;Resize=(412,232))
ಬೆಂಗಳೂರು : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಎರಡನೇ ಪತ್ನಿ ತನ್ನ ಸೋದರ ಮಾವನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮುನೇಶ್ವರ ಬ್ಲಾಕ್‌ನ ತಿಗಳರಪಾಳ್ಯದಲ್ಲಿ ನಡೆದಿದೆ.
ಆಟೋ ಚಾಲಕ ವೆಂಕಟೇಶ್(65) ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ವೆಂಕಟೇಶ್ ಅವರ ಎರಡನೇ ಪತ್ನಿ ಪಾರ್ವತಿ(50) ಮತ್ತು ಆಕೆ ಸೋದರಮಾವ ರಂಗಸ್ವಾಮಿ(60)ಯನ್ನು ಬಂಧಿಸಲಾಗಿದೆ.
ವೆಂಕಟೇಶ್ ಕೆಲ ವರ್ಷಗಳ ಹಿಂದೆ ಮಹಿಳೆಯೊಬ್ಬಳನ್ನು ವಿವಾಹವಾಗಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 10 ವರ್ಷಗಳ ಹಿಂದೆ ಆಕೆಯನ್ನು ಬಿಟ್ಟು ದೂರವಿದ್ದರು. ನಂತರ 6 ವರ್ಷಗಳ ಹಿಂದೆ ಪಾರ್ವತಿಯನ್ನು ಎರಡನೇ ವಿವಾಹವಾಗಿದ್ದರು.
ಈ ಮಧ್ಯೆ ವೆಂಕಟೇಶ್ ಅವರ ಮೊದಲನೇ ಪತ್ನಿ ಮಗ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ. ಇದರಿಂದ ಆಕ್ರೋಶಗೊಂಡ ಎರಡನೇ ಪತ್ನಿ ಪಾರ್ವತಿ, ನಿನಗೆ ಮೊದಲನೇ ಹೆಂಡತಿ ಮತ್ತು ಆಕೆ ಮಗನ ಮೇಲೆಯೇ ಹೆಚ್ಚು ಪ್ರೀತಿ. ನನ್ನ ಮೇಲೆ ನಿನಗೆ ಪ್ರೀತಿ ಕಡಿಮೆಯಾಗಿದೆ. ಆರು ವರ್ಷಗಳ ಕಾಲ ನಿನ್ನ ಜತೆ ಸಂಸಾರ ಮಾಡಿದ್ದೇನೆ. ಹೀಗಾಗಿ ನಿನ್ನ ಹೆಸರಿನಲ್ಲಿರುವ ಮನೆಯನ್ನು ಬರೆದುಕೊಡು ಎಂದು ಬೇಡಿಕೆ ಇಟ್ಟಿದ್ದಳು. ಮನೆ ಬರೆದುಕೊಡು ಇಲ್ಲವಾದರೆ 6 ಲಕ್ಷ ರು. ಹಣ ಕೊಡುವಂತೆ ಗಲಾಟೆ ಮಾಡುತ್ತಿದ್ದಳು.
ಇದಕ್ಕೆ ಒಪ್ಪದ ವೆಂಕಟೇಶ್ 2.5 ಲಕ್ಷ ರು. ನೀಡುವುದಾಗಿ ಹೇಳಿದ್ದ. ಭಾನುವಾರ ರಾತ್ರಿ ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಈ ವೇಳೆ ವೆಂಕಟೇಶ್ ಪತ್ನಿ ಪಾರ್ವತಿಯನ್ನು ಮನೆಯಿಂದ ಹೊರಗೆ ಹಾಕಿದ್ದ. ಇದರಿಂದ ಕೋಪಗೊಂಡ ಪಾವರ್ತಿ ತನ್ನ ಸೋದರಮಾವ ರಂಗಸ್ವಾಮಿಗೆ ಕರೆ ಮಾಡಿ ಮನೆ ಬಳಿ ಕರೆಸಿಕೊಂಡಿದ್ದಳು. ಇಬ್ಬರು ಮನೆಗೆ ಹೋಗಲು ಯತ್ನಿಸಿದ್ದಾಗ ತಳ್ಳಾಟ ನೂಕಾಟವಾಗಿದೆ.
ಆಗ ಇಬ್ಬರು ಸೇರಿ ಮಹಡಿ ಮನೆಯ ಮೇಲಿಂದ ವೆಂಕಟೇಶ್‌ನನ್ನು ಕೆಳಗೆ ತಳ್ಳಿದ್ದಾರೆ. ಕೆಳಗೆ ಬಿದ್ದ ವೆಂಟಕೇಶ್ ತಲೆಗೆ ತೀವ್ರ ಗಾಯವಾಗಿತ್ತು. ಪೆಟ್ಟಾಗಿದ್ದರೂ ವೆಂಕಟೇಶ್ ಮೇಲೆ ಹಲ್ಲೆ ಮಾಡಿದ್ದರು. ಇದರಿಂದ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.