4,200 ಕ್ವಿಂಟಲ್ ಕೊಬ್ಬರಿ ಖರೀದಿ ।
ಕನ್ನಡಪ್ರಭ ವಾರ್ತೆ, ಬೀರೂರುಪಟ್ಟಣದ ಎಪಿಎಂಸಿ ಆವರಣದಲ್ಲಿ ಮಾರ್ಚ್ ತಿಂಗಳಲ್ಲಿ ಆರಂಭಿಸಲಾಗಿರುವ ನೋಂದಣಿ ಕೇಂದ್ರದಲ್ಲಿ ರಾಷ್ಟ್ರೀಯ ಕೃಷಿ ಮಾರಾಟ ಸಹಕಾರ ಮಹಾಮಂಡಳದಿಂದ ನಡೆಯುತ್ತಿರುವ ಕೊಬ್ಬರಿ ಖರೀದಿಗೆ ಇನ್ನಷ್ಟು ಸಿಬ್ಬಂದಿ ನಿಯೋಜಿಸಿ ಬೇಗನೆ ಖರೀದಿ ಪ್ರಕ್ರಿಯೆ ಮುಗಿಸುವಂತೆ ಹಲವು ರೈತರು ಆಗ್ರಹಿಸಿದ್ದಾರೆ.
ಗ್ರಾಮೀಣ ಪ್ರದೇಶಗಳ ನೋಂದಾಯಿಸಿಕೊಂಡ ರೈತರು ಪ್ರತಿದಿನ ಬೆಳಿಗ್ಗೆ ಎಪಿಎಂಸಿ ಆವರಣಕ್ಕೆ ಟೆಂಪೊ, ಟ್ರ್ಯಾಕ್ಟರ್ ಮೊದಲಾದ ವಾಹನಗಳಲ್ಲಿ ಕೊಬ್ಬರಿಯೊಂದಿಗೆ ಬಂದರೂ ಅವರ ಸರತಿ ಬರುವ ವೇಳೆಗೆ ಸಂಜೆಯಾಗುತ್ತಿದೆ. ವಾಪಸಾಗುವ ವೇಳೆಗೆ ಕತ್ತಲಾಗುತ್ತಿದೆ. ಅಲ್ಲದೆ ಮಳೆ ಸುರಿದರೆ ವಾಪಸ್ ಹೋಗುವುದು ಕಷ್ಟವಾಗುತ್ತದೆ. ಖರೀದಿಗೆ ಇನ್ನಷ್ಟು ಸಿಬ್ಬಂದಿ ನಿಯೋಜಿಸಿ ಬೇಗನೆ ಖರೀದಿ ಪ್ರಕ್ರಿಯೆ ಮುಗಿಸಿದರೆ ಉತ್ತಮ ಎಂದು ಹೇಳುತ್ತಿದ್ದಾರೆ.ಅಲ್ಲದೆ ಕೊಬ್ಬರಿ ಖರೀದಿ ಹಣ ತಮಗೆ ತಲುಪಲು ಸುಮಾರು ಒಂದು ತಿಂಗಳು ಬೆಕಾಗಿದ್ದು, ಈ ಹಣವನ್ನು ಶೀಘ್ರ ಪಾವತಿಸುವಂತೆಯೂ ರೈತರು ಕೇಳುತ್ತಿದ್ದಾರೆ. ಜತೆಗೆ ಮಳೆಗಾಲ ಆರಂಭವಾಗುತ್ತಿರುವುದರಿಂದ ಹೆಚ್ಚಿನ ಕೊಬ್ಬರಿ ದಾಸ್ತಾನು ಇರಿಸಿಕೊಳ್ಳುವುದು ತೊಂದರೆ ಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶೀಘ್ರ ಖರೀದಿಗೆ ಕ್ರಮ ವಹಿಸುವಂತೆ ಮನವಿ ಮಾಡಿದ್ದಾರೆ.
