ನವಲಗುಂದ: ಗುಡಿಸಾಗರ ಗ್ರಾಮದ ಕೆರೆಯ ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡು ಗ್ರಾಮದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗ್ರಾಮಸ್ಥರನ್ನು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಭೇಟಿಯಾಗಿ ಆರೋಗ್ಯ ವಿಚಾರಿಸಿ,ಧೈರ್ಯ ತುಂಬಿದರು.
ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಅವರು, ಗ್ರಾಮದ ಕೆರೆಯನ್ನು ವೀಕ್ಷಣೆ ಮಾಡಿ ನಂತರ ಗ್ರಾಮದ ಸಾಧು ಸಿದ್ಧಶಿವಯೋಗಿಗಳ ಮಠದಲ್ಲಿ ಗ್ರಾಮಸ್ಥರನ್ನುದ್ಧೇಶಿಸಿ ಮಾತನಾಡಿದರು.ಗ್ರಾಮದಲ್ಲಿನ ಕೆರೆಯ ನೀರು ಕುಡಿದು ಅಸ್ವಸ್ಥರಾಗಿದ್ದು ಬೇಸರದ ಸಂಗತಿಯಾಗಿದ್ದು, ಕೆರೆ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವಲ್ಲಿ ಗ್ರಾಮಸ್ಥರ ಪಾತ್ರ ಬಹುಮುಖ್ಯವಾಗಿದೆ. ಎಲ್ಲರೂ ಕೆರೆಯ ಸುತ್ತ ಉತ್ತಮ ಪರಿಸರ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.
ಕೆರೆಯ ದಡದಲ್ಲಿ ಮರಗಳನ್ನು ನೆಟ್ಟು ಪೊಷಿಸಬೇಕು ಎಂದು ಗ್ರಾಮಸ್ಥರಿಗೆ ಸೂಚಿಸಿದ ಅವರು, ಹಲವಾರು ಗ್ರಾಮಗಳ ಕುಡಿಯುವ ನೀರಿನ ಕೆರೆಗೆ ಮಳೆಯಿಂದ ನೈಸರ್ಗಿಕವಾಗಿ ನೀರು ಹರಿದು ಬರುತ್ತದೆ ಈ ನೀರು ಕಲುಷಿತವಾಗಬಾರದೆಂದರೆ ರೈತರು ಸಾಧ್ಯವಾದಷ್ಟು ಸಾವಯವ ಗೊಬ್ಬರ ಹಾಗೂ ಕೀಟ ನಾಶಕ ಬಳಕೆಗೆ ಆದ್ಯತೆ ನೀಡಬೇಕು. ಇಲ್ಲವಾದಲ್ಲಿ ನೈಸರ್ಗಿಕವಾಗಿ ಹರಿದು ಬರುವ ನೀರಿನಲ್ಲಿ ವಿಷಕಾರಕ ರಾಸಾಯನಿಕಗಳು ಮಿಶ್ರಣವಾಗಿ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿವಳಿಕೆ ಹೇಳಿದರು.ಗ್ರಾಮದಲ್ಲಿ ಮೂರು ಶುದ್ಧೀಕರಣ ಘಟಕಗಳಿದ್ದರೂ ಅವುಗಳನ್ನು ಸುಸ್ಥಿತಿಯಲ್ಲಿಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದು, ಕೂಡಲೇ ಎಲ್ಲ ಶುದ್ಧೀಕರಣ ಘಟಕಗಳನ್ನು ದುರಸ್ಥಿಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚಿಸಿದರು.
