ಕನ್ನಡಪ್ರಭ ವಾರ್ತೆ, ತುಮಕೂರುಶಾಲೆಗೆ ಕಾಂಪೌಂಡ್ ಗೆ ಒತ್ತಾಯಿಸಿ ಅಧಿಕಾರಿಗಳ ಗಮನಸೆಳೆದರೂ ಕೌಂಪೌಂಡ್ ನಿರ್ಮಿಸುವಲ್ಲಿ ತಾತ್ಸಾರ ಮನೋಭಾವ ತಳೆದ ಅಧಿಕಾರಿಗಳ ವಿರುದ್ದ ಬೇಸತ್ತು ಕಳೆದ ಆರು ತಿಂಗಳಿಂದಲೂ ಶಾಲೆಯಿಂದ ದೂರ ಉಳಿದಿದ್ದ 4ನೇ ತರಗತಿ ವಿದ್ಯಾರ್ಥಿನಿಯ ಮನವೊಲಿಸಿ ಮತ್ತೆ ಶಾಲೆಗೆ ಕರೆ ತರುವಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗು ಹಿರಿಯ ನ್ಯಾಯಾಧೀಶರಾದ ನೂರುನ್ನೀಸಾ ಯಶಸ್ವಿಯಾಗಿದ್ದಾರೆ. ತುಮಕೂರು ತಾಲೂಕು ಬೆಳಧರ ಸರ್ಕಾರಿ ಪ್ರಾಥಮಿಕ ಶಾಲೆಯ ಬಾಲಕಿ ಸೀಮ್ರಾ ಎಂಬಾಕೆಯನ್ನು ಮನವೊಲಿಸಿ ಮತ್ತೆ ಶಾಲೆಗೆ ಕರೆತರುವ ಕಾರ್ಯ ಯಶಸ್ವಿಯಾಗಿದ್ದಾರೆ. ತುಮಕೂರು ತಾಲೂಕಿನ ಬೆಳೆಧರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಅಧಿಕಾರಿಗಳೊಂದಿಗೆ ಸೋಮವಾರ ಭೇಟಿ ನೀಡಿದ ಹಿರಿಯ ನ್ಯಾಯಾಧೀಶರು, ವಿದ್ಯಾರ್ಥಿನಿ ಸೀಮ್ರಾ ಸನೋಬರ್ ಅವರ ಗೈರು ಹಾಜರಿಗೆ ಕಾರಣವನ್ನು ಕೇಳಿ, ತಕ್ಷಣ ಬಾಲಕಿ ಸೀಮ್ರಾ ಸನೋಬರ್ ಮನೆಗೆ ಭೇಟಿ ನೀಡಿದ ನ್ಯಾಯಾಧೀಶರ ಹಾಗೂ ಅಧಿಕಾರಿಗಳು ಬಾಲಕಿಯ ಸಮಸ್ಯೆಯನ್ನು ಆಲಿಸಿದರು. ಈ ಸಂದರ್ಭದಲ್ಲಿ ನಾಲ್ಕನೇ ತರಗತಿ ಓದುತ್ತಿರುವ ಬಾಲಕಿ ಸಿಮ್ರಾ ಸನೋಬರ್ ಅಧಿಕಾರಿಗಳ ಮುಂದೆ ಕೈಮುಗಿದು ನನ್ನ ಶಾಲೆಗೆ ಭದ್ರತೆ ಬೇಕು. ಓದಲು ಹೋಗುವ ನಮಗೆ ಶಾಲೆಯ ಆಟದ ಮೈದಾನದಲ್ಲಿ ವೇಗವಾಗಿ ಓಡಾಡುವ ಹಾಗೂ ಅಲ್ಲಿ ನಿಲ್ಲಿಸುವ ವಾಹನಗಳಿಂದ ಕಿರಿಕಿರಿ ಆಗುತ್ತಿದೆ. ಹಾಗಾಗಿ ಮುಖ್ಯವಾಗಿ ಆಟದ ಮೈದಾನಕ್ಕೆ ಕಾಂಪೌಂಡ್ ಅವಶ್ಯಕತೆಯಿದೆ ತಕ್ಷಣವೇ ನಮಗೆ ಅನುಕೂಲ ಮಾಡಿಕೊಡಿ ಎಂದು ಮನವಿ ಮಾಡಿದ ಬೆನ್ನಲ್ಲೆ ನ್ಯಾಯಾಧೀಶರು ಹಾಗೂ ಅಧಿಕಾರಿಗಳು ಸ್ಪಂದಿಸಿದ ಪರಿಣಾಮ ಶಾಲೆಯ ಸಮವಸ್ತ್ರ ಧರಿಸಿ ಮತ್ತೆ ಶಾಲೆಯತ್ತ ಮುಖಮಾಡಿದ ಪ್ರಸಂಗ ಜರುಗಿತು.ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ನೂರುನ್ನೀಸಾ ಸಿಹಿ ತಿನ್ನಿಸಿ ಅವರೇ ಖುದ್ದು ಮಗುವನ್ನು ಶಾಲೆಗೆ ಮನೆಯಿಂದ ಕರೆದುಕೊಂಡು ಹೋಗಿ ಕುಳ್ಳಿರಿಸಿದರು. ನಂತರ ಮಾತನಾಡಿದ ನ್ಯಾಯಾಧೀಶರು , ಶಾಲೆಗೆ ಮತ್ತು ಮಕ್ಕಳಿಗೆ ತೊಂದರೆ ಆಗಬಾರದು ಎನ್ನುವ ಹಿತದೃಷ್ಟಿಯಿಂದ ಶಾಲೆಯಲ್ಲಿ ಸಮಸ್ಯೆ ಹಾಗೂ ಬಾಲಕಿ ನೀಡಿದ ಮನವಿಗೆ ಸ್ಪಂದಿಸಿ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಗಮನಕ್ಕೆ ತಂದಿದ್ದೇವೆ. ಅದರ ನಿಮಿತ್ತ ಜಿಲ್ಲಾ ಪಂಚಾಯಿತಿಗೆ ಸ್ಪಷ್ಟ ಆದೇಶ ಬಂದಿರುತ್ತದೆ. ಶೀಘ್ರದಲ್ಲಿಯೇ ಈ ಶಾಲೆಗೆ ಕಾಂಪೌಂಡ್ ನಿರ್ಮಿಸುವ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.