ಬಂಗಾರಪೇಟೆ ಗಡಿಯಲ್ಲಿ ಮತ್ತೆ ಕಾಡಾನೆ ಹಾವಳಿ

KannadaprabhaNewsNetwork | Published : Jan 7, 2025 12:15 AM

ಸಾರಾಂಶ

ಆನೆಗಳ ದಾಳಿ ನಡೆದು ಸಾವು ನೋವು ನಡೆದರೆ ಮಾತ್ರ ಅರಣ್ಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಾರೆ. ನಾಳೆಯೇ ಆನೆಗಳನ್ನು ಗಡಿ ದಾಟಿಸುವ ಬಗ್ಗೆ ಭರವಸೆ ನೀಡುತ್ತಾರೆ. ಹಾಗೂ ಸರ್ಕಾರ ನೀಡುವ ೫ ಲಕ್ಷ ರು. ಗಳ ಚೆಕ್ ಅನ್ನು ಮೃತರ ಕುಟುಂಬಕ್ಕೆ ನೀಡುತ್ತಾರೆ. ಆದರೆ ಬೆಳೆಗಳು ನಷ್ಟವಾದರೆ ಅರಣ್ಯ ಇಲಾಖೆ ತಲೆಕೆಡಿಸಿಕೊಳ್ಳುವುದೇ ಇಲ್ಲ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ತಾಲೂಕಿನ ಗಡಿ ಭಾಗದ ಗ್ರಾಮಗಳಲ್ಲಿ ನಿಲ್ಲದ ಕಾಡಾನೆಗಳ ಉಪಟಳದಿಂದಾಗಿ ವೀಳ್ಯದೆಲೆ ತೋಟ ಹಾಗೂ ತೆಂಗಿನ ಮರಗಳಿಗೆ ಹಾನಿಯಾಗಿದ್ದು ರೈತರು ಕಂಗಾಲಾಗಿದ್ದಾರೆ. ಆನೆಗಳಿಂದ ನಷ್ಟವಾದರೂ ಸರ್ಕಾರದಿಂದ ಯಾವುದೇ ಪರಿಹಾರ ಸಿಗದೆ ಅಸಹಾಯಕರಾಗಿದ್ದಾರೆ.ತಾಲೂಕಿನ ಕಾಮಸಮುದ್ರ ಹೋಬಳಿಯ ಗಡಿ ಗ್ರಾಮಗಳಲ್ಲಿ ಹಲವು ದಶಕಗಳಿಂದ ಕಾಡಾನೆಗಳ ಹಾಗೂ ಮನುಷ್ಯ ನಡುವೆ ಸಂಘರ್ಷ ಮುಂದುವರಿದಿದೆ. ಆದರೆ ಸರ್ಕಾರದಿಂದ ಮಾತ್ರ ಇದುವೆರಗೂ ಶಾಶ್ವತವಾದ ಪರಿಹರ ಮಾತ್ರ ಅನ್ನದಾತರಿಗೆ ಸಿಕ್ಕಿಲ್ಲವೆಂಬುದು ವಿಪರ್ಯಾಸವೇ ಸರಿ.

ಸತ್ತರೆ ಮಾತ್ರ ಪರಿಹಾರ

ಆನೆಗಳ ದಾಳಿ ನಡೆದು ಸಾವು ನೋವು ನಡೆದರೆ ಮಾತ್ರ ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸುತ್ತದೆ. ನಾಳೆಯೇ ಆನೆಗಳನ್ನು ಗಡಿ ದಾಟಿಸುವ ಬಗ್ಗೆ ಭರವಸೆ ನೀಡುತ್ತದೆ ಹಾಗೂ ಸರ್ಕಾರ ನೀಡುವ ೫ ಲಕ್ಷ ರು. ಗಳ ಚೆಕ್ ಅನ್ನು ಮೃತರ ಕುಟುಂಬಕ್ಕೆ ನೀಡಿ ಹೋದರೆ ಮತ್ತೆ ಮತ್ತೊಂದು ಘಟನೆ ನಡೆದಾಗ ಮಾತ್ರ ಅಧಿಕಾರಿಗಳು ಕಾಣಿಸಿಕೊಳ್ಳುತ್ತಾರೆ. ಬೆಳೆಗಳು ನಷ್ಟವಾದರೆ ಅರಣ್ಯ ಇಲಾಖೆ ತಲೆಕೆಡಿಸಿಕೊಳ್ಳುವುದೇ ಇಲ್ಲ.ವೀಳ್ಯದೆಲೆ ತೋಟ, ತೆಂಗು ನಾಶ

