ಕನ್ನಡಪ್ರಭ ವಾರ್ತೆ ಮೈಸೂರುನಮ್ಮ ದೇಶವು ಪ್ರಸ್ತುತ ಆರ್ಥಿಕತೆಯಲ್ಲಿ ವಿಶ್ವದ 4ನೇ ಸ್ಥಾನಕ್ಕೆ ಏರಿಕೆಯಾಗಿರುವುದಕ್ಕೆ ನಮ್ಮ ದೇಶದ ಸಂವಿಧಾನದ ಆಶಯವೇ ಪೂರಕವಾಗಿದೆ ಎಂದು ಕೇರಳದ ಹೈಕೋರ್ಟ್ ನ್ಯಾಯಮೂರ್ತಿ ಎನ್. ನಗರೇಶ್ ತಿಳಿಸಿದರು.ಕುವೆಂಪುನಗರದಲ್ಲಿರುವ ಜೆಎಸ್‌ಎಸ್ ಕಾನೂನು ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ಶನಿವಾರ ನಡೆದ ಭಾರತೀಯ ಸಂವಿಧಾನಕ್ಕೆ ಏಳು ದಶಕಗಳು: ಸಿದ್ಧಾಂತ, ವಾಸ್ತವಗಳು ಮತ್ತು ಜೀವನಧಾರ ಕುರಿತ ಒಂದು ದಿನ ವಿಚಾರಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.ದೇಶದ ಅಭಿವೃದ್ಧಿಗೆ, ಜನರ ಆಶೋತ್ತರಗಳಿಗೆ ಸ್ಪಂದಿಸುವ ಗುಣವುಳ್ಳ ನಮ್ಮ ದೇಶದ ಸಂವಿಧಾನವು, ಆಯಾ ಕಾಲಕ್ಕೆ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಳ್ಳುವಂತೆ ರಚಿಸಲಾಗಿದೆ. ಪ್ರಸ್ತುತ ದಿನಮಾನದಲ್ಲಿ ದೇಶವು ಅಭಿವೃದ್ಧಿ ಆಗಿರುವುದಕ್ಕೆ ಸಂವಿಧಾನದಲ್ಲಿ ಅಡಕವಾಗಿರುವ ಅಂಶಗಳೇ ಕಾರಣವಾಗಿವೆ ಎಂದರು.ಭಾರತದಲ್ಲಿ ಪ್ರಜಾಪ್ರಭುತ್ವವು 10 ವರ್ಷದಲ್ಲೇ ನಾಶವಾಗುತ್ತದೆ. ಅದಕ್ಕೆ ಹೆಚ್ಚು ದಿನ ಉಳಿಗಾಲವಿಲ್ಲ ಎಂದು ಬಿಟ್ರೀಷರು ನಮ್ಮ ದೇಶ ಸ್ವಾತಂತ್ರ್ಯಗೊಂಡ ಸಂದರ್ಭದಲ್ಲಿ ಹೇಳಿದ್ದರು. ಏಳು ದಶಕಗಳು ಕಳೆದು ಹೋಯಿತು. ಅವರೂ ಹೇಳಿದಂತೆ ಘಟಿಸಲೇ ಇಲ್ಲ. ಆದರೆ, ವಿಶ್ವದ ಆರ್ಥಿಕತೆಯಲ್ಲಿ ಯೂರೋಪಿಯನ್ ದೇಶಗಳನ್ನು ಹಿಂದಿಕ್ಕಿ ನಮ್ಮ ದೇಶ ಮೇಲೆ ಬಂದಿದೆ. ಇದಕ್ಕೆ ಕಾರಣವಾಗಿರುವುದು ನಮ್ಮ ಸಂವಿಧಾನ ಎಂದು ಅವರು ಹೇಳಿದರು.ಭಾರತವು ಇಂದು ಆರೋಗ್ಯ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿ ಇದೆ. ನಮ್ಮ ನೆರೆ- ಹೊರೆಯ ದೇಶದ ಜನರಲ್ಲದೇ ಯೂರೋಪಿಯನ್ ದೇಶದ ಜನರು ನಮ್ಮ ದೇಶಕ್ಕೆ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ಭಾರತದ ವೈದ್ಯರು ವಿಶ್ವ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ. ದೇಶದ ಚಿಕಿತ್ಸಾ ಗುಣಮಟ್ಟವೂ ಉತ್ತಮ ದರ್ಜೆಯಿಂದ ಕೂಡಿದೆ ಎಂದರು.ಕಾನೂನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಭಾರತದ ಸಂವಿಧಾನವನ್ನು ಓದಬೇಕು. ಅಲ್ಲಿ ಇರುವ ವಿಷಯಗಳನ್ನು ಅರಿತುಕೊಳ್ಳಬೇಕು. ಅದರ ಆಶಯವನ್ನು ತಿಳಿದುಕೊಳ್ಳಬೇಕು. ನಮ್ಮ ದೇಶದ ವ್ಯವಸ್ಥೆಗೆ ಸಂವಿಧಾನವೂ ಯಾವ ರೀತಿ ಪೂರಕವಾಗಿ ಇದೆ ಎನ್ನುವುದನ್ನು ಮನನ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಕೆ.ಎಸ್. ಸುರೇಶ್, ಪ್ರಾಂಶುಪಾಲೆ ಡಾ.ಎನ್. ವಾಣಿಶ್ರೀ, ಸಂಯೋಜಕ ಆಶ್ರಯ್ ಎಸ್. ಚಕ್ರಬೊರ್ತಿ ಇದ್ದರು.