ಕನ್ನಡೇತರ ನಾಮಫಲಕ ತೆರವಿಗೆ ಕರವೇ ಜು.25ರ ಗಡುವು

KannadaprabhaNewsNetwork | Updated : Jul 12 2024, 01:33 AM IST

ಸಾರಾಂಶ

ಕನ್ನಡೇತರ ನಾಮ ಫಲಕಗಳನ್ನು ತೆರವುಗೊಳಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಗಡುವು ನೀಡಿ ಗುರುವಾರ ಪ್ರತಿಭಟನೆ ನಡೆಸಿದರು. ಕುಶಾಲನಗರ ಪಟ್ಟಣದ ಗಣಪತಿ ದೇವಾಲಯ ಬಳಿ ಸೇರಿದ ವೇದಿಕೆಯ ಪ್ರಮುಖರು ಮತ್ತು ಕಾರ್ಯಕರ್ತರು ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಒತ್ತು ನೀಡುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕನ್ನಡೇತರ ನಾಮ ಫಲಕಗಳನ್ನು ತೆರವುಗೊಳಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಗಡುವು ನೀಡಿ ಗುರುವಾರ ಪ್ರತಿಭಟನೆ ನಡೆಸಿದರು.

ಕುಶಾಲನಗರ ಪಟ್ಟಣದ ಗಣಪತಿ ದೇವಾಲಯ ಬಳಿ ಸೇರಿದ ವೇದಿಕೆಯ ಪ್ರಮುಖರು ಮತ್ತು ಕಾರ್ಯಕರ್ತರು ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಒತ್ತು ನೀಡುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸಂಸ್ಥೆಗಳು ಸೇರಿದಂತೆ ರಾಜ್ಯದಲ್ಲಿರುವ ವಿವಿಧ ವಾಣಿಜ್ಯ ಹಾಗೂ ಇತರೆ ಕಚೇರಿಗಳ ನಾಮಫಲಕಗಳ ಮೇಲ್ಭಾಗದಲ್ಲಿ ಶೇ.60 ಭಾಗವನ್ನು ಕನ್ನಡಕ್ಕೆ ಮೀಸಲಿಡಬೇಕು. ಈ ಬಗ್ಗೆ ರಾಜ್ಯ ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಸಹ ಬಹುತೇಕ ವಾಣಿಜ್ಯ ಹಾಗೂ ಸರ್ಕಾರಿ ಕಚೇರಿಗಳ ನಾಮಪಲಕಗಳು ಕನ್ನಡ ಭಾಷೆಯನ್ನು ನಿರ್ಲಕ್ಷ ಮಾಡುತ್ತಿರುವುದು ಕಂಡು ಬಂದಿದೆ. ಈ ನಿಟ್ಟಿನಲ್ಲಿ ತಕ್ಷಣ ಅಗತ್ಯ ಬದಲಾವಣೆಗೆ ಗಡುವು ನೀಡುವುದಾಗಿ ಎಚ್ಚರಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೆ ಎನ್ ದೀಪಕ್ ಮತ್ತು ಕುಶಾಲನಗರ ತಾಲೂಕು ಅಧ್ಯಕ್ಷ ಬಿ ಡಿ ಅಣ್ಣಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಮೆರವಣಿಗೆ ಮೂಲಕ ಕುಶಾಲನಗರ ಪುರಸಭೆ ಕಚೇರಿ ಬಳಿ ತೆರಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜು.25ರೊಳಗೆ ಪಟ್ಟಣದಲ್ಲಿರುವ ವಾಣಿಜ್ಯ ಹಾಗೂ ಸರ್ಕಾರಿ ಕಚೇರಿಗಳ ಕನ್ನಡೇತರ ನಾಮ ಫಲಕಗಳನ್ನು ತೆರವುಗೊಳಿಸದೆ ಇದ್ದಲ್ಲಿ ಪುರಸಭೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿ ದೀಪ ಪೂಜಾರಿ, ಸತೀಶ್ ಕುಮಾರ್, ತಾಲೂಕು ಉಪಾಧ್ಯಕ್ಷರಾದ ಕೆ ಎಸ್ ನಾಸೀರ್, ಕೆ ಚಂದ್ರು, ಎಸ್ ಎಸ್ ಫಯಜುದ್ದೀನ್ ಪ್ರಧಾನ ಕಾರ್ಯದರ್ಶಿ ಎಂ ಪಿ ನವೀನ್ ಗೌರವಾಧ್ಯಕ್ಷ ವಿ ಎಸ್ ರಾಜಶೇಖರ ಗೌಡ, ರೂಪ ಗಣೇಶ್ ಮತ್ತಿತರರು ಇದ್ದರು.

Share this article