ದೋಣಿಮಡಗು ಗ್ರಾಪಂ ವ್ಯಾಪ್ತಿಯ ಕದರಿನತ್ತ, ಸಾಗರಸಹನಳ್ಳಿ, ಬತ್ತಲಹಳ್ಳಿ, ನರಸೀಮಹಪುರ ಗ್ರಾಮಗಳಲ್ಲಿ ರಾತ್ರಿಯ ವೇಳೆ ನಿತ್ಯ ಆನೆಗಳು ಸಂಚರಿಸಿ ವಾಣಿಜ್ಯ ಬೆಳೆಗಳನ್ನು ತುಳಿದು ನಾಶ ಮಾಡುತ್ತಿವೆ, ಭಾನುವಾರ ರಾತ್ರಿ ಸಹ ಸಾಗರಸನಹಳ್ಳಿ ಗ್ರಾಮದ ಮಂಜುನಾಥ್ ಎಂಬ ರೈತನ ವೀಳ್ಯದೆಲೆ ತೋಟಕ್ಕೆ ನುಗ್ಗಿರುವ ಆನೆಗಳು ತೋಟವನ್ನು ನಾಶ ಮಾಡಿದೆ,ತೆಂಗಿನ ಗಡಿಗಳನ್ನೂ ನೆಲಕಚ್ಚುವಂತೆ ಮಾಡಿದೆ.ಇದರಿಂದ ರೈತನಿಗೆ ನಷ್ಟವಾಗಿದೆ. ಆನೆಗಳನ್ನು ಹಿಮ್ಮಟ್ಟಿಸಲು ಅರಣ್ಯ ಇಲಾಖೆ ನಿತ್ಯ ರಾತ್ರಿಯ ವೇಳೆ ಕಾರ್ಯಚರಣೆ ನಡೆಸುತ್ತಿದೆ, ಆದರೂ ಯಾವುದೇ ಫಲ ಸಿಗುತ್ತಿಲ್ಲ.ಕಾಡಿನಿಂದ ನಾಡಿನತ್ತ ಬಾರದಂತೆ ಅರಣ್ಯ ಸುತ್ತಲೂ ಸೋಲಾರ್ ಫೆನ್ಸಿಂಗ್‌ ಹಾಕಲಾಗಿದೆ, ಆದರೆ ಅದಕ್ಕೆ ಬ್ಯಾಟರಿಗಳೂ ಇಲ್ಲ. ಕೆಲವೆಡೆ ಇದ್ದರೂ ರಾತ್ರಿಯ ವೇಳೆ ಚಾಲು ಮಾಡದೆ ಕಡೆಗಣಿಸುವುದರಿಂದ ಆನೆಗಳು ಸಲೀಸಾಗಿ ಗ್ರಾಮಗಳತ್ತ ನುಗ್ಗುತ್ತವೆ ಎಂಬುದು ರೈತರ ಆರೋಪವಾಗಿದೆ.

ಶಾಶ್ವತ ಪರಿಹಾರ ಕಲ್ಪಿಸಲಿ

ಆನೆಗಳಿಂದ ಅನ್ನದಾತರಿಗೆ ಮುಕ್ತಿ ಕಾಣಿಸಿ ಎಂದು ದಶಕಗಳಿಂದಲೂ ರೈತರು ಸರ್ಕಾರದ ಗಮನ ಸೆಳೆಯಲು ಹಲವು ಹೋರಾಟಗಳನ್ನು ಮಾಡಿದರು.ಆದರೆ ಸರ್ಕಾರಕ್ಕೆ ರೈತರ ಕೂಗು ಮಾತ್ರ ಕೇಳಿಸುತ್ತಿಲ್ಲ. ಪ್ರಾಣ ಹಾನಿ ಸಂಭವಿಸಿದರೆ ನಷ್ಟ ಪರಿಹಾರ ಕೊಟ್ಟರೆ ಸಮಸ್ಯೆ ನಿವಾರಣೆಯಾದಂತೆ ಎಂಬ ನಿರ್ಧಾರಕ್ಕೆ ಸರ್ಕಾರ ಬಂದಂತಿದೆ. ಅದರಿಂದಲೇ ಆನೆಗಳಿಂದ ಶಾಶ್ವತವಾದ ಪರಿಹಾರ ಕಲ್ಪಿಸಲು ಸರ್ಕಾರ ಮುಂದಾಗಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ.ಆನೆಗಳ ಹಾವಳಿಗೆ ಹೆದರಿ ಅನೇಕ ರೈತರು ಕೃಷಿ ಮಾಡುವುದನ್ನೇ ಬಿಟ್ಟು ಪರ್ಯಾಯ ಕಸುಬನ್ನು ಅವಳಂಬಿತರಾಗಿದ್ದಾರೆ. ಇತ್ತೀಚೆಗೆ ತಮಿಳುನಾಡಿನಿಂದ ಗಡಿ ಗ್ರಾಮಗಳತ್ತ ೧೨ ಆನೆಗಳು ಬಂದಿವೆ, ರೈತರು ಎಚ್ಚರವಾಗಿ ಎಂದು ಇಲಾಖೆ ಅರಿವು ಮೂಡಿಸಿದೆ,ಆದರೆ ಇದಕ್ಕೆ ಕೊನೆ ಎಂದು ಎಂಬ ಪ್ರಶ್ನೆಗೆ ಉತ್ತರ ಇಲ್ಲದಂತಾಗಿದೆ.

Share this article