ಹಿರಿಯ ವಕೀಲರಲ್ಲಿ ಕಾಣುವ ತಾಳ್ಮೆ ಕಿರಿಯರಲ್ಲಿ ಇಲ್ಲ: ನ್ಯಾ. ಎಂ.ಶಾಂತಣ್ಣ

KannadaprabhaNewsNetwork | Updated : Dec 25 2023, 01:32 AM IST

ಸಾರಾಂಶ

ಪ್ರಕರಣಗಳನ್ನು ನ್ಯಾಯಾಲಯದ ಮುಂದೆ ತರುವ ಪರಿಣಾಮಕಾರಿ ಪ್ರಯತ್ನದಲ್ಲಿ ಹಿರಿಯ ವಕೀಲರಲ್ಲಿರುವ ತಾಳ್ಮೆ, ಪರಿಣತಿ ಕಿರಿಯ ವಕೀಲರಲ್ಲಿ ಕಂಡು ಬರುತ್ತಿಲ್ಲ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಂ.ಶಾಂತಣ್ಣ ಆಳ್ವ ಅಸಮಾಧಾನ ವ್ಯಕ್ತಪಡಿಸಿದರು.

-ಚಿಕ್ಕಮಗಳೂರಿನಲ್ಲಿ ವಕೀಲರ ದಿನಾಚರಣೆ, ವಕೀಲರ ಬದ್ಧತೆಯಿಂದ ಕಾರ್ಯನಿರ್ವಹಿಸಲು ಕರೆಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪ್ರಕರಣಗಳನ್ನು ನ್ಯಾಯಾಲಯದ ಮುಂದೆ ತರುವ ಪರಿಣಾಮಕಾರಿ ಪ್ರಯತ್ನದಲ್ಲಿ ಹಿರಿಯ ವಕೀಲರಲ್ಲಿರುವ ತಾಳ್ಮೆ, ಪರಿಣತಿ ಕಿರಿಯ ವಕೀಲರಲ್ಲಿ ಕಂಡು ಬರುತ್ತಿಲ್ಲ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಂ.ಶಾಂತಣ್ಣ ಆಳ್ವ ಅಸಮಾಧಾನ ವ್ಯಕ್ತಪಡಿಸಿದರು.

ಚಿಕ್ಕಮಗಳೂರು ವಕೀಲರ ಸಂಘದ ಆಶ್ರಯದಲ್ಲಿ ನಡೆದ ವಕೀಲರ ದಿನಾಚರಣೆಯಲ್ಲಿ ಮಾತನಾಡಿ, ನಮ್ಮ ವಕೀಲ ಮಿತ್ರರು ಕಲಿಕೆ ಮರೆಯುತ್ತಿರುವುದು ಕಂಡು ಬರುತ್ತಿದೆ. ನಿತ್ಯ ಒಂದು ಗಂಟೆ ಕಾಲ ಕಾನೂನು ವಿಷಯಗಳನ್ನು ಅಧ್ಯಯನ ಮಾಡಿ ಅರಿತುಕೊಳ್ಳುವುದು ಅಗತ್ಯ ಎಂದು ಸಲಹೆ ನೀಡಿದರು.

ಕಲಿಕೆ ವಕೀಲಿಕೆಯ ಬಹು ಮುಖ್ಯ ಭಾಗ. ಅದನ್ನು ಯಾವುದೇ ಕಾರಣಕ್ಕೂ ಬಿಡಬಾರದು. ನ್ಯಾಯ ಪಡೆಯುವ ಸಲುವಾಗಿ ಕಕ್ಷಿದಾರರು ವಕೀಲರ ಮೂಲಕವೇ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ವಕೀಲರು ಯಾವ ರೀತಿ ಪ್ರಕರಣವನ್ನು ನ್ಯಾಯಾಲಯದ ಮುಂದಿಡುತ್ತಾರೋ ಪ್ರಕರಣದ ಪರಿಣಾಮ ಅದನ್ನೇ ಅವಲಂಬಿಸಿರುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ಪುಷ್ಪಾಂಜಲಿ ಮಾತನಾಡಿ, ನ್ಯಾಯಾಂಗದ ಬಗ್ಗೆ ಅಲ್ಲಲ್ಲಿ ಅಪಸ್ವರ ಕೇಳಿ ಬರುತ್ತಿದ್ದು, ಅದಕ್ಕೆ ಅವಕಾಶ ನೀಡದಂತೆ ಬದ್ಧತೆಯಿಂದ ಕಾರ್ಯ ನಿರ್ವಹಿಸುವುದು ನಮ್ಮಕರ್ತವ್ಯ. ವಕೀಲರು, ನ್ಯಾಯಾಧೀಶರು ಹಾಗೂ ಸಿಬ್ಬಂದಿ ಪರಸ್ಪರ ಸಹಕಾರ, ಸೌಹಾರ್ದತೆ ಯಿಂದ ಕಾರ್ಯ ನಿರ್ವಹಿಸಿದರೆ ನ್ಯಾಯಾಂಗ ವ್ಯವಸ್ಥೆಗೆ ಘನತೆ ಬರುತ್ತದೆ ಎಂದರು.

