ಆಸ್ಪತ್ರೆ, ಶಾಲಾ ಆವರಣ ಕ್ಯಾಂಟೀನ್‌ಗಳಲ್ಲಿ ಜಂಕ್‌ ಫುಡ್‌ ಬದಲು ಆರೋಗ್ಯಕರ ಆಹಾರ

KannadaprabhaNewsNetwork |  
Published : Jul 19, 2026, 03:45 AM IST
ಸಚಿವ ಯು.ಟಿ.ಖಾದರ್‌ ಸಭೆ ನಡೆಸುತ್ತಿರುವುದು  | Kannada Prabha

ಸಾರಾಂಶ

ರಾಜ್ಯದ ಎಲ್ಲ ಆಸ್ಪತ್ರೆ ಹಾಗೂ ಶಾಲೆಗಳ ಆವರಣದಲ್ಲಿರುವ ಕ್ಯಾಂಟೀನ್‌ಗಳಲ್ಲಿ ಆರೋಗ್ಯಕರ ಆಹಾರಗಳನ್ನು ಮಾತ್ರ ಕನಿಷ್ಠ ದರದಲ್ಲಿ ಮಾರಾಟ ಮಾಡಬೇಕು. ಇದನ್ನು ಹೊರತುಪಡಿಸಿ ಯಾವುದೇ ರೀತಿಯ ಜಂಕ್ ಫುಡ್‌ಗಳನ್ನು ಮಾರಾಟ ಮಾಡುವಂತಿಲ್ಲ. ರಾಜ್ಯಾದ್ಯಂತ ಈ ನಿಯಮ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು.

ಮಂಗಳೂರು: ರಾಜ್ಯದ ಎಲ್ಲ ಆಸ್ಪತ್ರೆ ಹಾಗೂ ಶಾಲೆಗಳ ಆವರಣದಲ್ಲಿರುವ ಕ್ಯಾಂಟೀನ್‌ಗಳಲ್ಲಿ ಆರೋಗ್ಯಕರ ಆಹಾರಗಳನ್ನು ಮಾತ್ರ ಕನಿಷ್ಠ ದರದಲ್ಲಿ ಮಾರಾಟ ಮಾಡಬೇಕು. ಇದನ್ನು ಹೊರತುಪಡಿಸಿ ಯಾವುದೇ ರೀತಿಯ ಜಂಕ್ ಫುಡ್‌ಗಳನ್ನು ಮಾರಾಟ ಮಾಡುವಂತಿಲ್ಲ. ರಾಜ್ಯಾದ್ಯಂತ ಈ ನಿಯಮ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು.

ಮಂಗಳೂರಿನ ವೆನ್ಲಾಕ್‌ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಕುಂದುಕೊರತೆ ಹಾಗೂ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಲ್ಲ ಆಸ್ಪತ್ರೆಗಳ ಹಾಗೂ ಶಾಲೆಗಳ ಕ್ಯಾಂಟೀನ್‌ಗಳಲ್ಲಿ ಜಂಕ್‌ ಆಹಾರ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ವಿಪರೀತವಾಗಿ ಅವಲಂಬನೆಯಾಗಿರುವುದು ಕೂಡ ಸಾಕಷ್ಟು ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಕ್ಯಾನ್ಸರ್, ಮೂತ್ರಪಿಂಡ ಮೊದಲಾದ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಹೆಚ್ಚುತ್ತಿವೆ. ಇದನ್ನು ಶಾಲಾ ಅಥವಾ ಆಸ್ಪತ್ರೆ ಹಂತದಲ್ಲೇ ನಿಯಂತ್ರಿಸಿದರೆ, ಕನಿಷ್ಠ ದೇಹದ ಆರೋಗ್ಯವನ್ನೂದರೂ ಕಾಪಾಡಲು ಸಾಧ್ಯವಿದೆ. ಅದಕ್ಕಾಗಿ ಆಸ್ಪತ್ರೆ ಮಾತ್ರವಲ್ಲ ಒಂದರಿಂದ 10ನೇ ತರಗತಿವರೆಗೆ ಇರುವ ಶಾಲೆಗಳ ಸುತ್ತಮುತ್ತ ಕೂಡ ಜಂಕ್ ಫುಡ್ ಮಾರಾಟಕ್ಕೆ ಅವಕಾಶ ನೀಡದಂತೆ ನಿಯಮ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದರು.

