ಈಜೀಪುರ ಮೇಲ್ಸೇತುವೆ ಕಾಮಗಾರಿಗೆ ಜುಲೈ ಗಡುವು

KannadaprabhaNewsNetwork |  
Published : Feb 21, 2026, 04:00 AM ISTUpdated : Feb 21, 2026, 07:42 AM IST
Flyover

ಸಾರಾಂಶ

ಹಲವು ವರ್ಷಗಳಿಂದ ನಡೆಯುತ್ತಿರುವ ಈಜೀಪುರ ಮೇಲ್ಸೇತುವೆ ಕಾಮಗಾರಿಯನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರು ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.

 ಬೆಂಗಳೂರು :  ಹಲವು ವರ್ಷಗಳಿಂದ ನಡೆಯುತ್ತಿರುವ ಈಜೀಪುರ ಮೇಲ್ಸೇತುವೆ ಕಾಮಗಾರಿಯನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರು ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.

ಶುಕ್ರವಾರ ಜಿಬಿಎ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ ಅವರು, ಈಜೀಪುರ ಮೇಲ್ಸೇತುವೆ ಕಾಮಗಾರಿಗೆ ಹೆಚ್ಚಿನ ಯಂತ್ರೋಪಕರಣಗಳು ಹಾಗೂ ಸಿಬ್ಬಂದಿ ಬಳಸಿ ಎಲ್ಲಾ ಕಾರ್ಯಚಟುವಟಿಕೆಗಳನ್ನು ಏಕಕಾಲದಲ್ಲಿ ನಡೆಸಬೇಕು. ಕಾಮಗಾರಿಯನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ನಿರ್ದೇಶನ ನೀಡಿದರು. ಈಜೀಪುರ ಮೇಲ್ಸೇತುವೆಗೆ ಸೇಂಟ್ ಜಾನ್ಸ್ ಬಳಿ ಪಿಲ್ಲರ್ ಅಳವಡಿಸಲು ಇದ್ದ ತೊಡಕನ್ನು ಬಗೆಹರಿಸಿ ಪೈಲಿಂಗ್ ಕೆಲಸ ಪ್ರಾರಂಭವಾಗಿದ್ದು, 15 ದಿನಗಳೊಳಗೆ ಪೈಲಿಂಗ್‌ ಕಾರ್ಯ ಪೂರ್ಣಗೊಳಿಸಬೇಕು. ಇದರೊಂದಿಗೆ ಪೈಲ್ ಕ್ಯಾಪ್ ಹಾಗೂ ಪಿಲ್ಲರ್‌ಗಳ ನಿರ್ಮಾಣ ಮತ್ತು ಸೂಪರ್ ಸ್ಟ್ರಕ್ಚರ್ ಸೆಗ್ಮೆಂಟ್ ಕಾಸ್ಟಿಂಗ್ ಕೆಲಸಗಳನ್ನು ಸಮಾನಾಂತರವಾಗಿ ಕೈಗೊಂಡು, ತ್ವರಿತಗತಿಯಲ್ಲಿ ಕಾಸ್ಟಿಂಗ್ ಕಾರ್ಯ ಮುಗಿಸಬೇಕು ಎಂದು ಸೂಚಿಸಿದರು.

ಮಡಿವಾಳ ಕಡೆಯ ಡೌನ್ ರ‍್ಯಾಂಪ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಜೊತೆಗೆ ಕೇಂದ್ರೀಯ ಸದನ ಹಾಗೂ ಆಸ್ಟ್ರೋ ಫಿಜಿಕ್ಸ್ ಜಾಗವನ್ನು ವಶಪಡಿಸಿಕೊಂಡು ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿ, ಈಜೀಪುರ ಸಿಗ್ನಲ್ ಹತ್ತಿರ ರ‍್ಯಾಂಪ್ ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಅವರು ಸೂಚಿಸಿದರು.

ವೈಟ್‌ ಟಾಪಿಂಗ್‌ ಕಾಮಗಾರಿ:

ಸರ್ಜಾಪುರ ಮತ್ತು ಕೋರಮಂಗಲ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಕೋರಮಂಗಲ ರಸ್ತೆಯ ಪಾದಚಾರಿ ಮಾರ್ಗಗಳಲ್ಲಿ ಪೇವರ್ ಬ್ಲಾಕ್ ಬದಲಾಗಿ ಬ್ರಶ್ಡ್ ಕಾಂಕ್ರೀಟ್ ಅಥವಾ ಸ್ಟಾಂಪ್ಡ್ ಕಾಂಕ್ರೀಟ್ ಅಳವಡಿಸಬೇಕು. ಸುಲ್ತಾನ್ ಪೇಟೆ ರಸ್ತೆಯಲ್ಲಿ 1.15 ಕಿ.ಮೀ ಉದ್ದದ ವೈಟ್ ಟಾಪಿಂಗ್ ಕಾಮಗಾರಿ ಮಾರ್ಚ್‌ 15ರಿಂದ ನಡೆಯಲಿದ್ದು, ಅದಕ್ಕೂ ಮುನ್ನಾ ಜಲಮಂಡಳಿಯ ಪೈಪ್‌ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಲು ನಿರ್ದೇಶಿಸಿದರು.

ಗುಣಮಟ್ಟ ಕಾಯ್ದುಕೊಳ್ಳಲು ಸೂಚನೆ

ಪಾಮ್‌ ಗ್ರೋವ್‌ ರಸ್ತೆಯಲ್ಲಿ 700 ಮೀಟರ್‌ ರಸ್ತೆ ಪೈಕಿ ಒಂದು ಭಾಗದ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೊಂದು ಭಾಗದಲ್ಲಿ 300 ಮೀಟರ್ ಕಾಮಗಾರಿ ಬಾಕಿಯಿದೆ. ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಸಿರ್ಸಿ ರಸ್ತೆಯಲ್ಲಿ 540 ಮೀಟರ್ ವೈಟ್ ಟಾಪಿಂಗ್ ಕಾಮಗಾರಿಯಲ್ಲಿ 240 ಮೀಟರ್ ಪೂರ್ಣಗೊಂಡಿದ್ದು, ಬಾಕಿ ಇರುವ 300 ಮೀಟರ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿ, ಕಾಮಗಾರಿಯಲ್ಲಿ ಗುಣಮಟ್ಟ ಪರಿಶೀಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಪಾಲಿಕೆ ಆಯುಕ್ತರಾದ ಕೆ.ಎನ್‌. ರಮೇಶ್, ಮುಖ್ಯ ಅಭಿಯಂತರರಾದ ರವಿ, ಡಾ. ರಾಘವೇಂದ್ರ ಪ್ರಸಾದ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮಹಿಳಾ ಮೀಸಲಿಂದ ರಾಜಕೀಯ ಚಿತ್ರಣವೇ ಬದಲು : ಕುಮಾರಸ್ವಾಮಿ
ಬೀದಿಗಳಲ್ಲಿ ಇಲಿಗಳ ಕಾಟ : ಆರೋಗ್ಯ ಸಮಸ್ಯೆ ಭೀತಿ