ಕನ್ನಡ ಭಾಷೆ ಕೈಬಿಟ್ಟು ಪರೀಕ್ಷೆ ನಡೆಸಲು ಮುಂದಾಗಿರುವ ರೈಲ್ವೆ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರವೇ ರಾಜಾಧ್ಯಕ್ಷ ಟಿ.ಎ.ನಾರಾಯಣಗೌಡ, ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕಲು ಕರೆ ನೀಡಿದ್ದಾರೆ. ಇದರ ಬೆನ್ನಲ್ಲೆ ಅವರಿಗೆ ಪೊಲೀಸರು ನೋಟಿಸ್‌ ನೀಡಿದ್ದು, ಪ್ರತಿಭಟನೆ ನಡೆಸದಂತೆ ತಾಕೀತು ಮಾಡಿದ್ದಾರೆ.

ಹುಬ್ಬಳ್ಳಿ : ನೈಋತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಖಾಲಿ ಇರುವ ಗೂಡ್ಸ್ ಟ್ರೇನ್ ಮ್ಯಾನೇಜರ್ (ಶೇ.60 ಪ್ರಮೋಷನಲ್ ಕೋಟಾ) 194 ಹುದ್ದೆ ಹಾಗೂ ಹುಬ್ಬಳ್ಳಿ ವಿಭಾಗದಲ್ಲಿ ಖಾಲಿ ಇರುವ ಎಲ್‌ಡಿಸಿಇ (ಲಿಮಿಟೆಡ್‌ ಡಿಪಾರ್ಟ್‌ಮೆಂಟಲ್‌ ಕಾಂಪಿಟೇಟಿವ್‌ ಎಕ್ಸಾಮಿನೇಷನ್‌) (ಶೇ.15 ಪ್ರಮೋಷನಲ್ ಕೋಟಾ)ಯ 101 ಮುಂಬಡ್ತಿ ಹುದ್ದೆಗಳಿಗೆ ಮಂಗಳವಾರ ಪರೀಕ್ಷೆ ನಡೆಯುತ್ತಿದೆ. 

 ಈ ಮಧ್ಯೆ, ಕನ್ನಡ ಭಾಷೆ ಕೈಬಿಟ್ಟು ಪರೀಕ್ಷೆ ನಡೆಸಲು ಮುಂದಾಗಿರುವ ರೈಲ್ವೆ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರವೇ ರಾಜಾಧ್ಯಕ್ಷ ಟಿ.ಎ.ನಾರಾಯಣಗೌಡ, ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕಲು ಕರೆ ನೀಡಿದ್ದಾರೆ. ಇದರ ಬೆನ್ನಲ್ಲೆ ಅವರಿಗೆ ಪೊಲೀಸರು ನೋಟಿಸ್‌ ನೀಡಿದ್ದು, ಪ್ರತಿಭಟನೆ ನಡೆಸದಂತೆ ತಾಕೀತು ಮಾಡಿದ್ದಾರೆ. ಈ ನಡುವೆ, 100ಕ್ಕೂ ಹೆಚ್ಚು ಪರೀಕ್ಷಾರ್ಥಿಗಳು ಸೋಮವಾರ ಹುಬ್ಬಳ್ಳಿಯಲ್ಲಿ ಸಭೆ ನಡೆಸಿದ್ದು, ಪರೀಕ್ಷೆ ಬಹಿಷ್ಕರಿಸುವ ನಡೆ ಕೈಬಿಟ್ಟು ಪರೀಕ್ಷೆ ಮುಂದೂಡುವಂತೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಪರೀಕ್ಷೆ 4 ದಿನ ಉಳಿದಿರುವಾಗ ಅವಕಾಶ ನಿರಾಕರಣೆ:

ವಿಭಾಗಮಟ್ಟದಲ್ಲಿ ನಡೆಯುವ ಪರೀಕ್ಷೆಗಳನ್ನು ಹಿಂದಿ, ಇಂಗ್ಲಿಷ್‌ ಜೊತೆ ಪ್ರಾದೇಶಿಕ ಭಾಷೆಯಲ್ಲೂ ನಡೆಸಬೇಕೆಂಬ ನಿಯಮವಿದೆ. ಅದರಂತೆ, 2025ರ ಸೆ.25ರಂದು ಗೂಡ್ಸ್ ಟ್ರೇನ್ ಮ್ಯಾನೇಜರ್ ಮುಂಬಡ್ತಿ ಹುದ್ದೆಗಳಿಗೆ ಹಾಗೂ 2025ರ ನ.5ರಂದು ಎಲ್‌ಡಿಸಿಇ ಮುಂಬಡ್ತಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದಾಗಿ ರೈಲ್ವೆ ತಿಳಿಸಿತ್ತು. ಇದರಿಂದ ಸಂತಸಗೊಂಡಿದ್ದ ಕನ್ನಡಿಗರು, ಕನ್ನಡ ಭಾಷೆಯಲ್ಲಿಯೇ ಓದಿ ಪರೀಕ್ಷೆಗೆ ಸಿದ್ಧರಾಗಿದ್ದರು. ಆದರೆ, ಪರೀಕ್ಷೆ ಕೇವಲ 4 ದಿನ ಉಳಿದಿರುವಾಗ, ಮಾ.12ರಂದು ಅಧಿಸೂಚನೆ ಹೊರಡಿಸಿದ್ದು, ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದಾಗಿ ತಿಳಿಸಿತ್ತು. ಇದರಿಂದ ಕನ್ನಡದಲ್ಲೇ ಪರೀಕ್ಷೆಗೆ ತಯಾರಾಗಿದ್ದವರು ಶಾಕ್‌ ಆಗಿದ್ದಾರೆ.

