ಕನ್ನಡಪ್ರಭ ವಾರ್ತೆ ಮೈಸೂರು
ಕನ್ನಡ ಸಂಭ್ರಮವು ಭಾವನೆಗಳಿಗೆ ಸೀಮಿತಗೊಳ್ಳದೆ ಕನ್ನಡಿಗರ ಬದುಕನ್ನು ರೂಪಿಸುವುದಕ್ಕೆ ಮುನ್ನುಡಿ ಬರೆಯಬೇಕು. ಪರಭಾಷೆ ವ್ಯಾಮೋಹದಿಂದ ಕನ್ನಡ ಶಬ್ಧಗಳು ಮರೆಯಾಗುತ್ತಿವೆ ಎಂದು ಮೈಸೂರು ವಿವಿ ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ. ನಂಜಯ್ಯ ಹೊಂಗನೂರು ತಿಳಿಸಿದರು.ನಗರದ ಎಂಐಟಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಅಧ್ಯಯನ ವಿಭಾಗವು ಆಯೋಜಿಸಿದ ಕನ್ನಡ ರಾಜೋತ್ಸವದದಲ್ಲಿ ಮಾತನಾಡಿದ ಅವರು, ಕನ್ನಡ ಶಾಲೆಗಳು ಮುಚ್ಚುತಿರುವುದು ತುಂಬಾ ನೋವಿನ ಸಂಗತಿ. ಕನ್ನಡ ಬೆಳವಣಿಗೆ ಬಗ್ಗೆ ಸರ್ಕಾರಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ವಿಷಾದಿಸಿದರು.ನವೆಂಬರ್ ತಿಂಗಳು ಬಂತೆಂದರೆ ಎಲ್ಲೆಡೆ ಕೆಂಪು, ಹಳದಿ ಬಣ್ಣ ಕಟ್ಟುತ್ತೇವೆ. ಆದರೆ, ನಿಜವಾಗಿ ಆಗಬೇಕಿರುವುದು ಭಾಷೆ ಕಟ್ಟುವ ಕೆಲಸವಾಗಬೇಕು. ಕನ್ನಡ ಭಾಷೆ ಜೀವಂತವಾಗಿ ಉಳಿಯಲು ಸಾಹಿತಿಗಳು, ಕನ್ನಡ ಹೋರಾಟಗಾರರು ಕಾರಣವಾಗುವಂತೆ ಸಾಮಾನ್ಯ ವ್ಯಕ್ತಿಯ ಪಾತ್ರ ಮುಖ್ಯವಾಗುತ್ತದೆ ಎಂದು ಅವರು ಹೇಳಿದರು.ಕನ್ನಡ ಭಾಷೆ ಕೇವಲ ವರ್ಣಮಾಲೆಯಲ್ಲ ಅದು ಜಲ, ನೆಲ, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ ಎಲ್ಲವನ್ನೂ ಒಳಗೊಂಡಿದೆ. ಗಡಿನಾಡು ಶಾಲೆಗಳಿಗೆ ಹೆಚ್ಚು ಮಾನ್ಯತೆ ಸಿಗುವಂತಾಗಬೇಕು. ಅಲ್ಲಿನ ಸಮಸ್ಯೆಗಳ ಕುರಿತು ಸರ್ಕಾರ ಅಧ್ಯಯನ ಮಾಡಬೇಕು ಎಂದರು.ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಯ ಕರೆಸ್ಪಾಂಡೆಂಟ್ ಎನ್.ಆರ್. ಮಂಜುನಾಥ ಮಾತನಾಡಿ, ಅಮ್ಮ ಎನ್ನುವ ಪದ ಮಮ್ಮಿ ಆಗಿದೆ. ಹೀಗಿರುವಾಗ ನಾವು ಕನ್ನಡವನ್ನು ಕಟ್ಟಲು ಹೇಗೆ ಸಾಧ್ಯ. ಮನೆಯಲ್ಲಿ ಪೋಷಕರು ಸಹ ಕನ್ನಡದ ಬಗ್ಗೆ ಅರಿವು ಮೂಡಿಸಬೇಕು. ಹಿಂದೆ ಕವಿಗಳು ಸಣ್ಣ ವಯಸಿಗೆ ಕಾವ್ಯಗಳನ್ನು ರಚನೆ ಮಾಡುತ್ತಿದರು. ಇವತ್ತಿನ ಪೀಳಿಗೆಯ ಮಕ್ಕಳಿಗೆ ಮೊಬೈಲ್ ಹುಚ್ಚು ಹೆಚ್ಚಾಗಿದೆ. ಇದರಿಂದ ಮಕ್ಕಳು ಹೊರಬರಬೇಕು ಎಂದು ತಿಳಿಸಿದರು.ಪ್ರಾಂಶುಪಾಲರಾದ ಎಂ. ಚಂದ್ರಜಿತ್, ಡಾ.ಟಿ.ಎನ್. ನಂದ, ಮಧು ಮೊದಲಾದವರು ಇದ್ದರು.