ಇದಕ್ಕೆ ಪೂರಕವಾಗಿ ಆಹಾರ ಮತ್ತು ಸುರಕ್ಷತಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ತೀರ್ಮಾನಿಸಲಾಗಿದೆ. ಮಾಲ್‌ ಸೇರಿದಂತೆ ವಿವಿಧ ಕಡೆಗಳಲ್ಲಿ ಮಾರಾಟ ಮಾಡುವ ಆಹಾರ ವಸ್ತುಗಳ ಗುಣಮಟ್ಟವನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಿ, ಗುಣಮಟ್ಟ ರಹಿತ ಆಹಾರ ವಸ್ತುಗಳ ಮಾರಾಟವನ್ನು ನಿರ್ಬಂಧಿಸಲಾಗುವುದು. ಮಾತ್ರವಲ್ಲ ಅಂತಹವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರಿನಲ್ಲಿ ಹಾಲಿ ಇರುವ ಆಹಾರ ಗುಣಮಟ್ಟ ತಪಾಸಣಾ ಲ್ಯಾಬ್‌ನ್ನು ಅತ್ಯುತ್ಕೃಷ್ಟ ಮಟ್ಟದಲ್ಲಿ ಮೇಲ್ದರ್ಜೆಗೆ ಪಿಪಿಪಿ ಮಾದರಿಯಲ್ಲಿ ಏರಿಸಲು ನಿರ್ಧರಿಸಲಾಗಿದೆ. ಅಲ್ಲಿ ಆಹಾರ ವಸ್ತುಗಳ ತಪಾಸಣೆ ನಡೆಸಿ ನೀಡುವ ವರದಿಯನ್ನು ಸುಪ್ರೀಂ ಕೋರ್ಟ್‌ ಕೂಡ ಸಮ್ಮತಿಸುವಂತೆ ಇರಬೇಕು ಎಂದರು.

ವೈದ್ಯರ ವರ್ಗಾವಣಾ ಕೌನ್ಸೆಲಿಂಗ್‌ ನಿಯಮಕ್ಕೆ ತಿದ್ದುಪಡಿ: ಸರ್ಕಾರಿ ಆಸ್ಪತ್ರೆಗಳ ವೈದ್ಯರ ವರ್ಗಾವಣೆಗೆ ಸಂಬಂಧಿಸಿದ ಕೌನ್ಸೆಲಿಂಗ್‌ ನಿಯಮಕ್ಕೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್‌ ಹೇಳಿದ್ದಾರೆ.

ಮಂಗಳೂರಿನ ವೆನ್ಲಾಕ್‌ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ವಿಚಾರ ಹೇಳಿದರು.

ಕಳೆದ ಬಾರಿ ಜಾರಿಗೆ ತಂದಿರುವ ಕೌನ್ಸೆಲಿಂಗ್‌ ನಿಯಮದಂತೆ ವೈದ್ಯಾಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಪ್ರಸಕ್ತ ಅದೇ ಮಾನದಂಡದಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆದಿದ್ದು, ಪೂರ್ಣಗೊಳ್ಳುವ ಹಂತದಲ್ಲಿದೆ. ಹಾಗಾಗಿ ಈ ಹಂತದಲ್ಲಿ ಏನೂ ಬದಲಾವಣೆ ಮಾಡುವುದಿಲ್ಲ. ಉತ್ತಮ ವೈದ್ಯಕೀಯ ಸೌಲಭ್ಯ ಸಿಗುವಂತಾಗಲು ಕೌನ್ಸೆಲಿಂಗ್‌ ನಿಯಮದಲ್ಲಿ ತಿದ್ದುಪಡಿ ತರಬೇಕಾಗಿದೆ. ಈ ಬಗ್ಗೆ ಪರಾಮರ್ಶೆ ನಡೆಸುವಂತೆ ಇಲಾಖೆಯ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ. ಮುಂದಿನ ವರ್ಗಾವಣೆ ವೇಳೆಗೆ ಕೌನ್ಸೆಲಿಂಗ್‌ ನಿಯಮಕ್ಕೆ ತಿದ್ದುಪಡಿ ತರಲಾಗುತ್ತದೆ ಎಂದು ಸಚಿವ ಯು.ಟಿ. ಖಾದರ್‌ ಹೇಳಿದರು.

