ಫೋಟೋ- 7ಎಂವೈಎಸ್14
----ಕನ್ನಡಪ್ರಭ ವಾರ್ತೆ ಮೈಸೂರು
ಡಿಜಿಟಲ್ ತಂತ್ರಜ್ಞಾನವು ಮಾನವೀಯ ಸ್ಪರ್ಶವನ್ನು ಎಂದಿಗೂ ಬದಲಾಯಿಸಲಾರದು. ಹೀಗಾಗಿ, ನರ್ಸ್ ಗಳಿಗೆ ನರ್ಸ್ ಗಳೇ ಸಾಟಿ ಎಂದು ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಪತಿ ಡಾ.ಎಚ್. ಬಸವನಗೌಡಪ್ಪ ತಿಳಿಸಿದರು.ನಗರದ ಜೆಎಸ್ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಜೆಎಸ್ಎಸ್ ನರ್ಸಿಂಗ್ ಕಾಲೇಜು ಶನಿವಾರ ಆಯೋಜಿಸಿದ್ದ ಸಾಕ್ಷ್ಯಾಧಾರದಿಂದ ಉನ್ನತಿಯತ್ತ ಕುರಿತು ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ನರ್ಸ್ ಗಳು ಪ್ರತಿಯೊಬ್ಬ ಮಾನವನಿಗೂ ಸೇವೆ ನೀಡುವಾಗ ಅತ್ಯಂತ ಸಮರ್ಪಣೆ ಮತ್ತು ಜಾಗ್ರತೆ ಅಗತ್ಯ. ಸಣ್ಣ ತಪ್ಪು ಕೂಡ ಆಗದಂತೆ ನೋಡಿಕೊಳ್ಳಬೇಕು. ಅದು ಸಾಧ್ಯವಾಗುವುದು ಜನರ ವೈದ್ಯಕೀಯ ದಾಖಲೆ, ಸಾಕ್ಷ್ಯಾಧಾರಿತ ಜ್ಞಾನವನ್ನು ಅರ್ಥಮಾಡಿಕೊಂಡಾಗ ಮಾತ್ರ. ತಪ್ಪು ಮಾಡಿದ ನಂತರ ಅದು ತಪ್ಪಾಗಿದೆ ಎಂಬ ಸಾಕ್ಷ್ಯ ದೊರೆಯುತ್ತದೆ. ಹೀಗಾಗಿ, ತಪ್ಪುಗಳನ್ನು ತಪ್ಪಿಸಲು ಮತ್ತು ಪರಿಣತಿ ಹೊಂದಿದ ಆರೋಗ್ಯ ಸೇವೆಯನ್ನು ನೀಡಲು ಸಾಕ್ಷ್ಯಾಧಾರ ಬಹಳ ಮುಖ್ಯ ಎಂದು ಅವರು ಹೇಳಿದರು.
ಈ ವಿಚಾರ ಸಂಕಿರಣವನ್ನು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಉದ್ಘಾಟಿಸಿದರು. ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್. ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಎ ಡಿಜಿಟಲ್ ಹೆಲ್ತ್ ಕೇರ್ ಟೆಕ್ನಾಲಜಿ ಸಲ್ಯೂಷನ್ ನಿರ್ದೇಶಕಿ ಡಾ. ಶಾರದಾ ರಮೇಶ್ ಮುಖ್ಯ ಭಾಷಣ ಮಾಡಿದರು. ಜೆಎಸ್ಎಸ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಡಾ. ಅಶ್ವದಿ, ಡಾ. ಭವ್ಯಾ ಮೊದಲಾದವರು ಇದ್ದರು.