ಸೇವಾ ಕಾರ್ಯಗಳಿಂದ ಜೆಎಸ್ಎಸ್‌ ದೇಶದಲ್ಲಿಯೇ ಅಗ್ರಗಣ್ಯ ಎನಿಸಿದೆ: ಬಾಸ್ಟಿಯನ್‌ ಜೋಸೆಫ್‌ ಅಭಿಪ್ರಾಯ

KannadaprabhaNewsNetwork | Published : Nov 30, 2024 12:45 AM

ಸಾರಾಂಶ

ಜೆಎಸ್ಎಸ್‌ ಸಂಸ್ಥೆಯು ಸಮಾಜಕ್ಕೆ ಮತ್ತು ಬಡವರಿಗೆ ನೀಡುತ್ತಿರುವ ಆರೋಗ್ಯ ಸೇವೆಯನ್ನು ಗಮನಿಸಿ, ಜೆಎಸ್ಎಸ್‌ ಆಸ್ಪತ್ರೆಗೆ ಡಯಾಲಿಸಿಸ್‌ಗೆ ಬರುವ ಬಡರೋಗಿಗಳಿಗೆ ಆರ್ಥಿಕವಾಗಿ ನೆರವಾಗಲು ನಮ್ಮ ಸಂಸ್ಥೆಯ ಸಿಎಸ್ಆರ್‌ ನಿಧಿಯಿಂದ 10 ಲಕ್ಷ ರು. ದೇಣಿಗೆ ನೀಡುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ತನ್ನ ಸೇವಾ ಕಾರ್ಯಗಳ ಮೂಲಕ ಜೆಎಸ್ಎಸ್‌ ಸಂಸ್ಥೆ ಇಡೀ ದೇಶದಲ್ಲಿಯೇ ಅಗ್ರಗಣ್ಯ ಎನಿಸಿದೆ ಎಂದು ಲೂನಾರ್‌ ಎಕ್ಸ್‌ ಪೋರ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಬಾಸ್ಟಿಯನ್‌ ಜೋಸೆಫ್‌ ಶ್ಲಾಘಿಸಿದರು.

ಜೆಎಸ್ಎಸ್‌ ಆಸ್ಪತ್ರೆಯಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಸಮ್ಮುಖದಲ್ಲಿ ಜೆಎಸ್ಎಸ್- ವಾಕ್‌ಮೇಟ್‌ ಡಯಾಲಿಸಿಸ್‌ ಚಿಕಿತ್ಸೆಗೆ ಸಹಾಯ ಕಾರ್ಯಕ್ರಮ ಒಡಂಬಡಿಕೆ ಸಮಯದಲ್ಲಿ ಅವರು ಮಾತನಾಡಿ, ಜೆಎಸ್ಎಸ್‌ ಸಂಸ್ಥೆಯು ಪೂಜ್ಯಶ್ರೀಗಳ ಪರಿಶ್ರಮ ಮತ್ತು ದೂರದೃಷ್ಟಿಯಿಂದ ದೇಶ- ವಿದೇಶಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಸಂಸ್ಥೆಗಳನ್ನು ಹೊಂದಿ, ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ನೀಡುತ್ತಿದೆ ಎಂದರು.

ಜೆಎಸ್ಎಸ್‌ ಸಂಸ್ಥೆಯು ಸಮಾಜಕ್ಕೆ ಮತ್ತು ಬಡವರಿಗೆ ನೀಡುತ್ತಿರುವ ಆರೋಗ್ಯ ಸೇವೆಯನ್ನು ಗಮನಿಸಿ, ಜೆಎಸ್ಎಸ್‌ ಆಸ್ಪತ್ರೆಗೆ ಡಯಾಲಿಸಿಸ್‌ಗೆ ಬರುವ ಬಡರೋಗಿಗಳಿಗೆ ಆರ್ಥಿಕವಾಗಿ ನೆರವಾಗಲು ನಮ್ಮ ಸಂಸ್ಥೆಯ ಸಿಎಸ್ಆರ್‌ ನಿಧಿಯಿಂದ 10 ಲಕ್ಷ ರು. ದೇಣಿಗೆ ನೀಡುತ್ತಿರುವುದಾಗಿ ಅವರು ಹೇಳಿದರು.