ಹೀಲಿಂಗ್‌ ಕೆಮಿಕಲ್‌ ಸಮಸ್ಯೆ:

ಎಂಆರ್‌ಐ ಸ್ಕ್ಯಾನಿಂಗ್‌ಗೆ ಬ‍ಳಸುವ ಹೀಲಿಯಂ ಕೆಮಿಕಲ್‌ ಈಗ ಮಧ್ಯಪ್ರಾಚ್ಯ ಯುದ್ಧದ ಸನ್ನಿವೇಶದಿಂದ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಇದರಿಂದ ಹಳೆ ಮಿಷಿನ್‌ನಲ್ಲಿ ಸ್ಕ್ಯಾನಿಂಗ್‌ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಸಿಬ್ಬಂದಿಯ ಅಹವಾಲು ಆಲಿಸಿದ ಸಚಿವ ಯು.ಟಿ. ಖಾದರ್‌, ರೋಗಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ವೆನ್ಲಾಕ್‌ ಆಸ್ಪತ್ರೆಯಲ್ಲಿ ನೀಡುವ ದರದಲ್ಲೇ ಕೆಎಂಸಿ ಆಸ್ಪತ್ರೆಯವರು ಎಂಆರ್‌ಐ ಸ್ಕ್ಯಾನಿಂಗ್‌ ಮಾಡಿ ಕೊಡುವಂತೆ ಸೂಚನೆ ನೀಡಿದರು.ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ, ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ., ಜಿ.ಪಂ. ಸಿಇಒ ವಿನಾಯಕ ಕರ್ಭಾರಿ, ಡಿಎಚ್‌ಒ ಡಾ. ತಿಮ್ಮಯ್ಯ, ವೆನ್‌ಲಾಕ್‌ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಪ್ರಕಾಶ್‌ ಇದ್ದರು.ಚಿಕಿತ್ಸೆ ಉಚಿತವಾದರೂ ಡಿಸ್ಚಾರ್ಜ್‌ ವೇಳೆ ಬಿಲ್‌!: ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಚಿತವಾಗಿಯೇ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಚಿಕಿತ್ಸೆಗೆ ತಗಲುವ ವೆಚ್ಚ ಎಷ್ಟು, ಅದಕ್ಕಾಗಿ ಸರ್ಕಾರ ಎಷ್ಟು ಶ್ರಮ ವಹಿಸಿದೆ, ಓರ್ವ ರೋಗಿಗೆ ಎಷ್ಟು ಮೊತ್ತ ಖರ್ಚು ಮಾಡುತ್ತದೆ ಎಂಬುದು ದಾಖಲಾಗುವ ಎಲ್ಲ ರೋಗಿಗಳಿಗೂ ಗೊತ್ತಿರಬೇಕು. ಅದಕ್ಕಾಗಿ ಪ್ರತಿಯೊಬ್ಬ ರೋಗಿಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೊರಗೆ ಹೋಗುವಾಗ ಅವರ ಚಿಕಿತ್ಸೆಗೆ ಒಟ್ಟು ಎಷ್ಟು ವೆಚ್ಚ ತಗುಲಿದೆ ಎಂಬ ಬಗ್ಗೆ ಸಮಗ್ರ ಬಿಲ್‌ ನೀಡಲಾಗುತ್ತದೆ. ಆದರೆ ಮೊತ್ತ ಪಡೆಯುವುದಿಲ್ಲ, ಅದು ಮೊತ್ತ ಪಾವತಿ ರಹಿತ ಬಿಲ್‌ ಆಗಿರುತ್ತದೆ. ಈ ಮಾದರಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಿಂದಲೇ ಆರಂಭವಾಗಲಿದ್ದು, ಇದನ್ನು ರಾಜ್ಯದ ಎಲ್ಲ ಕಡೆಗಳಿಗೂ ವಿಸ್ತರಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀಟ್ : ವಿವೇಕಾನಂದ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ಅತ್ಯುನ್ನತ ಸಾಧನೆ
ನೀಟ್- 2026 ಸಾಧಕರಿಗೆ ಜ್ಞಾನಸುಧಾ ಟ್ರಸ್ಟ್‌ನಿಂದ ಪ್ರೋತ್ಸಾಹಧನ ಘೋಷಣೆ