ಆಸ್ತಿ ತೆರಿಗೆ ಬಾಕಿ ಒಟಿಎಸ್‌ಗೆ ಜು.31 ಕಡೇ ದಿನ

KannadaprabhaNewsNetwork |  
Published : Jun 12, 2024, 01:45 AM IST
ಬಿಬಿಎಂಪಿ  | Kannada Prabha

ಸಾರಾಂಶ

ಹಲವು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬಿಬಿಎಂಪಿ ನೀಡಿರುವ ಒನ್‌ ಟೈಮ್‌ ಸೆಟಲ್‌ಮೆಂಟ್‌ (ಒಟಿಎಸ್‌)ನ ಅಂತಿಮ ದಿನಾಂಕವನ್ನು ಜೂನ್‌ 30 ರಿಂದ ಜು.31ಕ್ಕೆ ಮುಂದೂಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಲವು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬಿಬಿಎಂಪಿ ನೀಡಿರುವ ಒನ್‌ ಟೈಮ್‌ ಸೆಟಲ್‌ಮೆಂಟ್‌ (ಒಟಿಎಸ್‌)ನ ಅಂತಿಮ ದಿನಾಂಕವನ್ನು ಜೂನ್‌ 30 ರಿಂದ ಜು.31ಕ್ಕೆ ಮುಂದೂಡಲಾಗಿದೆ. ತೆರಿಗೆ ಬಾಕಿದಾರರು ನಿಗದಿತ ಅವಧಿಯಲ್ಲಿ ಬಾಕಿ ತೆರಿಗೆ ಪಾವತಿಸಿ ಶೇ.50ರಷ್ಟು ದಂಡ ಹಾಗೂ ಶೇ.100 ರಷ್ಟು ಬಡ್ಡಿ ಮನ್ನಾ ಅವಕಾಶ ಪಡೆಯಬಹುದಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ 4 ಲಕ್ಷ ಆಸ್ತಿಗಳು ಹಲವು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಅವುಗಳಿಂದ 1 ಸಾವಿರ ಕೋಟಿ ರು. ತೆರಿಗೆ ಬಾಕಿ, ದಂಡ ಹಾಗೂ ಬಡ್ಡಿ ವಸೂಲಿ ಮಾಡಬೇಕಿದೆ. ಅಂತಹ ಆಸ್ತಿ ಮಾಲೀಕರಿಗೆ ಒಟಿಎಸ್‌ ಅಡಿಯಲ್ಲಿ ಒಮ್ಮೆಲೇ ತೆರಿಗೆ ಬಾಕಿ ಪಾವತಿಸಿದರೆ ಶೇ. 50ರಷ್ಟು ದಂಡ ಹಾಗೂ ಶೇ.100ರಷ್ಟು ಬಡ್ಡಿಯನ್ನು ಮನ್ನಾ ಮಾಡುವ ಅವಕಾಶ ನೀಡಲಾಗಿತ್ತು. ಆದರೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇವಲ 50 ಸಾವಿರ ಆಸ್ತಿ ಮಾಲೀಕರು ತೆರಿಗೆ ಬಾಕಿ ಪಾವತಿಸಿ ದಂಡ ಮತ್ತು ಬಡ್ಡಿ ಮನ್ನಾದ ಪ್ರಯೋಜನ ಪಡೆದಿದ್ದಾರೆ. ಉಳಿದ ಆಸ್ತಿ ಮಾಲೀಕರಿಗೆ ಕೊನೇ ಅವಕಾಶ ನೀಡುವ ಸಲುವಾಗಿ ಬಾಕಿ ತೆರಿಗೆ ಪಾವತಿಸುವ ಅಂತಿಮ ದಿನವನ್ನ ಜೂನ್‌ 30ರಿಂದ ಜು. 31ಕ್ಕೆ ವಿಸ್ತರಿಸಲಾಗಿದೆ. ತೆರಿಗೆ ಬಾಕಿದಾರರಿಗೆ ಇದು ಕೊನೆಯ ಅವಕಾಶವಾಗಿದ್ದು, ಜು.31ರ ನಂತರ ದಂಡ ಹಾಗೂ ಬಡ್ಡಿಯಲ್ಲಿ ಯಾವುದೇ ವಿನಾಯಿತಿ ನೀಡದೆ ವಸೂಲಿ ಮಾಡಲಾಗುವುದು ಎಂದು ಹೇಳಿದರು.