ಬೀರೂರು ಕೇಂದ್ರದಲ್ಲಿ ಕಡೂರು ತಾಲೂಕಿನ ವಿ.ಯರದಕೆರೆ, ಯಗಟಿ, ಬೀರೂರು, ಮಲ್ಲಿದೇವಿಹಳ್ಳಿ, ಚಟ್ಟನಹಳ್ಳಿ, ಹಿರೇ ನಲ್ಲೂರು ಮೊದಲಾದೆಡೆಯ 762 ರೈತರು ಕೊಬ್ಬರಿ ಮಾರಾಟಕ್ಕೆ ನೋಂದಾಯಿಸಿಕೊಂಡಿದ್ದರು. ಇವರಿಂದ ತಲಾ 15 ಕ್ವಿಂಟಲ್ ನಂತೆ 9,502 ಕ್ವಿಂಟಲ್ ಉಂಡೆ ಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ನಿರ್ಧರಿಸಲಾಗಿತ್ತು.ರೈತರು ಬಂದು ಕಾಯುವಂತಾಗ ಬಾರದು ಎಂಬ ಉದ್ದೇಶದಿಂದ ನಿತ್ಯ 25 ಅಥವಾ 30 ರೈತರಿಗೆ ಅವಕಾಶ ನೀಡಲಾಗುತ್ತಿದೆ. ಜೂನ್ 14ರ ವರೆಗೆ ಕೊಬ್ಬರಿ ಖರೀದಿಗೆ ಅವಕಾಶ ನೀಡಲಾಗಿದೆ. ಈ ಹಿಂದೆ ನೋಂದಾಯಿಸಿಕೊಂಡಿದ್ದ ರೈತರಿಗೆ ಇಂತಹ ದಿನಾಂಕದಂದು ಕೊಬ್ಬರಿ ತರುವಂತೆ ಸೂಚಿಸಲಾಗಿದೆ. ಈವರೆಗೆ 355 ರೈತರಿಂದ 4200 ಕ್ವಿಂಟಲ್ ಕೊಬ್ಬರಿ ಖರೀದಿಸಲಾಗಿದೆ. ಇಲ್ಲಿ ರೈತರಿಂದ ಖರೀದಿಸಿದ ಕೊಬ್ಬರಿಯನ್ನು ಮಂಡಳದ ಗೋಣಿಚೀಲಗಳಲ್ಲಿ ತುಂಬಿ ಕಡೂರು ಮತ್ತು ಮಾಚೇನಹಳ್ಳಿಗಳಲ್ಲಿ ಸಂಗ್ರಹಿಸಲಾಗುತ್ತಿದ್ದು ನಾಫೆಡ್ ಟೆಂಡರ್ ಮೂಲಕ ವಿಲೇವಾರಿ ನಡೆಯಲಿದೆ. ಮಳೆ, ಸರ್ಕಾರಿ ರಜೆ ಇದ್ದಾಗ ಮಾತ್ರ ಖರೀದಿಗೆ ಅಡಚಣೆ ಯಾಗುತ್ತದೆ ಎಂದು ನಾಫೆಡ್ ಅಧಿಕಾರಿ ಬಾಗಪ್ಪ ಕಟ್ಟೀಮನಿ ಮಾಹಿತಿ ನೀಡಿದ್ದಾರೆ.ಶೀಘ್ರ ಪಾವತಿಗೆ ಒತ್ತಾಯ‘ಹಣ ಪಾವತಿಗೆ 1 ತಿಂಗಳು ತಗಲುತ್ತದೆ. ಮುಂಗಾರು ಸಮಯವಾಗಿರುವುದರಿಂದ ಆದಷ್ಟು ಬೇಗನೆ ಹಣ ಪಾವತಿಸಿದರೆ ಅನುಕೂಲ ಎನ್ನುವುದು ರೈತರ ಒತ್ತಾಯ. ಇದಕ್ಕೆ ಪ್ರತಿಕ್ರಿಯಿಸಿದ ನಾಫೆಡ್ ಅಧಿಕಾರಿ, ‘ಕಡೂರು, ಬೀರೂರು, ಪಂಚನಹಳ್ಳಿ, ತರೀಕೆರೆ ಮತ್ತು ಚಿಕ್ಕಮಗಳೂರಿನಲ್ಲಿ ಖರೀದಿ ನಡೆದಿದ್ದು, ಖರೀದಿ ಸಮಯದಲ್ಲಿ ಗುಣಮಟ್ಟದ ಮೇಲೆ ಕೊಬ್ಬರಿಯನ್ನು ಆರಿಸಿ ವಿಂಗಡಿಸುವ ವೇಳೆಗೆ ಸಮಯ ತಗಲುತ್ತದೆ. ಹೀಗಾಗಿ ಈಗ ನಡೆದಿರುವ ಪ್ರಕ್ರಿಯೆಯೇ ಸುಗಮವಾಗಿದೆ. ಹಣ ಬಿಡುಗಡೆ ಸರ್ಕಾರದ ಮಟ್ಟದ್ದಾಗಿದ್ದು ಎಲ್ಲ ಪ್ರಕ್ರಿಯೆ ಮುಗಿದ ನಂತರ ಹಣ ಪಾವತಿ ಆಗುತ್ತದೆ’ ಎಂದರು.15 ಬೀರೂರು1
ಬೀರೂರುಎಪಿಎಂಸಿ ಆವರಣದ ಕೊಬ್ಬರಿ ಖರೀದಿ ಕೇಂದ್ರದ ಎದುರು ಸರತಿ ಸಾಲಿನಲ್ಲಿ ನಿಂತಿದ್ದ ವಾಹನಗಳು