- ಕೋರ್ಟ್ ಕಲಾಪ ಚಟುವಟಿಕೆಗಳ ವೀಕ್ಷಿಸಿದ ಮಕ್ಕಳು । ಬ್ಯಾಗ್‌ಗಳ ಪಡೆದು ಜೋಡಿಸಿಟ್ಟ ಜಡ್ಜ್- - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹೊನ್ನಾಳಿಯ ಜೆಎಂಎಫ್‌ಸಿ ನ್ಯಾಯಾಲಯ ಆವರಣದಲ್ಲಿ ಮಂಗಳವಾರ ಬೆಳಗ್ಗೆ ಮಕ್ಕಳ ಕಲರವ ಕಂಡುಬಂತು. ಶ್ರೀ ಚನ್ನಪ್ಪಸ್ವಾಮಿ ಜನ ಕಲ್ಯಾಣ ಟ್ರಸ್ಟ್, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಮತ್ತು ಮಾಸ್ಟರ್ಸ್ ಕ್ರಿಯೇಟಿವ್ ಲರ್ನಿಂಗ್ ಸಿಸ್ಟಮ್ಸ್ ಅಬಾಕಸ್ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರ ಶಿಬಿರಾರ್ಥಿಗಳು ಕೋರ್ಟ್ ಕಲಾಪ ವೀಕ್ಷಣೆಗೆ ಮತ್ತು ನ್ಯಾಯಾಧೀಶರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉತ್ಸುಕತೆಯಿಂದ ಆಗಮಿಸಿದ್ದರು.ಜೆಎಂಎಫ್‌ಸಿ ನ್ಯಾಯಾಯಲಯ ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್.ದೇವದಾಸ್ ಆತ್ಮೀಯವಾಗಿ ಮಕ್ಕಳನ್ನು ಸಿಹಿ ವಿತರಿಸುವ ಮೂಲಕ ಬರಮಾಡಿಕೊಂಡರು, ಮಕ್ಕಳ ಬ್ಯಾಗ್‌ಗಳನ್ನು ತಾವೇ ಮಕ್ಕಳಿಂದ ಪಡೆದು ಒಂದು ಕಡೆ ಜೋಡಿಸಿ, ಪರಿಚಯ ಮಾಡಿಕೊಂಡಿದ್ದು, ನ್ಯಾಯಾಧೀಶರಿಗೆ ಮಕ್ಕಳ ಬಗ್ಗೆ ಇರುವ ವಿಶೇಷ ಕಾಳಜಿಗೆ ಕನ್ನಡಿ ಹಿಡಿದಂತಿತ್ತು. ಮಕ್ಕಳು ಕೋರ್ಟ್ ಕಲಾಪವನ್ನು ನೋಡಲು ಅನುವು ಮಾಡಿಕೊಟ್ಟ ನ್ಯಾಯಾಧೀಶರು ನಂತರ ಮಕ್ಕಳ ಜೊತೆಗೆ ಸಂವಾದ ನಡೆಸಿದರು.