ಈ ಬಗ್ಗೆ ‘ರೈಲ್ವೆ ಬಡ್ತಿ ಪರೀಕ್ಷೇಲಿ ಮತ್ತೆ ಕನ್ನಡಿಗರಿಗೆ ದ್ರೋಹ’ ಎಂಬ ಶೀರ್ಷಿಕೆಯಡಿ ‘ಕನ್ನಡಪ್ರಭ’ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ರೈಲ್ವೆ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಬೆಂಗಳೂರು, ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿ ನಡೆಯುವ ರೈಲ್ವೆ ಮುಂಬಡ್ತಿ ಪರೀಕ್ಷಾ ಕೇಂದ್ರಗಳಿಗೆ ಬೆಳಗ್ಗೆ 9 ಗಂಟೆಗೆ ಮುತ್ತಿಗೆ ಹಾಕಲಾಗುವುದು. ಆಯಾ ಜಿಲ್ಲೆಗಳಲ್ಲಿ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಲಿದ್ದಾರೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.

ನೋಟಿಸ್‌ ಜಾರಿ:

ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕುವಂತೆ ಕಾರ್ಯಕರ್ತರಿಗೆ ನಾರಾಯಣಗೌಡ ಕರೆ ನೀಡಿದ ಕೆಲವೇ ನಿಮಿಷಗಳಲ್ಲಿ ಅವರಿಗೆ ಬೆಂಗಳೂರಿನ ಕಾಟನ್‌ಪೇಟೆ ಪೊಲೀಸರು ನೋಟಿಸ್‌ ನೀಡಿ, ಹೋರಾಟ ನಡೆಸದಂತೆ ತಾಕೀತು ಮಾಡಿದ್ದಾರೆ. ಇದರಿಂದ ಸಿಡಿದೆದ್ದ ನಾರಾಯಣಗೌಡ, ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ನನ್ನನ್ನು ಹಾಗೂ ಕಾರ್ಯಕರ್ತರನ್ನು ಬಂಧಿಸಿದರೂ ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕಿಯೇ ತೀರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಶನಿವಾರ ದೆಹಲಿಗೆ ನಿಯೋಗ ತೆಗೆದುಕೊಂಡು ಹೋಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಭೇಟಿಯಾಗಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವಕಾಶ ಕಲ್ಪಿಸಿದ್ದಾರೆ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಕುರಿತು ಕೇಂದ್ರ ಸಚಿವರ ಗಮನಕ್ಕೆ ತರಲಾಗುವುದು. ಅಲ್ಲಿಯೂ ಸ್ಪಂದನೆ ದೊರೆಯದಿದ್ದರೆ ಮುಂದೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪರೀಕ್ಷೆ ಬಹಿಷ್ಕಾರ ಕೈಬಿಟ್ಟು ಮನವಿ:

ಈ ಮಧ್ಯೆ, ರೈಲ್ವೆ ಇಲಾಖೆಯ ನಿರ್ಧಾರದಿಂದ ಆಕ್ರೋಶಗೊಂಡ ಪರೀಕ್ಷಾರ್ಥಿಗಳು ಪರೀಕ್ಷೆ ಬಹಿಷ್ಕರಿಸಲು ನಿರ್ಧರಿಸಿದ್ದರು. ಆದರೆ, ಹುಬ್ಬಳ್ಳಿಯಲ್ಲಿ ಸೋಮವಾರ ಸಭೆ ನಡೆಸಿದ ಪರೀಕ್ಷಾರ್ಥಿಗಳು, ಪರೀಕ್ಷೆ ಬಹಿಷ್ಕರಿಸುವುದು ಬೇಡ. ಪರೀಕ್ಷೆ ಮುಂದೂಡುವಂತೆ ನೈಋತ್ಯ ರೈಲ್ವೆಗೆ ಕನ್ನಡ ಸಂಘದ ಮೂಲಕ ಮನವಿ ಸಲ್ಲಿಸೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ

ರೈಲ್ವೆ ಬಡ್ತಿ ಪರೀಕ್ಷೆಗಳಿಂದ ಕೊನೆಕ್ಷಣದಲ್ಲಿ ಕನ್ನಡ ಕೈಬಿಟ್ಟಿರುವ ಕುರಿತು ಕನ್ನಡಪ್ರಭ ಮಾತ್ರ ಮಾ.15ರಂದು ವರದಿ ಪ್ರಕಟಿಸಿತ್ತು.