಿತ ವೀರಶೈವ-ಲಿಂಗಾಯತ ಪರಿಕಲ್ಪನೆಗಳು, ದಿ.ಎಚ್. ಗಂಗಾಧರರ ಸಚಿತ ಗ್ಲಿಂಪಸ್ ಆಫ್ ಸುತ್ತೂರು ಮಠ್, ಡಾ.ಎನ್. ಮಹೇಶ್ವರಿ ಸಂಪಾದನೆಯಲ್ಲಿ ಮೈಸೂರು ಪ್ರಜಾಪ್ರತಿನಿಧಿ ಸಭೆ ಚಾರಿತ್ರಿಕ ಅವಲೋಕನ- ವಿಚಾರ ಸಂಕಿರಣ ಹಾಗೂ ಡಾ.ಎ.ಎಸ್. ಕಿರಣ್ ಕುಮಾರ್‌ ವಿರಚಿತ ಸ್ಪೇಸ್‌ ಟೆಕ್ನಾಲಜಿ ಅಂಡ್‌ ಸೊಸೈಟಲ್‌ ಅಪ್ಲಿಕೇಷನ್ಸ್‌- ಫ್ರೆಂಚ್‌ ಅನುವಾದ ಪುಸ್ತಕಗಳು ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್ ಸಮಸ್ಯೆ ಮುಂದುವರಿದರೆ ಬೃಹತ್‌ ಪ್ರತಿಭಟನೆ
ಸಾಮಾಜಿಕ ಕ್ರಾಂತಿಗೆ ಚಾಲನೆ ನೀಡಿದ ಬಸವಣ್ಣ: ಮಾರನಗೆರೆ ಸಂಗಮೇಶ್