ನಮ್ಮ ತಂದೆಯವರು ವೈದ್ಯರಾಗಿದ್ದರು. ಗ್ರಾಮೀಣ ಜನತೆ ಮತ್ತು ರೈತರು ಹಾವು ಕಡಿತದ ಚಿಕಿತ್ಸೆಗೆ ಹಣವಿಲ್ಲದೆ ಕಷ್ಟ ಅನುಭವಿಸುತ್ದಿದ್ದುದನ್ನು ಕಂಡು ಉಚಿತ ಚಿಕಿತ್ಸೆ ಮತ್ತು ಔಷಧಿ ನೀಡುತ್ತಿದ್ದರು. ನನಗೂ ವೈದ್ಯನಾಗಬೇಕು ಎಂಬ ಆಸೆ ಇತ್ತು. ಆದರೆ ಸೀಟು ಸಿಗದ ಕಾರಣ ಎಂಜಿನಿಯರಿಂಗ್‌ ಶಿಕ್ಷಣ ಪಡೆದೆ ಎಂದು ಅವರು ಹೇಳಿದರು.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ರೋಗಿಗಳ ಅನುಕೂಲಕ್ಕಾಗಿ ಅನೇಕ ಸಂಘ, ಸಂಸ್ಥೆಗಳು, ದಾನಿಗಳು ಆಸ್ಪತ್ರೆಗೆ ದೇಣಿಗೆ ನೀಡುತ್ತಿದ್ದಾರೆ. ಈ ಹಿಂದೆ ಇನ್ಪೋಸಿಸ್‌ನ ಸುಧಾ ಮೂರ್ತಿ ಅವರು 10, ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ 5 ಲಕ್ಷ ರು. ದೇಣಿಗೆ ನೀಡಿದ್ದರು. ಈಗ ವಾಕ್‌ ಮೇಟ್‌ ತಯಾರಿಕೆಯ ಲೂನಾರ್‌ ಎಕ್ಸ್‌ ಪೋರ್ಟ್ಸ್‌ ಪ್ರವೈಟ್‌ ಲಿಮಿಟೆಡ್‌ 10 ಲಕ್ಷ ರು. ನೀಡುತ್ತಿರುವುದು ಸಂತೋಷದ ವಿಷಯ. ಇವರ ಸಮಾಜಮುಖಿ ಕಾರ್ಯ ಹೀಗೆ ಮುಂದುವರೆಯಲಿ ಎಂದು ಹಾರೈಸಿದರು.

ಜೆಎಸ್ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಪತಿ ಡಾ.ಎಚ್‌. ಬಸವನಗೌಡಪ್ಪ ಮಾತನಾಡಿದರು. ಜೆಎಸ್ಎಸ್‌ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರುಮಠ, ಕಾರ್ಯದರ್ಶಿ ಎಸ್‌.ಪಿ. ಮಂಜುನಾಥ್‌, ವೈದ್ಯಕೀಯ ಶಿಕ್ಷಣ ನಿರ್ದೇಶಕ ಆರ್‌. ಮಹೇಶ್‌, ವೈದ್ಯಕೀಯ ಅಧೀಕ್ಷಕ ಡಾ.ಸಿ.ಪಿ. ಮಧು, ವಾಕ್‌ ಮೇಟ್‌ ಸಂಸ್ಥೆಯ ಎಸ್‌.ಕೆ. ಸಂಜಯ್‌, ಈಪನ್‌, ಸಿ. ಕುಮಾರಸ್ವಾಮಿ, ಜೆಎಸ್ಎಸ್‌ ಆಸ್ಪತ್ರೆಯ ಡಾ.ಮಂಜುನಾಥ ಶೆಟ್ಟಿ, ಡಾ. ಅಮೃತ್‌ ರಾಜ್‌ಗೌಡ ಮೊದಲಾದವರು ಇದ್ದರು.

Share this article