ಎಲ್ಲ ಆಸ್ತಿಗಳ ದಾಖಲೆಯನ್ನು ಸಮರ್ಪಕವಾಗಿಡುವ ಸಲುವಾಗಿ ತೆರಿಗೆ ವ್ಯಾಪ್ತಿಯಲ್ಲಿನ ಎಲ್ಲ 20 ಲಕ್ಷ ಆಸ್ತಿಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಈವರೆಗೆ 8 ಲಕ್ಷ ಆಸ್ತಿಗಳ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, ಮುಂದಿನ ಮೂರು ತಿಂಗಳಲ್ಲಿ ಉಳಿದ ಆಸ್ತಿಗಳ ದಾಖಲೆಗಳನ್ನು ಡಿಜಟಲೀಕರಣ ಮಾಡಲಾಗುತ್ತದೆ ಎಂದರು.ತೆರಿಗೆ ಪಾವತಿಸಿದ ಆಸ್ತಿಗಳಿಗೆ ಖಾತೆಬಿಬಿಎಂಪಿ ವ್ಯಾಪ್ತಿಯಲ್ಲಿ ಸದ್ಯ 20 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಯಲ್ಲಿವೆ. ಇನ್ನೂ ಲಕ್ಷಾಂತರ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ತರಬೇಕಿತ್ತು, ಆ ಕಾರ್ಯ ಮಾಡಲಾಗುತ್ತಿದೆ. ಅಲ್ಲದೆ, ಖಾತಾ ಇಲ್ಲದ ಆಸ್ತಿಗಳು ತೆರಿಗೆ ಪಾವತಿಸಿ 90 ದಿನಗಳೊಳಗೆ ಸೂಕ್ತ ದಾಖಲೆಗಳನ್ನು ನೀಡಿದೆ ‘ಎ’ ಅಥವಾ ‘ಬಿ’ ಖಾತೆ ನೀಡಲು ನಿರ್ಧರಿಸಲಾಗಿದೆ. ಅಲ್ಲದೆ, ಪ್ರಸಕ್ತ ವರ್ಷದಲ್ಲಿ 5,200 ಕೋಟಿ ರು. ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದ್ದು, ಈವರೆಗೆ 1,300 ಕೋಟಿ ರು. ತೆರಿಗೆ ಸಂಗ್ರಹಿಸಲಾಗಿದೆ. ಇನ್ನೂ 3,900 ಕೋಟಿ ರು. ತೆರಿಗೆ ಸಂಗ್ರಹ ಮಾಡಬೇಕಿದ್ದು, ತೆರಿಗೆ ವ್ಯಾಪ್ತಿಯಲ್ಲಿನ ಆಸ್ತಿಗಳಿಂದ ತೆರಿಗೆ ವಸೂಲಿ, ಒಟಿಎಸ್‌ ಮೂಲಕ ಬಾಕಿ ತೆರಿಗೆ ವಸೂಲಿಯಂತಹ ಕ್ರಮಗಳಿಂದ ಗುರಿ ಮುಟ್ಟಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕಗಳಲ್ಲಿ ಬೆಂಗಳೂರು ನಗರಕ್ಕೆ ಬರೋಬ್ಬರಿ ₹38 ಕೋಟಿ ಡ್ರಗ್ಸ್‌ ಸಾಗಾಟ
ಸರ್ಕಾರದಿಂದ ಗೋಬ್ಯಾಕ್‌ ಗೌರ್ನರ್‌ ಅಭಿಯಾನ ಚಿಂತನೆ