ನ್ಯಾಯಾಧೀಶರಾದ ಎಚ್. ದೇವದಾಸ್ ಮಾತನಾಡಿ, ನಾನೂ ಕನ್ನಡ ಮೀಡಿಯಂ ಮತ್ತು ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ಎಸ್.ಎಸ್.ಎಲ್.ಸಿ.ಯಲ್ಲಿ ಕೇವಲ 43% ಫಲಿತಾಂಶ ಬಂದರೂ ತಂದೆಯ ಆಸೆಯಂತೆ ಸತತ ಅಧ್ಯಯನದಿಂದ ಇಂದು ನ್ಯಾಯಾಧೀಶ ಹುದ್ದೆಯನ್ನು ಅಲಂಕರಿಸಿದ್ದೇನೆ ಎಂದರು.ಓದಿದ್ದನ್ನು ರಾತ್ರಿ ಮಲಗುವ ಮುನ್ನ ಮತ್ತು ಬೆಳಗ್ಗೆ ಮನನ ಮಾಡಿಕೊಳ್ಳಬೇಕು. ದಿನಕ್ಕೆ 4 ಪ್ರಶ್ನೆಗಳಿಗೆ ಉತ್ತರವನ್ನು ಮನನ ಮಾಡಿದರೂ ತಿಂಗಳಿಗೆ 120 ಆಗುತ್ತವೆ. ಈ ನಿಟ್ಟಿನಲ್ಲಿ ದೇಹಕ್ಕೆ ಕನಿಕರ ತೋರದೇ, ಅಭ್ಯಾಸದ ಕಡೆಗೆ ಮಾತ್ರವೇ ಗಮನಹರಿಸಬೇಕು. ಪ್ರತಿಯೊಬ್ಬರೂ ಸಮಾನ ಬುದ್ಧಿಶಕ್ತಿ ಹೊಂದಿದ್ದು, ಅದರ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಪ್ರತಿಯೊಂದು ಕೋರ್ಸ್‌ಗೆ ಅದರದ್ದೇ ಆದ ಮಹತ್ವವಿದೆ. ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳುತ್ತೀರೋ ಆ ಕೋರ್ಸ್‌ನಲ್ಲಿ ಅತ್ಯುತ್ತಮ ಅಂಕ ಗಳಿಕೆಯತ್ತ ಗಮನಹರಿಸಬೇಕು. ವಿದ್ಯಾರ್ಥಿಗಳು ಮತ್ತೊಬ್ಬರ ಜೊತೆಗೆ ತಮ್ಮನ್ನು ಹೋಲಿಕೆ ಮಾಡಿಕೊಳ್ಳದೇ, ನಿಮಗೆ ನೀವೇ ಪ್ರತಿಸ್ಪರ್ಧಿ ಎಂದು ಭಾವಿಸಿ, ಓದಿನ ಕಡೆಗೆ ಗಮನಕೊಡಬೇಕು. ಆಗ ಒಳ್ಳೆಯ ಅಂಕಗಳನ್ನು ಪಡೆಯಬಹುದು ಎಂದು ಹೇಳಿದರು.ಸಂವಾದ ಕಾರ್ಯಕ್ರಮದಲ್ಲಿ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೋರಿ ಯೋಗೀಶ್ ಕುಳಗಟ್ಟೆ, ಅಬಾಕಸ್ ಶಿಕ್ಷಕಿಯರಾದ ಅನಿತಾ ಕೋರಿ ಯೋಗೀಶ್, ಪದ್ಮಾವತಿ, ಮಕ್ಕಳ ಪೋಷಕರು, ಕೋರ್ಟ್ ಶಿರಸ್ತೇದಾರ್ ಹರೀಶ್, ಸಿಬ್ಬಂದಿ ವಿ. ಸಂತೋಷ್, ಉಮಾ ಮತ್ತಿತರರು ಉಪಸ್ಥಿತರಿದ್ದರು.
- - - ಕೋಟ್ಎಲ್ಲರ ಬದುಕಿನಲ್ಲಿಯೂ ಕಷ್ಟಗಳು ಬಂದೇ ಬರುತ್ತವೆ ಅವುಗಳನ್ನು ಮೆಟ್ಟಿ ನಿಂತು ಜೀವನದಲ್ಲಿ ಅಗತ್ಯ ಬದಲಾವಣೆಗಳೊಂದಿಗೆ ಸಮಾಜದಲ್ಲಿ ಜನ ತಲೆಯೆತ್ತಿ ನೋಡುವಂತೆ ಸಾಧಿಸಿ ತಂದೆ-ತಾಯಿಗೆ, ಶಾಲೆಗೆ ಕೀರ್ತಿ ತಂದು ಸಮಾಜಮುಖಿಯಾಗಿ ಬದುಕಬೇಕು
- ಎಚ್. ದೇವದಾಸ್, ನ್ಯಾಯಾಧೀಶ- - -
-30ಎಚ್.ಎಲ್ಐ1:ನ್ಯಾಯಾಲಯ ಕಲಾಪಗಳನ್ನು ವೀಕ್ಷಿಸಲು ಹಾಗೂ ಸಂವಾದ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳೊಂದಿಗೆ ನ್ಯಾಯಾಧೀಶರಾದ ದೇವದಾಸ್ ಹಾಗೂ ಇತರರು ಪಾಲ್ಗೊಂಡರು.