ಗ್ರಾಮದಲ್ಲಿ ಆಸ್ಪತ್ರೆಗಾಗಿ ಸುಸಜ್ಜಿತ ಕಟ್ಟಡವಿದ್ದು ಅಲ್ಲಿಯೇ ಆರೋಗ್ಯ ಕೇಂದ್ರ ತೆರೆಯುಂತೆ ಗ್ರಾಮಸ್ಥರು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಗುಡಿಸಾಗರ ಗ್ರಾಪಂ ವ್ಯಾಪ್ತಿಯ ಕಡದಳ್ಳಿ ಗ್ರಾಮಸ್ಥರು ಕಡದಳ್ಳಿ ಗ್ರಾಮದಲ್ಲಿನ ಕೆರೆಯ ನೀರು ಕುಡಿಯಲು ಬಾರದಂತಾಗಿದ್ದು, ಗ್ರಾಮಸ್ಥರು ಇದೇ ನೀರನ್ನು ಕುಡಿಯುವುದರಿಂದ ಚರ್ಮರೋಗಗಳ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ನ್ಯಾಯಾಧೀಶರೆದುರು ದೂರಿದರು.
ಗ್ರಾಮದಲ್ಲಿನ ಅಂಗನವಾಡಿಗಳು ಹಾಗೂ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಅಂಗನವಾಡಿ ಮಕ್ಕಳ ಆರೋಗ್ಯ ವಿಚಾರಿಸಿ ಮಕ್ಕಳೊಂದಿಗೆ ಉಪಹಾರ ಸೇವಿಸಿ ಮಕ್ಕಳಿಗೆ ನೀಡುವ ಆಹಾರ ಹಾಗೂ ಕುಡಿಯುವ ನೀರಿನ ಗುಣಮಟ್ಟ ಕಾಪಾಡುವಂತೆ ಸೂಚಿಸಿದರು.ಇದಕ್ಕೂ ಮೊದಲು ನವಲಗುಂದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕಲುಷಿತ ನೀರು ಕುಡಿದು ಆಸ್ಪತ್ರೆಗೆ ದಾಖಲಾದ ರೊಗಿಗಳ ಆರೋಗ್ಯ ವಿಚಾರಿಸಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸ್ಥಳದಲ್ಲಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ.ಎನ್.ಬಿ.ಕರ್ಲವಾಡ ಅವರಿಗೆ ಸೂಚಿಸಿದರು.
ತಹಸೀಲ್ದಾರ್ ಸುಧೀರ ಸಾಹುಕಾರ, ತಾಪಂ ಇಒ ಭಾಗ್ಯಶ್ರೀ ಜಹಗೀರದಾರ, ಗ್ರಾಪಂ ಅಧ್ಯಕ್ಷೆ ರತ್ನವ್ವ ಗುಡಸಲಮನಿ, ಜಿಪಂ ನೀರು ಸರಬರಾಜು ಉಪವಿಭಾಗದ ಸಂಗಪ್ಪ ಲಂಗೋಟಿ, ಬಿ.ಎಸ್.ಪಾಟೀಲ ಪಿಡಿಒ ಎಸ್.ಎಂ. ಹೂಗಾರ ಸೇರಿದಂತೆ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು, ತಾಲೂಕು ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.ಆಶಾ ಕಾರ್ಯಕರ್ತೆ ಕಣ್ಣೀರು:
ಗುಡಿಸಾಗರ ಗ್ರಾಮದಲ್ಲಿ ಮೂರು ದಿನಗಳಿಂದ ಮನೆ ಮನೆ ಸರ್ವೇ ನಡೆಸಿದ್ದ ಆಶಾ ಕಾರ್ಯಕರ್ತೆಗೆ ಶುಕ್ರವಾರ ವಾಂತಿ-ಭೇದಿ ಕಾಣಿಸಿಕೊಂಡಿದೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಶಾ ಕಾರ್ಯಕರ್ತೆ ನ್ಯಾಯಾಧೀಶರೆದರು ಕಣ್ಣೀರು ಹಾಕಿದರು. ನ್ಯಾಯಾಧೀಶರು ಆಶಾ ಕಾರ್ಯಕರ್ತೆಯನ್ನು ಸಮಾಧಾನ ಪಡಿಸಿದರು.