ಹಿರಿಯ ವಕೀಲ ಟಿ.ಕೆ.ವಿಶ್ವನಾಥ್ ಮಾತನಾಡಿ, ವಕೀಲರು ಸಿದ್ಧಪಡಿಸುವ ಮನವಿಗಳಾಗಲಿ, ದೂರುಗಳಾಗಲಿ ಸ್ಪಷ್ಟವಾಗಿರ ಬೇಕು, ವಿಚಾರಗಳನ್ನು ಎದುರು ಹೇಳಲಾಗದಿದ್ದರೆ ಅದನ್ನು ಬರವಣಿಗೆಯಲ್ಲೂ ನೀಡಬಹುದು. ಆದ್ದರಿಂದ ನಮ್ಮ ಹಾಗೂ ನ್ಯಾಯಾಲಯದ ಸಮಯ ಉಳಿಯುತ್ತದೆ. ವಕೀಲರು ದಿನವಹಿ 5 ಗಂಟೆ ಕಾಲ ಅಧ್ಯಯನ ಮಾಡುವುದು ಅಗತ್ಯ. ಕಠಿಣ ಪರಿಶ್ರಮ ಅನುಸರಿಸದಿದ್ದರೆ ಯಶಸ್ಸು ನಮ್ಮ ಕೈ ಹಿಡಿಯುವುದಿಲ್ಲ ಎಂದು ಸಲಹೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಎಚ್.ಎಂ.ಸುಧಾಕರ್ ಮಾತನಾಡಿ, ವಕೀಲಿಕೆ ಅತ್ಯಂತ ಗೌರವಯುತ ವೃತ್ತಿ. ಸಂವಿಧಾನ ರಚನೆಯಿಂದ ಹಿಡಿದು ದೇಶಾದ್ಯಂತ ಯಾವುದೇ ಕಾನೂನು ರಚನೆಯಾದಲ್ಲಿ, ದೇಶದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸುವುದರಲ್ಲಿ ವಕೀಲರ ಪಾತ್ರ ಮಹತ್ವದ್ದು. ಈ ವೃತ್ತಿಯನ್ನು ಗೌರವದಿಂದ ಮುಂದುವರಿಸುವುದು ಅಗತ್ಯ ಎಂದರು.

ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯದರ್ಶಿ ಸಿ.ಬಿ.ರುದ್ರೇಶ್, ಖಜಾಂಚಿ ಎಚ್.ಟಿ.ಸುನೀಲ್‌ಕುಮಾರ್, ಜಂಟಿ ಕಾರ್ಯದರ್ಶಿ ಕೆ.ಆರ್.ಪ್ರದೀಪ್‌ ಅರುಂಧತಿ , ಉಪಾಧ್ಯಕ್ಷ ಕೆ.ಬಿ.ನಂದೀಶ್‌ , ರಘುನಾಥ್ ಕಾರ್ಯಕ್ರಮದಲ್ಲಿದ್ದರು.23 ಕೆಸಿಕೆಎಂ 1

ಚಿಕ್ಕಮಗಳೂರು ವಕೀಲರ ಸಂಘದ ಆಶ್ರಯದಲ್ಲಿ ನಡೆದ ವಕೀಲರ ದಿನಾಚರಣೆಯನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ಪುಷ್ಪಾಂಜಲಿ ಉದ್ಘಾಟಿಸಿದರು. ಎಂ.ಶಾಂತಣ್ಣ ಆಳ್ವ, ಎಚ್.ಎಂ.ಸುಧಾಕರ್, ಟಿ.ಕೆ.ವಿಶ್ವನಾಥ್ ಇದ್ದರು.

Share this article