- ಹೊನ್ನಾಳಿಯಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಶಿಬಿರ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಭಾರತದ ಪುರಾತನ ಹಾಗೂ ಸಮತೋಲಿತ ಆಹಾರ ಪದ್ಧತಿಯನ್ನು ನಿರ್ಲಕ್ಷಿಸಿ ಪಾಶ್ಚಾತ್ಯರಂತೆ ಜಂಕ್ ಫುಡ್ ಸಂಸ್ಕೃತಿಗೆ ನಮ್ಮ ಯುವಜನತೆ ಬಲಿ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹರಪನಹಳ್ಳಿಯ ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್ ಪಾದೇಕಲ್ ಅಭಿಪ್ರಾಯಪಟ್ಟರು.ಹೊನ್ನಾಳಿ ಹಿರೇಕಲ್ಮಠದ ಶ್ರೀ ಚನ್ನಪ್ಪಸ್ವಾಮಿ ಜನ ಕಲ್ಯಾಣ ಸೇವಾ ಟ್ರಸ್ಟ್ ಹಾಗೂ ತುಂಗಭದ್ರಾ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಭಾನುವಾರ ಜನನಿ ಆಸ್ಪತ್ರೆ ಆಯೋಜಿಸಿದ್ದ ಉಚಿತ ಯೋಗ ಮತ್ತು ಪ್ರಕೃತಿ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನನಿ ಸಂಸ್ಥೆಯ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ಮುಖ್ಯಸ್ಥ ಉದಯಶಂಕರ ಭಟ್ ಮಾತನಾಡಿ, ಪ್ರಕೃತಿ ಚಿಕಿತ್ಸೆ ಎಂದರೆ ನಮ್ಮ ಮರೆತುಹೋಗಿರುವ ಜೀವನಕ್ರಮ ಮತ್ತೆ ನೆನಪಿಸುವುದು. ಪಂಚಭೂತಗಳಿಂದ ರಚನೆ ಆಗಿರುವ ಶರೀರಕ್ಕೆ ಅಸ್ವಸ್ಥತೆ ಕಾಡಿದಾಗ ಅದರ ಚಿಕಿತ್ಸೆಯೂ ಪಂಚಭೂತಗಳಲ್ಲೇ ಅಡಗಿದೆ ಎಂಬ ಮೂಲತತ್ವ ಆಧರಿಸಿದ ಈ ಚಿಕಿತ್ಸಾ ಪದ್ಧತಿ ಇತರ ಎಲ್ಲ ವೈದ್ಯಪದ್ಧತಿಗಳಿಗೆ ಪೂರಕ ಎಂದು ವಿಶ್ಲೇಷಿಸಿದರು.
ತುಂಗಭದ್ರಾ ಲಯನ್ಸ್ ಕ್ಲಬ್ ಅಧ್ಯಕ್ಷ ಅಶೋಕ್ ಕುಮಾರ್ ತರಗನಹಳ್ಳಿ, ಕಾರ್ಯದರ್ಶಿ ಬಸವರಾಜ ಬಲಮುರಿ, ಖಜಾಂಚಿ ವಿನಾಯಕ ಶೆಟ್ಟರು, ಸದಸ್ಯರಾದ ಶಿವಕುಮಾರ್ ಚಕ್ಕಡಿ, ಮುರುಗೇಶ್ ತರಗನಹಳ್ಳಿ, ಯೋಗ ಪ್ರಾಧ್ಯಾಪಕ ಜಯರಾಂ ಮತ್ತಿತರರು ಉಪಸ್ಥಿತರಿದ್ದರು. ತಜ್ಞ ವೈದ್ಯ ಡಾ.ರಾಜೇಶ್ ಪಾದೇಕಲ್ ನೇತೃತ್ವದಲ್ಲಿ ಡಾ.ನಿಶ್ಚಿತ್, ಡಾ.ಮಾನಸ, ಡಾ.ಅಭಿರಾಮಿ, ಡಾ.ಯಶಸ್ವಿ ತಪಾಸಣೆ ನೆರವೇರಿಸಿದರು. 100ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದರು.
-12ಎಚ್.ಎಲ್.ಐ1: